PRESS...ಅಂತಾ ಹಾಕ್ಕೊಳ್ಳಿ ಸಾರ್...!


ಅವತ್ತೊಂದ್ ನಡುರಾತ್ರಿ ಒಂದೂವರೆ ಗಂಟೆ ಆಗಿತ್ತು. ರಾತ್ರಿ ಪಾಳಿ ಕೆಲಸಾ ಮುಗಿಸಿಕೊಂಡು ಹೊಂಟಿದ್ದ ಹೊತ್ತದು. ಒಂದು ಸಿಗರೇಟು ಸುಟ್ಟುಹಾಕಿ; ಬೈಕ್ ಹತ್ತಿಕೊಂಡು ಮನಿಕಡಿಗೆ ಹೊಂಟಿದ್ದೆ. ನಮ್ಮನಿ ಇರೋದು ಇಸ್ರೋ ಬಡಾವಣಿನ್ಯಾಗ. ಮಹಾತ್ಮಾ ಗಾಂಧಿ ರಸ್ತೆಯಿಂದ ಸುಮಾರು ಹದಿನಾಲ್ಕು ಕಿಲೋ ಮೀಟರ್ ದೂರ ಐತಿ ನಮ್ಮ ಮನಿ. ಅಲ್ಲಿಗೆ ಹೊಂಟಿದ್ದೆ; ಆಗ ಕೆ.ಆರ್. ರಸ್ತೆದಾಗ ಮೂರು ಪೊಲೀಸಿನೋರು ನಿಂತಿದ್ರು.

ನಾ ಹತ್ರಕ್ಕ ಹೋಗತಿದ್ದಂಗನ ಅಡ್ಡ ಕೋಲ್ ಹಾಕಿದ್ರು. ನಾನು ಮೆಲ್ಲಗ ಗಾಡಿ ನಿಲ್ಲಿಸಿದೆ. ಪೊಲೀಸ್ನೋರು ಅಂದಮ್ಯಾಗ ರಾತ್ರಿ ಹ್ಯಾಂಗ ಗತ್ತಿನ್ಯಾಗ ಮಾತಡಬೇಕೋ ಹಂಗ ಗತ್ತಿನ್ಯಾಗ "ಗಾಡಿ ನಂಬರ್ ಹೇಳ್ರಿ" ಅಂದಾ ಒಬ್ಬಾವ ಪೊಲೀಸು. ನಾನು ಬಾಯಿ ಪಾಠಾ ಮಾಡಿದವನಹಾಂಗ ಹೇಳಿದೆ "ಕೆ.ಎ. 03; ಇಡಿ 1823" ಅಂತ. ಅಷ್ಟಕ್ಕ ಬಿಟ್ಟು ಬಿಡತಾರ ಅಂದುಕೊಂಡಿದ್ದೆ. ಆದ್ರ ಅವರೆಲ್ಲಿ ಬಿಡತಾರ. ಏನೋ ಒಂದಿಷ್ಟು ವಸೂಲಿ ಮಾಡಬೇಕು ಅಂತ ಮನಸ್ಸು ಮಾಡಿಕೊಂಡವರಹಾಂಗ ಅವರ ಮುಖಾ ಕಾಣಿಸ್ತು.

ಇನ್ನೊಬ್ಬ ಪೊಲೀಸಾ ಕೇಳಿದಾ "ಲೈಸನ್ಸ್ ತಗೀರಿ; ಲೈಸನ್ಸ್ ಇದೆಯಾ" ಅಂತಾ. ನಾನು ಟಕ್ಕಂತ ಪರ್ಸ್ ತಗದು, ಲೈಸನ್ಸ್ ತೋರಿಸ್ದೆ. ಅವಂಗ ನಿರಾಸೆ ಆತು. ಇಲ್ಲೂ ಬೀಳಲಿಲ್ಲಲ್ಲಾ ಬಲೀಗೆ ಅಂತಾ ಅಂದುಕೊಂಡು "ಇನ್ಸೂರೆನ್ಸ್ ತೋರಿಸಿ" ಅಂದಾ. ನಾನು ನನ್ನ ಪ್ಯಾಂಟ್ ಹಿಂದಿನ ಕಿಸೇನ್ಯಾಗ ಇಟ್ಟಿದ್ದ ಇನ್ಸೂರೆನ್ಸ್ ತಗದೆ. ಅದರಾಗ ಇನ್ನೂ ನಾಲ್ಕು ತಿಂಗಳ ವ್ಯಾಲಿಡಿಟಿ ಇತ್ತು. "ಆರ್.ಸಿ. ಬುಕ್ಕು ತೋರಸಿ... ಎಮಿಷನ್ ತೋರಿಸಿ..." ಎಂದು ಹೇಳಿದ. ಅಷ್ಟರ ನಡುವೆಯೇ ಒಬ್ಬ ಪೊಲೀಸ್ ಕೇಳಿದಾ "ಡ್ರಿಂಕ್ಸ್ ಮಾಡಿದಿರಾ" ಅಂತ. ನಾನು ಹೇಳಿದೆ "ಇಲ್ರಿ ಸರ; ರಾತ್ರಿ ಪಾಳಿ ಮುಗಿಸಿಕೊಂಡ್ ಮನೀಗೆ ಹೊಂಟೀನಿ" ಅಂತ.

ಇಷ್ಟು ಹೇಳಿದ ಮ್ಯಾಗ "ರಾತ್ರಿ ಪಾಳೀನಾ? ಕಾಲ್ ಸೆಂಟರ್ ಕೆಲಸಾನಾ..." ಎಂದು ಒಬ್ಬ ಎತ್ತರ ಕಾಯದ ಗತ್ತಿನ ಪೊಲೀಸ್ ತನ್ನ ಕೋಲನ್ನ ನನ್ನ ಬೈಕ್ ಹ್ಯಾಂಡಲಿನ ಮ್ಯಾಗ ಟಕಾ ಟಕಾ ಕುಟ್ಟಿಕೊಂಡ ಕೇಳಿದಾ. ನಾನು "ಇಲ್ರಿ ಸರ; ಪ್ರಜಾವಾಣಿ ಪೇಪರಿನ್ಯಾಗ..." ಅಂತ ಹೇಳೋ ಅಷ್ಟರಾಗನ ಮಾತು ಅರ್ಧಕ್ಕ ಕಟ್ ಮಾಡಿದ ಆ ಪೊಲೀಸಾ; ಭಾರಿ ವಿನಮ್ರ ಆಗಿ "ಮೊದಲ ಪ್ರೆಸ್ ಅಂತ ಹೇಳಬೇಕಿತ್ತು ಸಾರ್" ಎಂದ.

ಅಷ್ಟ ಅಲ್ಲ; ಬೈಕಿಗೆ "ಪ್ರೆಸ್ ಅಂತಾ ಹಾಕ್ಕೊಳ್ಳಿ ಸಾರ್" ಅಂತಾ ಸಲಹೆನೂ ಕೊಟ್ಟ. ನಾನು ನಕ್ಕು ಹೇಳಿದೆ "ಈಗ ಎಲ್ಲಾರೂ ಪ್ರೆಸ್ ಅಂತ ಹಾಕ್ಕೊತಾರ. ನಾವು ಎಲ್ಲಾ ರೀತಿನ್ಯಾಗ ಸರಿ ಇದ್ದರ ಪ್ರೆಸ್ ಅಂತ ಹಾಕ್ಕೋಳೋ ಅಗತ್ಯಾನ ಇಲ್ಲ. ರಸ್ತೆ ನಿಯಮಾ ಪಾಲಿಸಿಕೊಂಡು ಗಾಡಿ ಓಡಿಸಿದ್ರ ಪ್ರೆಸ್ ಅಂತ ಲೇಬಲ್ ಅಂಟಿಸಿಕೊಳ್ಳೋದು ಬೇಕಿಲ್ಲಾ" ಅಂದೆ. ಅದಕ್ಕ ಆ ಮೂರು ಪೊಲೀಸ್ರು "ನೀವೂ ಹೇಳೋದು ಸರಿ. ಮೊನ್ನೆ ನೋಡ್ರಿ ಗಳ್ಳರ ಗುಂಪು ಅದೆಷ್ಟೊಂದು ಬೈಕ್ ಕಳುವು ಮಾಡಿ ಪ್ರೆಸ್ ಅಂತ ಹಾಕ್ಕೊಂಡು, ಆಮ್ಯಾಗ ಸಿಕ್ಕೊಂಡು ಬಿದ್ದಾರ" ಎಂದು ಕಥಿ ಹೇಳಿದ್ರು.

ನಾನು ಅವರ ಕಥಿ ಕೇಳಿಕೊಳ್ತನ ನನ್ನ ಗಾಡಿ ಡಾಕ್ಯೂಮೆಂಟ್ ಎಲ್ಲಾನೂ ಜೋಡಿಸಿ ಜೇಬಿನ್ಯಾಗ ತೂರಿಸಿಕೊಂಡೆ. ಮತ್ತೆ ಗಾಡಿ ಹತ್ತಿ ಹೊಂಟಾಗ ಯೋಚನೆ ಮಾಡ್ದೆ. "ಪ್ರೆಸ್ ಅಂತ ಹಾಕ್ಕೊಂಡು ನಿಯಮಾ ಮುರದ್ರೂ ಹಿಡಿಯಂಗಿಲ್ಲೇನು ಈ ಪೊಲೀಸ್ರು?" ಅಂತ. ನನ್ನ ಪ್ರಕಾರ ಪ್ರೆಸ್ ಅಂತ ಸ್ಟಿಕರ್ ಅಂಟಿಸಿಕೊಂಡವರನ್ನೂ ಪೊಲೀಸರು ಹಿಡಿದು ದಾಖಲೆ ಪರಿಶೀಲನೆ ಮಾಡಬೇಕು. ಆಗ ಪ್ರೆಸ್ ಅಂತ ಹೇಳಿಕೊಂಡು ನಿಯಮಾ ಮುರಿಯೋರು ಕಡಿಮಿ ಆಕ್ಕಾರ.

ನಾನಂತೂ ನನ್ನ ಬೈಕ್ ತಗೊಂಡು ಹತ್ತು ವರ್ಷಾ ಆತು. ಯಾವತ್ತೂ ಪ್ರೆಸ್ ಅಂತ ಸ್ಟಿಕ್ಕರ್ ಹಾಕ್ಕೊಂಡಿಲ್ಲಾ. ಯಾಕಂದ್ರ ನನಗ ಅದು ಅಗತ್ಯಾನೂ ಇಲ್ಲಾ. ನಾನು ನಿಯಮಾ ಮುರುದು ಬೈಕ್ ಯಾವತ್ತೂ ಓಡಿಸೋದಿಲ್ಲಾ. ಕುಡುದಂತೂ ಬೈಕ್ ಹತ್ತಂಗಿಲ್ಲಾ. ಎಲ್ಲಾ ಡಾಕ್ಯೂಮೆಂಟ್ ಅನ್ನ ಅಪ್ಡೇಟ್ ಆಗಿ ಇಟ್ಟುಕೊಂಡಿರ್ತೀನಿ. ಅಂದಮ್ಯಾಗ ಯಾಕ "ಪ್ರೆಸ್" ಅಂತ ಹಾಕ್ಕೋಬೇಕು...?