ಕುಹೂ...ಕುಹೂ...ಕಾಗೆ ಮಮ್ಮಿ....!


ಪ್ರಕೃತಿನ್ಯಾಗ ತಾಯ್ತನದ ವಿಚಿತ್ರಗಳು ಸಾಕಷ್ಟು ಅದಾವು. ಅದರೊಳಗ ಭಾರಿ ವಿಶಿಷ್ಠ ಅನ್ನಸೋದು ಮಾತ್ರ ಕಾಗೆ ಹಾಗೂ ಕೋಗಿಲೆಯದ್ದು. ನಾನು ಎರಡು ವರ್ಷದಿಂದಾ ಇಂಥಾದೊಂದು ವಿಚಿತ್ರ ತಾಯಿ ಹಾಗೂ ಪುಟಾಣಿ ಕೋಗಿಲೆ ಸಂಬಂಧಾನಾ ನೋಡ್ತಾ ಬಂದೀನಿ. ಮಳಿಗಾಲ ಶುರುವಾತು ಅಂದರ ಸಾಕು ಕಾಗೆ ಹಾಗೂ ಕೋಗಿಲೆಗೆ ಸಾಕು ತಾಯಿ ಆಗುವ ದೃಶ್ಯ ಕಣ್ಣಮುಂದ ಕಾಣತೀನಿ.

ಬೆಂಗಳೂರಿನ್ಯಾಗ ಇಸ್ರೋ ಲೇಔಟ್ ಅಂತ ಐತಿ. ಅಲ್ಲೆ ನನ್ನ ಪುಟ್ಟ ಬಾಡಿಗಿ ಮನಿ ಇರೋದು. ಅದರ ಹಿತ್ತಲ ಬಾಗಲದಾಗ ನಿಂತಕೊಂಡರ ಒಂದು ಮರಾ ಕಾಣತೈತಿ. ಅದರಾಗ ಕಳದ ಮೂರು ವರ್ಷದಿಂದ ಒಂದು ಘಟನಾ ಕಣ್ಣಾರೆ ಕಂಡೀನಿ. ಈಗ ನಾಲ್ಕನೇ ವರ್ಷ. ಈಗಲೂ ಅಂಥಾದ ಒಂದು ಘಟನಾ ನನ್ನ ಕಣ್ಣಮುಂದನ ನಡ್ಯಾಕ ಹತ್ಯದ.

ಮಳಿಗಾಲ ಇನ್ನೇನು ಶುರುವು ಆಗತೈತಿ ಅನ್ನೋ ಹೊತ್ತಿಗೆ ಆ ಮರದಾಗ ಎರಡು ಕಾಗೆ ಬಂದು ಗೂಡು ಕಟ್ಟಾಕ ಶುರುವು ಮಾಡತಾವ. ಅದರಾಗ ಒಂದು ಗಂಡು-ಒಂದು ಹೆಣ್ಣು ಅಂತ ನಾನು ಅನಕೋತಿನಿ. ಭಾರಿ ಕಸರತ್ತು ಮಾಡಿ ದೂರದೂರದಿಂದಾ ಕಡ್ಡಿ ಹಿಡಕೊಂಡು ಬಂದು ಗೂಡು ಕಟ್ಟತಾವ. ಬೆಚ್ಚಗ ಮಾಡತಾವ. ಆ ಕಾಗಿ ಜೋಡಿ ನಡುವ ಅಲ್ಲೇ ಸರಸ ಸಲ್ಲಾಪಾನೂ ನಡೀತದ. ಆಮ್ಯಾಗ ಅಲ್ಲೆ ತತ್ತಿನೂ ಇಡತದ ಹೆಣ್ಣು ಕಾಗಿ.

ತತ್ತಿ ಇಟ್ಟು ಆಹಾರ ಹುಡಿಕೋದಕ್ಕ ಕಾಗಿ ಹಾರಿ ಹೋಗಿದ್ದ ತಡಾ; ಇತ್ತಾಗ ಒಂದು ಕೋಗಿಲೆ ಬಂದು ಅದ ಗೂಡಿನ್ಯಾಗ ಮೊಟ್ಟಿ ಇಡತದ. ಮಧ್ಯಾಣ ಆಗೋದ ತಡ ಕಾಗಿ ವಾಪಸ್ ಬಂದು ತನ್ನ ಮೊಟ್ಟಿ ಜೊತಿಗೆ ಕೋಗಿಲೆ ಮೊಟ್ಟಿಗೂ ಕಾವ ಕೊಡತದ. ಸ್ವಲ್ಪ ದಿನಾ ಆದಮ್ಯಾಗ ಮರಿನೂ ತತ್ತಿ ಒಡದು ಹೊರಗ ಬಂದಾಗ್ಯದ. ಮಜಾ ಶುರು ಆಗಿದ್ದ ಮರಿ ದೊಡ್ಡವಾಗಕ ಹತ್ತಿದ ಮ್ಯಾಗ.

ಗಂಡು ಮತ್ತ ಹೆಣ್ಣು ಕಾಗಿ ಸುತ್ತಾಗ ಎಲ್ಲಾ ಹಾರ್ಯಾಡಿಕೊಂಡು ಹುಳಾ ಹುಪ್ಪಡಿ, ಅನ್ನದ ಅಗಳು ಏನೇನೆಲ್ಲಾ ತಂದು ತಮ್ಮ ಮರಿಗಳ ಕೊಕ್ಕಿನ್ಯಾಗ ಹಾಕತಾವ. ಆವಾಗ ನೋಡ್ರಿ ಆ ಕಾಗಿಗೋಳು ತಮ್ಮ ಮರಿ ಜೊತಿಗೆ ಕೋಗಿಲೆ ಮರಿಗೂ ಸರಿಯಾಗಿ ಉಣ್ಣಸ್ತಾವ. ಹಿಂಗ ಉಂಡು-ತಿಂದು ದೊಡ್ಡದಾಗೋ ಕೋಗಿಲೆ ಮತ್ತ ಕಾಗಿ ಮರಿಗಳು ಸಣ್ಣಗ ಗೂಡಿನ್ಯಾಗಿಂದ ಹೊರಗ ಬಂದು ಇಣಕತಾವ.

ಸಣ್ಣಗ ಕಾಗಿ ಮತ್ತು ಕೋಗಿಲೆ ಮರಿ ಧ್ವನಿ ತಗ್ಯಾಗ ಹತ್ತತಾವ. ಕಾಗಿ ಮರಿಗಳದ್ದು ಒಂದಿಷ್ಟು ಒರಟ ಧನಿ. ಅದ ಕೋಗಿಲೆ ಮರಿದ್ದು ಚೊಯ್...ಚೊಯ್... ಅನ್ನೊ ಕಂಠ. ಕಾಗಿ ಮರಿಗಳು ಚೊರ್ ಚೊರ್ ಅಂತಾ ಕೂಗಿಕೊಂಡು ತಮ್ಮ ಅಮ್ಮನ್ನ ಬೆನ್ನ ಹತ್ತಿಕೊಂಡು ಗಿಡಿದ ಟೊಂಗಿಮ್ಯಾಗ ಬರತಾವ. ಕೋಗಿಲೆ ಮರಿನೂ ಚೊಯ್ ಚೊಯ್ ಅನಕೊಂಡು ಅಮ್ಮನ್ನ ಬೆನ್ನ ಹತ್ತತದ. ಆದರ ಆಗ ಕಾಗಿ ಅದರಿಂದ ದೂರದೂರ ಸರಿತದ.

ಆದರ ಕೋಗಿಲೆ ಮರಿಗೇನು ಗೊತ್ತಾಗಬೇಕು. ತನ್ನ ಅಮ್ಮಾ ಅದ ಅನಕೊಂಡು ಮತ್ತ ಚೋಯ್ ಚೊಯ್ ಅನಕೊಂಡು ಅದ ಕಾಗಿನ್ನ ಬೆನ್ನ ಹತ್ತತದ. ಎಷ್ಟು ಮಜಾ ನೋಡ್ರಿ ಈ ಪ್ರಕೃತಿ. ಕಾವು ಕೊಟ್ಟು, ಅನ್ನಾ ಬಾಯಿಗಿಟ್ಟು ಬೆಳಿಸಿದ ಕಾಗಿ ತಾಯಿಗೆ ಕೋಗಿಲೆ ಮರಿ ಬ್ಯಾಡ ಆಗತದ. ಹಿಂಗ ಒಂದಿಷ್ಟು ದಿವಸಾ ಕೋಗಿಲೆ ಮರಿ ತನ್ನ ಕಾಗಮ್ಮನನ್ನ "ಮಮ್ಮಿ...ಮಮ್ಮಿ..." ಅಂತ ಬೆನ್ನ ಹತ್ತತದ. ಆದರ ಕಾಗಿ ಏನಂದ್ರೂ ಅದನ್ನ ಹತ್ರಕ್ಕ ಸೇರಿಸಿಕೊಳ್ಳೋದಿಲ್ಲಾ. ಇಷ್ಟೆಲ್ಲಾ ಆಗೋ ಹೊತ್ತಿಗೆ ಕೋಗಿಲೆ ಮರಿ ರೆಕ್ಕಿಗೆ ಬಲ ಬಂದಿರತದ. ಅದು ಹಾರಿಕೊಂಡು ಹೋಗತದ.

ಇಂಥಾದೊಂದು ದೃಶ್ಯಾನ ನಾನು ಕಳದ ಮೂರು ವರ್ಷದಿಂದ ನೋಡಿದ್ದೆ. ಈ ವರ್ಷಾನೂ ಅದ ಮರದಾಗ ಅಂಥಾದೊಂದು ಘಟನಾ ನಡೀತು. ಈಗ ಕೋಗಿಲೆ ಮರಿ ಹಾರಿ ಹೋಗ್ಯದ. ಕಾಗೆಗಳು ತಮ್ಮ ಮರಿಗಳಿಗೆ ಇನ್ನೂ ಹಾರೋದನ್ನ ಕಲಸಾಕ ಹತ್ಯಾವ. ಕಾಗೆಗಳಿಗೆ ಅಮ್ಮಾ ಅನ್ನೋದು ಐತಿ. ಆದರ ಕೋಗಿಲೆ ತನ್ನ ಅಮ್ಮಾ ಯ್ಯಾರಂತ ಹುಡಿಕಿಕೊಂಡು ಹೋಗೈತಿ...!

ಮಸಾಲಾ ಯೋಗ...!


ಚೆಂದದ ಚೆಲುವೆ ಅವಳು;
ಅಮೆರಿಕಾದಿಂದ ಬಂದವಳು.
ಭಾರತ ಚೆಂದವೆಂದಳು,
ನೋಡಲು ಬಂದೆ ಎಂದಳು.

ದೇಶದೆಲ್ಲ ದೇಗುಲ ಸುತ್ತಿದಳು.
ಬೆಟ್ಟ ಗುಡ್ಡ ಹತ್ತಿದಳು,
ಆಹಾ... ಏನು ಚೆಂದವೆಂದಳು.
ಮನದುಂಬಿ ನಕ್ಕಳು.

ಮಸಾಲೆ ಇಷ್ಟಪಡುವಳು,
ಯೋಗ ಕಲಿಯುವೆನೆಂದಳು.
ತುಂಡು ಉಡುಗೆ ತಂದಳು,
ಯೋಗ ಕಲಿಸು ಎಂದಳು.

ಯೋಗಿಯ ಮುಂದೆ ನಿಂತಳು,
ಉಸಿರೆಳೆದಳು, ಮೈಮಣಿಸಿದಳು.
ಬೆಚ್ಚಗಾದ ಯೋಗದ ಯೋಗಿ.
ಮನದ ತುಂಬಾ ಅವಳೇ ಅವಳು!

ಎದೆಯತುಂಬಾ ಅರಿದಳು,
ಬಯಕೆಯ ಮಸಾಲೆ ಸುರಿದಳು.
ಅವಳು, ಅವಳು, ಅವಳು...!
ಮಸಾಲಾ ಯೋಗಿಣಿಯಾದಳು.

ವಿವೇಕ್ ಜೊತೆಗೆ ಯೂತ್ ಫೆಸ್ಟಿವಲ್ ನೆನಪಿನ ಮೆಲುಕು...!


ವಿವೇಕ್ ಓಬೇರಾಯ್ ಈಗ ಎಲ್ಲರಿಗೂನೂ ಪರಿಚಯಾ ಆಗಿರೋ ಹೆಸರು. ಜನಪ್ರಿಯ ಬಾಲಿವುಡ್ ನಟ ಅಷ್ಟ ಅಲ್ಲ; ಜನಸೇವಾ ಕಾರ್ಯದಾಗ ತೊಡಗಿಕೊಂಡಿರೋ ಜನಪ್ರಿಯತೆ ಗಳಿಸಿರೋ ಗಣ್ಯವ್ಯಕ್ತಿ. ಅದರ ವಿವೇಕ್ ತಾನು ವರ್ಷಗಳ ಹಿಂದ ಭೇಟಿ ಆಗಿದ್ದ ಗೆಳೆಯಾರನ್ನ ಮರತಿಲ್ಲಾ ಅನ್ನೋದ ವಿಶೇಷ. ದೊಡ್ಡ ಸ್ಟಾರು ನಾನು ಅಂತ ಧಿಮಾಕು ಮಾಡೋದಿಲ್ಲ. ಭಾಳ ಸಂಭಾವಿತ ವ್ಯಕ್ತಿ. ಹನ್ನೆರಡು ವರ್ಷದ ಹಿಂದ ಭೇಟಿಯಾಗಿ ಒಂದು ವಾರ ಜೊತಿಗೆ ಇದ್ದ ಗೆಳೆಯಾರನ್ನ ಅವಾ ಮರತಿಲ್ಲಾ. ಅದು ನನಗ ಗೊತ್ತಾಗಿದ್ದು ಅವನ್ನ ಶ್ರೀಲಂಕಾದಾಗ ಭೇಟಿ ಆದಾಗ.

ನನ್ನ ಮತ್ತ ವಿವೇಕ್ ಭೇಟಿ ಆಗಿದ್ದು ಕಳದ ತಿಂಗಳದಾಗ. ಶ್ರೀಲಂಕಾದ ರಾಜಧಾನಿ ಕೊಲಂಬೊಕ್ಕ ವಿಶ್ವಕಪ್ ಕ್ರಿಕೆಟ್ ವರದಿ ಮಾಡಾಕ ಹೋಗಿದ್ದಾಗ. ಶ್ರೀಲಂಕಾ ಪ್ರೆಸಿಡೆಂಟ್ ಸಾಹೇಬರು ಕ್ರಿಕೆಟ್ ವರದಿ ಮಾಡಾಕ ಬಂದಿದ್ದ ಎಲ್ಲಾ ವಿದೇಶಿ ಪತ್ರಕರ್ತರನ್ನ ತಮ್ಮ ಸರ್ಕಾರಿ ನಿವಾಸಕ್ಕ ರಾತ್ರಿ ಊಟಕ್ಕ ಕರದಿದ್ರು. ನಾನು ಮತ್ತ ನಮ್ಮ ಫೋಟೊಗ್ರಾಫರು ಸ್ಯಾಮ್ಸನ್ ವಿಕ್ಟರ್ ಅಲ್ಲಿಗೆ ಹೋಗಿದ್ವಿ. ಅಲ್ಲಿಗೆ ವಿವೇಕ್ ಮತ್ತ ಅವನ ಹೆಂಡತಿ ಪ್ರಿಯಾಂಕಾ ಅವರೂ ಬಂದಿದ್ರು.

ನಾನು ಮತ್ತ ಸ್ಯಾಮ್ಸನ್ ಮತ್ತ ಒಂದಿಷ್ಟು ದೆಹಲಿ ಜರ್ನಲಿಸ್ಟುಗಳು ಜೊತಿಗೆ ವೈನ್ ಹೀರಾಕ ಹತ್ತಿದ್ವಿ. ಆ ಹೊತ್ತಿಗೆ ವಿವೇಕ್ ಒಳಗ ಬಂದ. ಅಲ್ಲಿದ್ದವ್ರು ಬಾಲಿವುಡ್ ಸ್ಟಾರ್ ಜೊತಿಗೆ ಮುತ್ತಿಗಿ ಹಾಕ್ಕೊಂಡ್ರು. ನಾನು ಸುಮ್ಮನ ಎಲ್ಲಾರೂ ಹೋದಮ್ಯಾಗ ಮಾತಾಡಿಸಿದ್ರ ಆತು ಅಂತ ಸುಮ್ಮನ ನಿಂತಿದ್ದೆ. ಆದರ ವಿವೇಕ್ ಕಡಿಗೆ ಒಮ್ಮೆ ನೋಡಿ ನಕ್ಕೆ. ಅವಾನೂ ನಕ್ಕ. ಸ್ವಲ್ಪ ಹೊತ್ತಾದಮ್ಯಾಗ ಅವನಿಗ ನನ್ನ ನೆನಪು ಆಗಿರಬೇಕು ಅನಸತದ. ಮತ್ತ ಗುಂಪಿನ್ಯಾಗಿಂದ ಮತ್ತೊಮ್ಮೆ ಹಿಂದ ನೋಡಿದ. ನಾನು ನೋಡಿದೆ; ಆಗ ಅವಗ ನನ್ನ ಜೊತೆಗೆ ಕಾಲೇಜ್ ದಿನದಾಗ ಕಳದಿದ್ದ ಒಂದು ವಾರದ ನೆನಪು ಆಗಿರಬೇಕು. ತಕ್ಷಣ ತನ್ನ ಹೆಂಡತೀನ ಕರಕೊಂಡು ನನ್ನ ಕಡೀಗೆ ಬಂದ. ನಾನು ಪ್ರಸಿಡೆಂಟ್ ಪ್ಯಾಲೇಸಿನ್ಯಾಗ ನಡದಿದ್ದ ಡಾನ್ಸ್ ನೋಡಕೊಂತ, ವಿವೇಕ್ ಕಡೆಗೂ ಒಂದು ಗಮನಾ ಇಟ್ಟಿದ್ದೆ.

ಅವಾ ಬಂದವನ ನನ್ನ ಕಡೀಗೆ ನೋಡಿ; ನೀನು ನಮ್ಮ ಕಾಲೇಜಿನ್ಯಾಗ ಯೂತ್ ಫೆಸ್ಟಿವಲ್ ನಡದಾಗ ಡಾನ್ಸ್ ಮಾಡಿದ್ಯಲ್ಲಾ? ಅಂತ ಹಿಂದಿನ್ಯಾಗ ಕೇಳಿದ. ನಾನು ತಕ್ಷಣ ಅಚ್ಚರಿ ಪಟ್ಟೆ; ಅಷ್ಟೊಂದು ಹಳೆ ನೆನಪು ಇವನಗ ಐತಲ್ಲ ಅಂತ ಖುಶಿನೂ ಆತು. ಆಮ್ಯಾಲ ನಾನ ಅವಗ "ಮುಂಬೈ ಮಿಥಿಬಾಯ್ ಕಾಲೇಜ್ ಯೂತ್ ಫೆಸ್ಟಿವಲ್... ಜಾದೂ ತೇರಿ ನಜರ್...!" ಎಂದು ಸಂಕೇತ ಕೊಟ್ಟೆ. ಆಗ ಅವನು ನಕ್ಕ. "ಓಹ್ ಯಾರ್... ಕ್ಯಾ ಮಸ್ತಿ ಕಿಯಾಥಾ..." ಎಂದು ಅಪ್ಪಿಕೊಂಡ.

"ತುಮಾರಾ ಗ್ರೂಪ್ ಕೆ ಸಾಥ್ ಬಹುತ್ ಮಸ್ತಿ ಕಿಯಾಥಾ. ಓ ಕೌನ್ ಥಾ ತುಮಾರಾ ಗ್ರೂಪ್ ಮೆ ತಬಲಾ ಬಜಾಕೆ, ಉಸ್ತಾದ್ ಅಲ್ಲಾ ರಖಾಜಿ ಕೊ ಭಿ ಖುಶ್ ಕಿಯಾಥಾ...?" ಎಂದ ವಿವೇಕ್. ಆಗ ವಿವೇಕ್ ನೆನಪಿನ ಬುತ್ತಿ ಬಿಚ್ಚಿಕೊಂಡಿತು. ನಾನು "ರವಿಕಿರಣ್ ನಾಕೋಡ್..." ಎಂದು ನೆನಪಿಸಿದೆ.

ಹೌದು; ರವಿಕಿರಣ್ ಅವರು ನಮ್ಮ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಾಗ ಇದ್ದವರು. ಅವರು ಮಿಥಿಬಾಯಿ ಕಾಲೇಜಿನ್ಯಾಗ ನಡದಿದ್ದ ಯೂತ್ ಫೆಸ್ಟಿವಲ್ಲಿನ್ಯಾಗ ರವಿಕಿರಣ್ ನಾಕೋಡ್ "ತಬಲಾ" ನುಡುಸೋ ಸ್ಪರ್ಧೆನ್ಯಾಗ ಪಾಲ್ಗೊಂಡಿದ್ರು. ಅವತ್ತ ರವಿಕಿರಣ್ ತಬಲಾ ನುಡಿಸಿದ್ದಾಗ; ಜಡ್ಜ್ ಆಗಿ ಬಿಂದಿದ್ದ ಉಸ್ತಾದ್ ಅಲ್ಲಾ ರಖಾ ಅವರ ಎದ್ದು ಹೋಗಿ ಸ್ಟೇಜಿನ್ಯಾಗಿದ್ದ ರವಿಕಿರಣ್ ಅವರನ್ನ ಅಪ್ಪಿಕೊಂಡಿದ್ರು. ಆ ಘಟನೆನ ವಿವೇಕ್ ಓಬೇರಾಯ್ ನೆನಪಿನ್ಯಾಗ ಇಟ್ಟಕೊಂಡಿದ್ದಾ. ಅಷ್ಟ ಅಲ್ಲ; ನಮ್ಮ ಗುಂಪಿನ್ಯಾಗಿದ್ದ ಸಂಜಯ್ ನೀಲಗುಂದ, ಹಿರೇಮಠ, ಶಿರಸಿ ಅವರು ಊಟಕ್ಕ ಕೂಡಮೊದಲ "ಜಾದೂ ತೇರಿ ನಜರ್..." ಅನ್ನೋ ಸಿನಿಮಾ ಹಾಡನ್ನ ಪ್ರಾರ್ಧನೆ ಥರಾ ಹಾಡತಿದ್ದದ್ದನ್ನ ಕೂಡ ವಿವೇಕ್ ನೆನಪಿಸಿಕೊಂಡಿದ್ದ.

ಯೂತ್ ಫೆಸ್ಟಿವಲ್ಲಿಗೆ ಹೋದಾಗ ಮಿಥಿಬಾಯಿ ಕಾಲೇಜ್ ಟೆರೆಸ್ ಮ್ಯಾಗ ಊಟಕ್ಕ ಕುಂತಾಗ ನಮ್ಮ ಗುಂಪಿನ ಜೊತಿಗೆ ಬಂದು ಹಾಡಿ ಕುಣಿದಿದ್ದ ಇದ ವಿವೇಕ್ ಓಬೇರಾಯ್. ಅಷ್ಟ ಅಲ್ಲ ಆವಾಗನ ತನ್ನ ತೆರದ ಜೀಪಿನ್ಯಾಗ ಅರ್ಧಾ ಮುಂಬೈ ಕೂಡ ಸುತ್ತಿಸಿದ್ದ. ನಮಗ ಆವಾಗ ವಿವೇಕ್, ಸುರೇಶ್ ಓಬೇರಾಯ್ ಮಗಾ ಅನ್ನೋದು ಮಾತ್ರ ಗೊತ್ತಿತ್ತು. ಆದರ ನಾವು ಆವಾಗ ಈ ವಿವೇಕ ದೊಡ್ಡ ಬಾಲಿವುಡ್ ಸ್ಟಾರ್ ಆಗತಾನ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಆವಾಗ ಅವನೂ ನಮ್ಮ ಹಾಂಗ ಹುಡಗ ಬುದ್ಧಿ ಹುಡಗ ಆಗಿದ್ದ. ಮಿಥಿಬಾಯಿ ಕಾಲೇಜಿನ್ಯಾಗ ಕಲ್ಚರ್ ವಿಭಾಗದ ಸ್ಟೂಡೆಂಟ್ ಸೆಕ್ರೆಟರಿನೂ ಆಗಿದ್ದ. ಅದ ಟಾಯಮಿನ್ಯಾಗ ವಿವೇಕ್ ಜೊತಿಗ ನನ್ನ ಭೇಟಿ ಆಗಿದ್ದು.

ನಾನು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಾಗ ಓದೋವಾಗ ಮುಂಬೈಗೆ ಯೂತ್ ಫೆಸ್ಟಿವಲಿನ್ಯಾಗ ಪಾಲ್ಗೊಳ್ಳಾಕ ಹೋಗಿದ್ದು. ಆವಾಗ ವಿವೇಕ್ ಅಲ್ಲಿನ ಮಿಥಿಬಾಯಿ ಕಾಲೇಜಿನ್ಯಾಗ ಕಲ್ಚರ್ ವಿಭಾಗದ ಸ್ಟೂಡೆಂಟ್ ಸೆಕ್ರೆಟರಿ ಆಗಿದ್ದರು. ಆವಾಗ ವಿವೇಕ್ ಈಗಿನಹಾಂಗ ಇರಲಿಲ್ಲ. ಉದ್ದ ಕೂದಲು, ಕಿವಿಯಾಗ ಒಂದು ಓಲೆ, ಲೆದರ್ ಜಾಕೆಟ್, ಜೀನ್ಸ್... ಹಿಂಗ ಇತ್ತು ವಿವೇಕ್ ಸ್ಟೈಲ್. ಕೆಂಪು ಬಣ್ಣದ ಓಪನ್ ಜೀಪು. ಅದರಾಗ ಅವಾ ಬರತಿದ್ದ.

ಆತಿಥೇಯ ಕಾಲೇಜಿನವಾ ಆಗಿದ್ದರಿಂದ ಅವಾ ನಮ್ಮ ಕುಶಲ ತಿಳಿಯಲು ಒಂದು ವಾರ ಪೂತರ್ಿ ಆಗಾಗ ಬಂದು ಮಾತನಾಡಿಸತಿದ್ದಾ. ವಿವೇಕ್ ಮತ್ತ ಅವನ ಫ್ರೆಂಡ್ಸ್ ಎಲ್ಲಾರಿಗೂ ಕರ್ನಾಟಕ ವಿಶ್ವವಿದ್ಯಾಲಯದ ಗುಂಪು ಭಾರಿ ಇಷ್ಟಾ ಆಗಿತ್ತು. ನಾವು ಮಾಡತಿದ್ದ ವಿಶಿಷ್ಟವಾದ ರೀತಿಯ ಗದ್ದಲ ಎಲ್ಲಾರನ್ನೂ ಸೆಳಿತಿತ್ತು. ಊಟದ ಹೊತ್ತಿಗಂತೂ ನಮ್ಮ ಗುಂಪಿನ ಜೊತಿಗೆ ವಿವೇಕ್ ಮತ್ತ ಅವನ ಫ್ರೆಂಡ್ಸು ಬಂದು ನಿಲ್ಲತಿದ್ರು. ನಾವು ಊಟಕ್ಕೂ ಮೊದಲ "ಜಾದೂ ತೇರಿ ನಜರ್..." ಪ್ರಾರ್ಥನೆ ಹಾಡತಿದ್ದರ ಎಲ್ಲಾರೂ ಬಿದ್ದು ಬಿದ್ದು ನಗತಿದ್ದರು.

ನಮ್ಮ ಗುಂಪಿನ್ಯಾಗ ಒಳ್ಳೆ ಹಾಡೋರು ಇದ್ರು. ಅದರಾಗೂ ಶಿರಸಿ ಅನ್ನೋ ನಮ್ಮ ಗೆಳೆಯಾ ಜನಪದ ಧಾಟಿನ್ಯಾಗ ಹಿಂದಿ ಮತ್ತ ಕನ್ನಡ ಹಾಡು ಹಾಡತಿದ್ದ. ಅದನ್ನು ಸಹಿತ ಮೊನ್ನೆ ವಿವೇಕ್ ಭೇಟಿ ಆದಾಗ ನೆನಪು ಮಾಡಿಕೊಂಡಿದ್ದಾತು. ವಿವೇಕ್ ಪತ್ನಿ ಪ್ರಿಯಾಂಕಾ ಕನ್ನಡದವಳು. ಅವಳ ಜೊತಿಗೆ ನಮ್ಮ ಫೋಟೊಗ್ರಾಫರ್ ಕನ್ನಡದಾಗ ಮಾತಾಡತಿದ್ರು. ಅದೆಲ್ಲಾ ಮಾತು ಮುಗದು; ಶ್ರೀಲಂಕಾ ಪ್ರೆಸಿಡೆಂಟು ಬಂದು ಔತಣ ಕೂಟದಾಗ ಒಂದು ಸುತ್ತು ಸುತ್ತಾಡಿ ಹೋದಮ್ಯಾಗ ವಿವೇಕ್ ಮತ್ತ ಮಾತಿಗೆ ಸಿಕ್ಕ.

ಆವಾಗ ಮತ್ತ ಯೂತ್ ಫೆಸ್ಟಿವಲ್ ನೆನಪುಗಳನ್ನ ಮೆಲಕು ಹಾಕಿದ್ದಾತು. ಕೇಳ್ವಾಣಿ ಕಲಾ ಮಂಡಳದ ಕಟ್ಟಿಮ್ಯಾಗ ಕುಂತು ಮಧ್ಯರಾತ್ರಿ ಹೊತ್ತಿನವರಿಗೂ ಹರಟಿ ಹೊಡದಿದ್ದು ಎಲ್ಲಾ ನೆನಪನ್ನ ತಾಜಾ ಮಾಡಿಕೊಂಡ್ವಿ...! ಅದ ಹೊತ್ತಿನ್ಯಾಗ ಶ್ರೀಲಂಕಾ ಪ್ರೆಸಿಟೆಂಟ್ ಸಾಹೇಬ್ರ ಅಧಿಕೃತ ಫೋಟೋಗ್ರಾಫರ್ ಸುದತ್ ಬಂದು ಕ್ಯಾಮರಾ ಕ್ಲಿಕ್ಕಿಸಿದ. ಆಗ ತಗದಿದ್ದ ಕೆಲವು ಚಿತ್ರದಾಗ ಒಂದನ್ನ ಈ ನೆನಪಿನ ಪುಟದಾಗ ಅಂಟಿಸೀನಿ ನೋಡ್ರಿ...!

ಬರಿಯೋದನ್ನ ಮುಗಸೋದಕ್ಕೂ ಮೊದಲ ವಿವೇಕ್ ಬಗ್ಗೆ ಒಂದೆರಡು ಮಾತು ಹೇಳಾಕ ಇಷ್ಟಪಡತೀನಿ. ವಿವೇಕ್ ದೊಡ್ಡ ಸ್ಟಾರ್ ಆದಮ್ಯಾಗು ತಾನು ಭೇಟಿ ಆಗಿದ್ದ ಜನರನ್ನ ನೆನಪು ಇಟ್ಟಕೊಂಡು ಮಾತನಾಡಸ್ತಾನ. ಅದು ಅವನ ದೊಡ್ಡ ಗುಣ. ಇನ್ನೊಂದು ವಿಶೇಷ ಅಂದ್ರ ಶ್ರೀಲಂಕಾದಾಗ ಅವಾ ಮಾಡಿರೋ ಕೆಲಸಾ. ಶ್ರೀಲಂಕಾ ಜನರು ವಿವೇಕ್ ಅಂದ್ರ ಭಾರಿ ಗೌರವಾ ಕೊಡತಾರ. ಅವಾ ಎಲ್ಲಾರ ಜೊತಿಗೂ ನಕ್ಕೊಂಡು ಮಾತಾಡೊ ಒಳ್ಳೆ ಮನಸಿನವಾ. ಕಾಲೇಜ್ ದಿನಗಳ ನೆನಪನ್ನ ಇಟ್ಟುಕೊಂಡು ಅವಾ ಅಂದು ನನ್ನನ್ನ ಮಾತಾಡಿಸಿದ ನಂತರ ಅವನ ಗುಣವನ್ನ ನಾನು ಇನ್ನಷ್ಟು ಮೆಚ್ಚಿಕೊಂಡೀನಿ.

ಸಿಹಿ-ಖಾರ ಇದೇ ಬದುಕಿನ ಸಾರ


ಒಂದು, ಎರಡು, ಮೂರು
ಸಾಕಾಗಲಿಲ್ಲ ಸಿಹಿ.
ನಾಲ್ಕು, ಐದು, ಆರು
ಬೇಕು ಬೇಕು ಇನ್ನಷ್ಟು.
ಸಿಹಿಯಾಗಬೇಕು, ಸವಿಯಿರಬೇಕು.
ಕಷ್ಟಗಳ ಖಾರವೇಕೆ?
ಸಿಹಿ ಇನ್ನಷ್ಟು, ಮತ್ತಷ್ಟು...!
ಏಳು, ಎಂಟು, ಒಂಬತ್ತು
ಸಾಕಾಗಲಿಲ್ಲ ಇವತ್ತು;
ನಾಳೆಗೂ ಬೇಕು;
ಬಾಳೆಲ್ಲ ಸಿಹಿಯಾಗಿರಬೇಕು.
ದೇವರು ವರವನು ಕೊಟ್ಟ;
ಕಷ್ಟಗಳೇ ಬೇಡ ನಿನಗೆ,
ಸಿಹಿಯನ್ನೇ ಸವಿಯುತ್ತಿರು;
ಖಾರ ಎನ್ನುವುದೇ ಬೇಡ...
ತತಾಸ್ಥು ಎಂದ ಭಗವಂತ.
ಒಂದಿಷ್ಟು ದಿವಸ, ಇನ್ನಷ್ಟು ದಿವಸ;
ಕಳೆಯಿತು ವರ್ಷ.
ನಿತ್ಯವೂ ಸಿಹಿಯ ವರ್ಷಧಾರೆ.
ಸಿಹಿ, ಸಿಹಿ, ಸಿಹಿ...!
ಮುಗಿಯಲೇ ಇಲ್ಲ.
ಕಷ್ಟಗಳು ಖಾರವಾಗಿ ಬರಲಿಲ್ಲ.
ಆದರೇನು? ನಿತ್ಯ ಸಿಹಿಯ ಸವಿ!
ಬತ್ತಿ ಹೋಯಿತು ಉತ್ಸಾಹ;
ಸಿಹಿ, ಸಿಹಿ, ಸಿಹಿ...
ಎಷ್ಟಾದರೂ ತಿನ್ನಲು ಸಾಧ್ಯ?
ಸಾಕು; ಬಾಯಿ ಋಚಿಯೇ ಇಲ್ಲ.
ಸಿಹಿ ಎಂದರೆ ವಾಕರಿಕೆ;
ಒಂದಿಷ್ಟು ಖಾರವೂ ಬೇಕು!
ಮತ್ತೆ ದೇವರಿಗೆ ಬೇಡಿಕೆ;
ತಪಸ್ಸು ಮಾಡಿ,
ಭಗವಂತನಿಗೆ ಅರ್ಜಿ.
ಸಾಕು ಸಿಹಿ.
ಕೊಡು ಒಂದಿಷ್ಟು ಖಾರ.
ಅದೇ ನನ್ನ ಬದುಕಿನ ಸಾರ!
ದೇವರು ಪುಡಿಕೆ ಕಟ್ಟಿದ,
ಸಿಹಿಯ ಜೊತೆಗೆ
ಖಾರವನ್ನೂ ತೂಕ ಮಾಡಿ ಕಟ್ಟಿದ!
ತಗೋ ಭಕ್ತ ಎಂದ,
ಬದುಕಿಗೆ ಅರ್ಥವನ್ನೂ ತಂದ.

ಅಣ್ಣಾ ಹಜಾರೆ ಬೆಂಬಲಕ್ಕ ನಿಲ್ರಿ...!


ಅಣ್ಣಾ ಹಜಾರೆ ಭ್ರಷ್ಟರದ ವಿರುದ್ಧಾ ಶಾಂತಿ ಅಸ್ತ್ರದ ಹೋರಾಟ ನಡಸಿರೋ ಮಹಾ "ಶಾಂತಿ ವೀರ". ಅವರೀಗೆ ನನ್ನ ಕೋಟಿ ಕೋಟಿ ನಮನಾ. ಮಹಾತ್ಮಾ ಗಾಂಧಿನ್ನ ನಾವೆಲ್ಲಾ ಫೋಟೋನ್ಯಾಗ ನೋಡಿ, ಓದಿ ತಿಳಕೊಂಡೀವಿ. ಆದರ ನಮ್ಮ ಎದುರಿಗೇನ ಇರೋ ಗಾಂಧಿಯಂಥಾ ಮನಷಾ ಅಣ್ಣಾ ಹಜಾರೆ. ನನಗ ಅವರ ಬಗ್ಗೆ ಭಾರಿ ಗೌರವಾ, ಭಕ್ತಿ, ಪ್ರೀತಿ. ಅವರನ್ನ ಒಮ್ಮೆ ನೋಡಿದ್ರ ಸಾಕು ಅದೇನೋ ಒಂಥರಾ ಏನೋ ಶಕ್ತಿ ಪಾಸ್ ಆದಹಾಂಗ ಆಗತೈತಿ.

ನಾನು ಅಣ್ಣಾ ಹಜಾರೆ ಅವರನ್ನ ನೋಡಿದ್ದು ಹತ್ತು ವರ್ಷದ ಹಿಂದ ಇರಬೇಕು ಅಂತಾ ಅನಸತದ. ಮಜಾ ಅಂದ್ರ ನನಗ ಅವರು ತಂದಿದ್ದ ಟ್ಯಾಕ್ಸಿನ್ಯಾಗ ಅವರು ಜೀವಕಳೆ ನೀಡಿದ ಮಹಾರಾಷ್ಟ್ರದ ಹಳ್ಳಿಗಳಿಗೂ ಹೋಗೋ ಅವಕಾಶಾ ಸಿಕ್ಕಿತ್ತು. ಅದು ನನ್ನ ಭಾಗ್ಯಾನ ಅಂದಕೋತೀನಿ. ಅವರ ಜೊತಿಗೀನ ಏಳುವರಿ ತಾಸಿನ ಪ್ರಯಾಣದಾಗ ನಾನು ಸಾಕಷ್ಟು ವಿಷಯ್ಯಾನ ತಿಳಕೊಂಡಿದ್ದೆ. ಅದು ಒಂಥರಾ ದೊಡ್ಡ ಪುಸ್ತಕಾನ ಓದಿದ ಅನುಭವಾ.

ಹತ್ತು ವರ್ಷದ ಹಿಂದ ನಾನು ಕರ್ನಾಟಕ ವಿಶ್ವವಿದ್ಯಾಲಯದಾಗ ಪತ್ರಿಕೋದ್ಯಮದ ಮಾಸ್ಟರ್ ಡಿಗ್ರಿ ಓದತಿದ್ದೆ. ಆವಾಗ ನನ್ನ ಅಣ್ಣಾ ಪ್ರಕಾಶ ಅವರು "ಬಾಲಬಳಗಾ" ಕಟ್ಟಿ ಧಾರವಾಡದಾಗ ಬಹಳಷ್ಟು ಕಾರ್ಯಕ್ರಮಗಳನ್ನಾ ಮಾಡತಿದ್ದರು. ಮಾಳಮಡ್ಡಿಯ ಮಹಿಷಿ ರಸ್ತೇನ್ಯಾಗ ಇರೋ ದೇಶಪಾಂಡೆ ಕಾಂಪೌಂಡಿನ್ಯಾಗ ದೊಡ್ಡ ದೊಡ್ಡ ಮರದ ಕೆಳಗ ಸಾಕಷ್ಟು ದೊಡ್ಡ ಜಾಗಾ ಇತ್ತು. ಅಲ್ಲೇ ಪ್ರಸೂತಿ ವೈದ್ಯರಾದ ಡಾ.ಸಂಜೀವ್ ಕುಲಕರ್ಣಿ ಅವರ ಮನೀನೂ ಇತ್ತು. ಅವರೂ ಬಹಳಷ್ಟು ಚಟುವಟಿಕಿಯಿಂದಾ ಇರೋ ಮನುಷಾ.

ಡಾ.ಸಂಜೀವ್ ಕುಲಕರ್ಣಿ ಅವರು ಬಾಲಬಳಗಕ್ಕ ಬೆನ್ನೆಲುಬು ಇದ್ದಹಾಂಗ ಇದ್ರು. ಅವರು ಒಂದು ದಿನಾ ಅದ ದೇಶಪಾಂಡೆ ಕಾಂಪೌಂಡಿನ್ಯಾಗ ಒಂದು ಕಾರ್ಯಕ್ರಮಾ ಮಾಡಿ ಅಣ್ಣಾ ಹಜಾರೆ ಅವರನ್ನ ಕರಸೋಣು ಅಂದ್ರು. ಅದಕ್ಕ ನನ್ನ ಅಣ್ಣ ಪ್ರಕಾಶ, ಅತ್ತಿಗಿ ರಜನಿ, ಸಂಗೀತ ಕಲಾವಿದಾ ಗಜಾನನ ಹೆಗಡೆ ಮತ್ತ ನಾನು ಎಲ್ಲಾರೂ ಆತು ಕರಿಸೇ ಬಿಡೋಣ ಅಂದ್ವಿ. ಭಾರಿ ತಯಾರಿ ಮಾಡಿಕೊಂಡು ಮರದ ಕೆಳಗೊಂದು ಮಣ್ಣಿನ ಪೀಠಾ ಮಾಡಿ, ಅಂಗಳಾ ಎಲ್ಲಾ ಸಗಣಿ ಹಾಕಿ ಸಾರಿಸಿ, ರಂಗೋಲಿ ಬಿಟ್ಟು ಸಿಂಗಾರಾ ಮಾಡಿ ಅಣ್ಣಾ ಹಜಾರೆ ಸ್ವಾಗತ ಮಾಡಿ ಕಾರ್ಯಕ್ರಮಾ ಮಾಡಿದ್ದು ಆತು. ಅದೇನು ಜನಾ ಅಂತೀನಿ; ಕಾಂಪೌಂಡ್ ಕುಂಬಿ, ಮರಾ, ರಸ್ತೆ ಎಲ್ಲಾ ಕಡಿಗೂ ನಿಂತು ಜನಾ ಅವರ ಭಾಷಣಾ ಕೇಳಿದ್ರು.

ಅಣ್ಣಾ ಹಜಾರೆ ಅವರು ಅವತ್ತ ಮಾಡಿದ ಭಾಷಣಾ ನನ್ನ ತಲೀನ್ಯಾಗ ಇನ್ನೂ ಗಟ್ಟಿ ಆಗ್ಯದ. ಒಂದ ಮಾತಂತೂ ಭಾಳ ಸರಿ ಆಗಿ ಹೇಳಿದ್ರು. ಭ್ರಷ್ಟಾಚಾರ ದೂರ ಮಾಡಾಕ ಬೇಕಾಗಿರೋದು ಜನರು; ಜನರು ಮನಸು ಮಾಡಿದ್ರ ಎಲ್ಲಾ ಭ್ರಷ್ಟರ ಜುಟ್ಟು ಹಿಡಿದು, ಕಸಬರಗಿ ತಗೊಂಡು ಝಾಡಿಸಬಹುದು ಅಂತ ಹೇಳಿದ್ದು ಎಷ್ಟ ಖರೇ ಅದ. ಜನರು ಮನಸು ಮಾಡಬೇಕು ಅಷ್ಟ. ಭ್ರಷ್ಟ ವ್ಯವಸ್ಥೆನಾ ಬದಲು ಮಾಡೋ ತಾಕತ್ತು ಜನರಿಗೆ ಐತಿ ಅನ್ನೋದನ್ನ ಅಣ್ಣಾ ಹಜಾರೆ ತಮ್ಮ ಹೋರಾಟದಿಂದನ ತೋರಿಸಿಕೊಟ್ಟಾರ.

ಅದ ಅಣ್ಣಾ ಹಜಾರೆ ಇನ್ನೊಂದು ದೊಡ್ಡ ಹೋರಾಟಕ್ಕ ನಿಂತಾರ ಈಗ. ಜನ್ ಲೋಕಪಾಲ್ ಮಸೂದೆಯಂಥಾ ಸಮಗ್ರ ಕಾನೂನು ಜಾರಿ ಮಾಡಬೇಕು ಅಂತಾ ಒತ್ತಾಯ ಮಾಡಿ ಉಪವಾಸ ಕುಂತಾರ. ಅವರ ಈ ಹೋರಾಟ ಒಂದು ಮುನ್ನುಡಿ ಮಾತ್ರ. ಅದಕ್ಕ ಜನರೆಲ್ಲಾ ಬೆಂಬಲಾ ಕೊಟ್ಟು ಈ ಹೋರಾಟಕ್ಕ ದೊಡ್ಡ ಶಕ್ತಿ ನೀಡಬೇಕು. ಅದು ನಮ್ಮೆಲ್ಲಾರ ಕರ್ತವ್ಯಾ ಆಗ್ಯದ. ಅಣ್ಣಾ ಹಜಾರೆ ಬದುಕ ನಮಗೆಲ್ಲಾರಿಗೂ ಆದರ್ಶ ಆಗಬೇಕು.

ಅಣ್ಣಾ ಹಜಾರೆ ಬರಿ ಭಷ್ಟಾಚಾರದ ವಿರುದ್ಧಾ ಹೋರಾಡಿಕೊಂಡು ಪ್ರಚಾರ ಪಡೀತಾರ ಅಂತ ಯಾರೂ ತಿಳಕೋಬಾರದು. ಅವರು ತಮ್ಮ ಹೋರಾಟಕ್ಕಾಗಿ ಜೈಲಿಗೆ ಹೋಗೊ ಕಷ್ಟಾ ಕೂಡ ಸಹಿಸೋಹಂತಾ ಮನುಷಾ. ಅವರ ತಾಕತ್ತು ಹಾಗೂ ಜನರನ್ನ ಪ್ರೇರೇಪಿಸೊ ಶಕ್ತಿ ಏನು ಅಂತಾ ನೋಡಬೇಕಿದ್ರ ಪುಣೆ ಸಮೀಪದ ಸಾಸ್ವಾಡಕ್ಕೆ ಒಮ್ಮೆ ಹೋಗಿ ನೋಡ್ರಿ. ಅಣ್ಣಾ ಹಜಾರೆ ಮಾಡಿರೋ ಕೆಲಸಾ ಎಂಥಾದ್ದು ಅಂತ ಗೊತ್ತಾಗತದ.

ಯಾವುದ ರಾಜಕೀಯ ಪಕ್ಷ ಮತ್ತು ಸ್ಥಾನದ ಆಸೆ ಪಡದ ಜನರ ಒಳಿತಿಗಾಗಿ ಹೋರಾಟ ನಡಿಸಿರೋ ಈ ಮಾಜಿ ಯೋಧ; ಖಂಡಿತ ಮಾಜಿ ಯೋಧ ಅಲ್ಲ. ದೇಶದ ಒಳಗಿನ ಭ್ರಷ್ಟರು ಅನ್ನೋ ಮಹಾ ವೈರಿಗಳ ವಿರುದ್ಧಾ ಹೋರಾಟ ನಡಸಿರೋ ಸೈನಿಕಾ. ಅವರ ಬೆಂಬಲಕ್ಕ ನಾವೆಲ್ಲಾ ನಿಲ್ಲಬೇಕು. ಆಗ ದೇಶದಾಗ ಕೋಟಿ ಕೋಟಿ ನುಂಗೊ ಬಿಳಿ ಆನಿಗಳೆಲ್ಲಾನೂ ಸೊರಗಿ ಸಣ್ಣಗಾಗತಾವ! ಬನ್ನಿ ನಾವೆಲ್ಲಾ ಅಣ್ಣಾ ಹಜಾರೆಗ ಬೆಂಬಲಾ ಕೊಡೋಣ. ಹಜಾರೆ "ಅಣ್ಣ"ನ ಜೊತಿಗೆ ನಾವೆಲ್ಲಾ "ತಮ್ಮ"-"ತಂಗಿ"ಯರು ಧ್ವನಿ ಸೇರಿಸೋಣ.

ಜನ್ ಲೋಕಪಾಲ್ ಮಸೂದೆ ಆಂಗ್ಲ ಪ್ರತಿ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
http://www.annahazare.org/pdf/Jan%20lokpal%20bill%20by%20Expert%20%28Eng%29.pdf


"ಇದು"... "ಅದು" ಬಂದಾಗ ಬರಬೇಕಾ...?


"ಅದು" ಬಂದಾಗ ಬರಬೇಕಾ "ಇದು"
ಇದಿಹಾಂಗ "ಇದು" ಈಗ ಬಂದದ.
ಇತ್ತಾಗ "ಇದು" ಸೆಳಿತೈತಿ;
ಅತ್ತಾಗ "ಅದು" ಕಾಡತೈತಿ...!
ಎತ್ತಾಗ ಗಮನಾ ಕೊಡಬೇಕು?
ಇತ್ತಾಗ "ಇದು" ಬಿಡೋದಿಲ್ಲಾ;
ಅತ್ತಾಗ "ಅದ"ನ್ನ ಬಿಡಾಕ ಆಗಂಗಿಲ್ಲಾ.
ಥೂ... ಎರಡೂ ಒಟ್ಟಿಗೆ ಬರತಾವ!
"ಇದು" ಮತ್ತ "ಅದು" ಜೊತಿಗೇ...!
ಅಪ್ಪಾ, ಅಮ್ಮ, ಅಣ್ಣಾ, ಅಕ್ಕಾ...
ಎಲ್ಲಾರೂ "ಇದು" ಬಿಟ್ಟು,
"ಅದರ" ಕಡೆ ಲಕ್ಷ್ಯಾ ಕೊಡು ಅಂತ!
ಮನಸ ಮಾತ್ರ "ಇದರ" ಕಡೆ.
"ಅದರ" ಕಡೆ ಲಕ್ಷ್ಯಾ ಕೊಡಬೇಕು,
ಬದುಕಿಗೆ "ಅದು" ಮುಖ್ಯಾ ಆಗ್ಯದ.
ಆದರ "ಇದು" ಹ್ಯಾಂಗ ಬಿಡಬೇಕು?
ಹೊಸಾ ಗೆಳತಿಹಾಂಗ ಸೆಳಿತೈತಿ.
"ಅದು" ಬದುಕಿಗೆ ದಾರಿ,
"ಇದು" ಗೆಳತಿ ಜೊತಿ ಕುಂತ ಸೋಮಾರಿ!
ಇತ್ತಾಗ "ಅದು" ಬೇಕು;
ಅತ್ತಾಗ "ಅದು" ಬೇಕ ಬೇಕು...!
ಇತ್ತಾಗ "ಇದ"ನ್ನ ಹ್ಯಾಂಗ ಬಿಡಬೇಕು?
"ಇದು"-"ಅದು"; "ಅದು"-"ಇದು"
ಎರಡರ ನಡುವ ಸಿಕ್ಕು ಸಾಕಾಗ್ಯದ.
ನಿಮಗೂ ಹಂಗ ಆಗಿರಬೇಕಲ್ಲಾ?
ಹಿಂಗಂತ ಕೇಳತಾನ ಹುಡುಗಾ ಅವಾ;
"ಪಿಯುಸಿ" ಪರೀಕ್ಷಾಕ್ಕ ಕುಂತಾವಾ.
ಇತ್ತಾಗ ವಿಶ್ವಕಪ್ ಅನ್ನೋ "ಇದು",
ಅತ್ತಾಗ ಓದಬೇಕು ಅನ್ನೋ "ಅದು".
ಭಾಳ ದೊಡ್ಡ ಕಾಡಾಟ!
ಅದಕ್ಕ ಐಸಿಸಿಗೆ ಒಂದಿಷ್ಟು ಹಿಡಿ ಶಾಪಾ.
ಪರೀಕ್ಷಾ ಹೊತ್ತಿಗೇನ "ವಿಶ್ವಕಪ್" ಯಾಕ?

ಪೇಂಟರ್ ಆಗಾಕ ಹೊಂಟಾವಾ...!


ಎಂ.ಜಿ. ರೋಡು ತಡಾದು ಮುಂದ ಹೊಂಟಾಗ ದಾರ್ಯಾಗ ಸಿಕ್ರು ನಮ್ಮೂರಾಗಿನ ಹಳೆ ಪೇಂಟಿಂಗ್ ಕಲಿಸಿದ ಸರು. ಅಡ್ಡ ನಿಂದ್ರಿಸಿ; ಚಿತ್ರ ಸಂತಿ ನೋಡಾಕ ಬಂದೀನಿ ಅಂದ್ರು. ಅವಾಗ ಅವರಿಗ ಏನೋ ನೆಪ್ಪಾತು; ತಟ್ಟನ "ಪೇಂಟರ್ ಆಗಾಕ ಹೊಂಟಾವಾ; ಇದೇನು ಈಗ ಪೇಪರನ್ಯಾಗ ಬರಕೊಂಡು ಹೊಂಟಿ...?" ಅಂತ ಕೇಳಿದ್ರು. ಅದೇನು ಚೆಂದಾಗಿ ಚಿತ್ರಾ ಬರೀತಿದ್ದಿ; ಇದೇನು ಪೇಪರನ್ಯಾಗ ಕೆಲಸಾ ಮಾಡಕೊಂಡು ಹೊಂಟಿ? ಅಂತ ಮತ್ತೊಂದು ಪ್ರಶ್ನಾ ಕೇಳೇಬಿಡಬೇಕಾ. ಪೇಪರನ್ಯಾಗ ಛಲೋ ರೊಕ್ಕಾ ಕೊಡತಾರೇನು? ಹಿಂಗ ಮತ್ತೊಂದು ಪ್ರಶ್ನಾ ಹಾಕಿದ್ರು ಪೇಂಟಿಂಗ್ ಕಲಿಸಿದ ನನ್ನ ಸರು. ರೊಕ್ಕಾ ಮುಖ್ಯ ಅಲ್ಲೋ; ಮನಸಿಗೆ ಸಮಾಧಾನ ಸಿಕ್ಕಬೇಕು. ನಿನ್ನ ಮನಸು ಒಪ್ಪೋ ಹಾಂಗ ಕೆಲಸಾ ಮಾಡು; ಎಲ್ಲಾರಹಾಂಗ ಮಣ್ಣು ಮುಕ್ಕಾಕ ಹೋಗಬ್ಯಾಡ ಅಂತ ಕೊನೀಗ ಒಂದು ಉಪದೇಶಾನೂ ಕೊಟ್ರು. ಅವರನ್ನ ಹೋಟೆಲಿಗೆ ಬಿಟ್ಟು; ಮನಿಗೆ ಹೋಗಿಬಿಟ್ಟು, ಕಂಪ್ಯೂಟರಿನ್ಯಾಗ ಮೌಸ್ ಅನ್ನೋ ಕುಂಚಾ ಹಿಡದು ಒಂದು ಚಿತ್ರಾ ಬರದೆ. ಆಗ ಅನಸ್ತು ಇನ್ನೂ ನನ್ನ ಕೈಯ್ಯಾಗ ಕಲೆ ಐತಿ ಅಂತ...! ಆ ಒಂದು ಚಿತ್ರ ಇಲ್ಲೈತಿ ನೋಡ್ರಿ...!

ಹಿಂಗೂ ಬ್ಯಾಡ-ಹಾಂಗೂ ಬ್ಯಾಡ...!


ಅದೇನ್ ಆಗ್ಯದೋ ಗೊತ್ತಿಲ್ಲಾ ಈ ಜನಕ್ಕ.
ಹಿಂಗೂ ಬ್ಯಾಡ-ಹಾಂಗೂ ಬ್ಯಾಡ!
ಚೆಂದಾಂಗಿ ಹಿಂಗ ಇರತೀವಿ ಬಿಡ್ರಿ ಅಂದ್ರ;
ಸಂಪ್ರದಾಯದ ಹಂಗ್ಯಾಕ ಅಂತಾರ.
ನೀವು ಹೇಳಿಧಾಂಗನ ಆಗಲಿ ಅಂದ್ರ,
ನಾವು ಹೇಳಿಧಾಂಗ ಯಾಕಾಗಬೇಕು? ಅಂತಾರ.
ಹ್ಯಾಂಗ್ ಹೇಳಿದ್ರೂ ಹಾಂಗ್ಯಾಕ? ಹಿಂಗಾಗಬೇಕು!
ಹಿಂಗ-ಹಾಂಗ ಅನ್ನೋದ ಅವರ ಕೆಲಸಾ.
ಹ್ಯಾಂಗಾರ ಇರಲಿ; ಒಟ್ಟಿನ್ಯಾಗ
ರೊಳ್ಳಿ ತಗೀತಾರ; ಕೊಳ್ಳಿ ಹೊಡಿತಾರ.
ಅದಕ್ಕ ಅವರೀಗ ಬೇಕು ಇಲ್ಲದ ರೊಳ್ಳಿ.
ರೊಳ್ಳಿ ತಗದು ಕೊಳ್ಳಿ ಇಟ್ಟರನ ಸಮಾಧಾನ!
ಯಾಕಂದ್ರ? ಕೊಳ್ಳಿ ಕೆಂಡದಾಗ
ಅವರ ರೊಟ್ಟಿ ಬೇಯತದ!
ಅವರೀಗ ಸಂಪ್ರದಾಯಾ ಬೇಕು;
ಇವರೀಗ ಅದನ್ನ ಮುರಿಯೋ ಹಟಾ!
ಹಟಾ ಅಲ್ಲಾ ಅದು; ಅವರಿಗದು ಚಟಾ.
ತಣ್ಣಗ ಕುಂತಕೊಳ್ರೋ
ತು... ಅಪ್ಪಗಳಾ ಅಂತ...
ಗದಗಿನ ಗತ್ತಿನ್ಯಾಗ ಗದರೀಸಬೇಕು.
ಸೆಟ್ಲಿಮೆಂಟ್ ಹುಡುಗರ ತಾಕತ್ತಿನ್ಯಾಗ
ಹಿಡುದು ಗದಗಬೇಕು!
ಆವಾಗ ಬುದ್ದಿ ಬರತೈತಿ;
ಅವರೆಲ್ಲಾರ ಸದ್ದು ಅಡಗತೈತಿ.

ಕೊಲಂಬೊದಲ್ಲಿ "ಕ್ಲೆಮೋರ್ ಬಾಂಬ್" ಸಿಡಿದಾಗ ಬಚಾವ್ ಆದ ಬಡಜೀವಿ ನಾನು...!

ಕೊಲಂಬೊದ ಲಿಬರ್ಟಿ ಪಾರ್ಕ್ ಸಮೀಪದ ಕೊಳ್ಳುಪಿಟಿಯಾದಲ್ಲಿ ಬಾಂಬ್ ಬ್ಲಾಸ್ಟ್ ಆದ ಪ್ರದೇಶದ ಮ್ಯಾಪ್ ಇಲ್ಲಿದೆ ಗಮನಿಸಿ. ನಾನು ಇದ್ದ ಆಟೋ ರಿಕ್ಷಾ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಇದ್ದ ಕಾರ್ ನಡುವೆ ಇದ್ದ ಅಂತರ ಸುಮಾರು ನೂರು ಗಜಗಳು ಮಾತ್ರ. ನನ್ನ ನೆನಪಿನ ಆಧಾರದಲ್ಲಿ ಕಲ್ಪನೆ ಮಾಡಿಕೊಂಡು ಗ್ರಾಫಿಕ್ ಸಿದ್ಧಪಡಿಸಿದ್ದೇನೆ. ಅಂದು ನಾನು ಸುಮಾರು ಒಂದು ನಿಮಿಷ ತಡವಾಗಿ ಹೋಟೆಲ್ ನಿಂದ ಪ್ರಯಾಣ ಆರಂಭ ಮಾಡಿದ್ದರೆ ಖಂಡಿತವಾಗಿಯೂ ಬದುಕಿ ಉಳಿಯುತ್ತಿರಲಿಲ್ಲ. ಘಟನೆ ನಡೆದಿದ್ದು 2006 ಆಗಸ್ಟ್ 14ರಂದು (ಸೋಮವಾರ) ಮಧ್ಯಾಹ್ನ 1.15 ಹೊತ್ತಿಗೆ. ಒಂದು ನಿಮಿಷದ ಅಂತರದಲ್ಲಿ ನಾನು ಇದ್ದ ಆಟೋ ರಿಕ್ಷಾ, ಬಾಂಬ್ ಇದ್ದ ಆಟೋ ರಿಕ್ಷಾ ನಿಲ್ಲಿಸಿದ್ದ ಅಡ್ಡರಸ್ತೆಯಿಂದ ಸುಮಾರು ನೂರು ಗಜ ದೂರ ಸಾಗಿತ್ತು. ಆನಂತರ ನನ್ನ ಹಿಂದೆ ದೊಡ್ಡ ಸ್ಫೋಟ ಸಂಭವಿಸಿತ್ತು. ಅದರ ಪ್ರಭಾವ ಎಷ್ಟಿತ್ತೆಂದರೆ ನಾನಿದ್ದ ಆಟೋದ ಹಿಂದಿನ ಹೊದಿಕೆಯಲ್ಲಿ ಕೆಲವು ಕಬ್ಬಿಣದ ತುಣುಕುಗಳು ಹಾಗೂ ಸಿಮೆಂಟ್ ತುಂಡುಗಳು ಬಂದು ಸಿಕ್ಕಿಹಾಕಿಕೊಂಡಿದ್ದವು.

* * * * * * *


ಶ್ರೀಲಂಕಾದ ಕೊಲಂಬೊದಾಗ "ಕ್ಲೆಮೋರ್ ಬಾಂಬ್" ಸಿಡದಾಗ ಬಚಾವ್ ಆಗಿದ್ದ ಬಡಪ್ರಾಣಿ ನಾನು. ಹ್ಯಾಂಗ ಬದುಕಿದೆ, ಅಪಾಯದ ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದು ಹ್ಯಾಂಗ ಅನ್ನೋದನ್ನ ಹೇಳೋದಕ್ಕೂ ಮುಂಚೆ "ಕ್ಲೆಮೋರ್ ಬಾಂಬ್" ಬಗ್ಗೆ ಒಂದಿಷ್ಟು ವಿಷಯ್ಯಾ ಹೇಳಿಬಿಡತೀನಿ. ಅವತ್ತ ನಾನು ಕ್ಲೆಮೋರ್ ಬಾಂಬ್ ಸಿಡದಾಗ ಬಚಾವಾಗಿದ್ದು ಖಡ್ಗದ ತುದಿಯಿಂದ ಅಂತನ ಹೇಳಿದ್ದು ಯ್ಯಾಕ ಅಂದರ? ಆ ಬಾಂಬಿಗೆ ಹೆಸರು ಇಟ್ಟದ್ದ ಖಡ್ಗದ್ದು. ಸ್ಕಾಟ್ಲೆಂಡಿನ್ಯಾಗ ಭಾಳ ವರ್ಷದ ಹಿಂದ ಜನಪ್ರಿಯಾ ಆಗಿದ್ದ ಖಡ್ಗ "ಕ್ಲೆಮೋರ್" ಇದು ಚೂಪಾದ ತುದಿ ಇರೋಹಂತಾ ಭಾರಿ ಜಬರ್ದಸ್ಥ್ ಖಡ್ಗಾ ಅದು. ಯಾರನ್ನ ಸಾಯಿಸಬೇಕೋ ಅವರ ಕಡೀಗ ಸೀದಾ ಅದನ್ನ ನುಗ್ಗಸೋದು. ಹಾಂಗ ಮಾಡಿರೋಹಂತಾ ಖಡ್ಗ ಅದು. ಅದಕ್ಕ ಆ ಕ್ಲೆಮೋರ್ ಖಡ್ಗದ ಹೆಸರನ್ನ ಬಾಂಬಿಗೂ ಇಟ್ಟಾರ. ಅದು ಗುರಿ ಇಟ್ಟು ಸಾಯಿಸೋದಕ್ಕ ಅನಕೂಲಾ ಆಗೋಹಂತಾ ಬಾಂಬು.

ಅದ ಬಾಂಬಿನ ಮೊನಚಿಂದಾ ನಾನು ಅವತ್ತ ಶ್ರೀಲಂಕಾದ ಕೊಲಂಬೊದಾಗ ಸ್ವಲ್ಪದರಾಗ ಪಾರು ಆಗಿದ್ದೆ. ಆ ಘಟನಾ ನಡದಿದ್ದು 2006ರ ಆಗಸ್ಟ್ 14 ರಂದು. ಅವತ್ತ ಸೋಮವಾರ ಮಧ್ಯಾಹ್ನ 1.15ರ ಹೊತ್ತಿಗೆ ಆ ಘಟನಾ ನಡದಿತ್ತು. ಪಾಕಿಸ್ತಾನದ ರಾಜತಾಂತ್ರಿಕ ಬಶೀರ್ ವಾಲಿ ಮೊಹಮ್ಮದ್ ಅವರನ್ನಾ ಟಾರ್ಗೆಟ್ ಮಾಡಿಕೊಂಡು ಆ ಬಾಂ
ಬನ್ನ ತಮಿಳು ಟೈಗರ್ ಉಗ್ರರು ಸಿಡಿಸಿದ್ರು. ಆದರ ಅದರಾಗ ಬಶೀರ್ ವಾಲಿ ಅವರಂತೂ ಬಚಾವ್ ಆದ್ರು. ಸತ್ತಿದ್ದು ಏಳು ಮಂದಿ ಬ್ಯಾರೆಯವರು. ಅವತ್ತ ನಂದೂ ತಿಥಿ ಆಗೋದಿತ್ತು. ಅದೇನೋ ಅರವತ್ತು ಕ್ಷಣದಾಗ ಬಚಾವ್ ಆದೆ.

ನಾನು ಕೊಲಂಬೊಕ್ಕ ಹೋ
ಗಿದ್ದು ಶ್ರೀಲಂಕಾ, ಭಾರತ ಮತ್ತ ದಕ್ಷಿಣ ಆಫ್ರಿಕಾ ಆಡಬೇಕಾಗಿದ್ದ ಮೂರು ದೇಶಗಳ ಕ್ರಿಕೆಟ್ ಪಂದ್ಯಾಟಾ ವರದಿ ಮಾಡಾಕ. ಅಲ್ಲಿಗೆ ಹೋಗಿದಾಗಿನಿಂದ ಅತ್ತಾಗ ಜಾಫ್ನಾ ಸಮೀಪದಾಗ ಶ್ರೀಲಂಕಾ ಸೈನಿಕರು ಮತ್ತ ತಮಿಳು ಟೈಗರ್ ಉಗ್ರರ ನಡುವ ಭಾರಿ ಘಮಾಸಾನ್ ಯುದ್ಧಾ ನಡದಿತ್ತು. ಇತ್ತಾಗ ಶ್ರೀಲಂಕಾ ರಾಜಧಾನಿ ಕೊಲಂಬೊದಾಗ ಕೂಡ ಯುದ್ಧದ ಪ್ರಭಾವಾ ಕಾಣಸತಿತ್ತು. ಎಲ್ಲಾ ಕಡೀಗೂ ಭಯದ ವಾತಾವರಣಾ ಇತ್ತು. ಯಾವಾಗಾದ್ರೂ ಏನಾದ್ರೂ ಆದೀತು ಅನ್ನೋ ಭಯಾ ಜನರ ಕಣ್ಣಿನ್ಯಾಗ ತೇಲಾಡತಿತ್ತು. ಎಲ್ಲಿ ನೋಡಿದ್ರೂ ಸೈನಿಕರ ವಾಹನಾ ಓಡಾಡಿಕೊಂಡಿದ್ವು.

ಕೊಲಂಬೊಕ್ಕ ನಾನು ಕ್ರಿಕೆಟ್ ಪಂದ್ಯಾಟ ಶುರುವಾಗೊ ಎರಡು ದಿನಾ ಮೊದಲ ಹೋಗಿದ್ದೆ. ಅವತ್ತ ಆಗಲೇ ರಾತ್ರಿ ಆಗಿತ್ತು. ನಮ್ಮ ಪೇಪರಿನ ಇಂಗ್ಲೀಷ್ ಸಹೋದರ ಪೇಪರ್ ಆಗಿರೊ ಡೆಕ್ಕನ್ ಹೆರಾಲ್ಡಿನ ಹಿರಿಯ ಕ್ರಿಕೆಟ್ ವರದಿಗಾರ
ಕೌಶಿಕ್ ಆಗಲೇ ಒಂದು ದಿನಾ ಮುಂಚೆ ಅಲ್ಲಿಗೆ ಹೋಗಿ ಆಗಿತ್ತು. ನಮ್ಮ ಫೋಟೊ ಗ್ರಾಫರು ಅನಂತ ಸುಭ್ರಮಣ್ಯ ಅವರೂ ಅಲ್ಲಿಗೆ ಹೋಗಿದ್ರು. ನಾವು ಕೊಲಂಬೋದಾಗ ಉಳಕೊಂಡಿದ್ದು "ಸಿನಿಮನ್ ಗ್ರ್ಯಾಂಡ್" ಅನ್ನೋ ಹೋಟೆಲಿನ್ಯಾಗ. ಅದ ಹೊಟೇಲಿನ್ಯಾಗ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರರೂ ಇದ್ರು.

ಮೂರು ದೇಶಗಳ ಕ್ರಿಕೆಟ್ ಪಂದ್ಯಾಟ ಶುರುವಾಗೊದಕ್ಕೂ ಎರಡು ದಿನಾ ಮೊದಲ ಕ್ರಿಕೆಟ್ ಕ್ರೀಡಾಂಗಣಕ್ಕ ನಾನು, ಕೌಶಿಕ್, ಜಿ.ಕೃಷ್ಣನ್ (ಜಿಕ್ಕು), ಅನಂತ ಸುಭ್ರಮಣ್ಯ ಮತ್ತ ಒಂದೆರಡು ಬಂಗಾಲಿ ಪೇಪರ್ ವರದಿಗಾರರು ಒಟ್ಟಿಗೆ ಹೊರಡತಿದ್ವಿ. ಒಟ್ಟಿಗೇ ಮೂರು ಆಟೋ ಹಿಡಕೊಂಡು ಒಂದರ ಹಿಂದ ಒಂದರ ಹಾಂಗ ಹೋಗತಿದ್ವಿ. ಎರಡು ದಿನಾ ಹಾಂಗ ಮಾಡಿದ್ವಿ. ಆದರ ಕೊಲಂಬೊದಾಗ ಕ್ರಿಕೆಟ್ ಸರಣಿ ಆಡೋದಕ್ಕ ಅಷ್ಟೊತ್ತಿಗೆ ಆಗಲೇ ದಕ್ಷಿಣ ಆಫ್ರಿಕಾದೋರು ರೊಳ್ಳಿ ತಗದಿದ್ರು.

ಅವತ್ತ ಅಂದ್ರ ಬಾಂಬ್ ಸ್ಪೋಟ ಆದ ದಿನಾ, ಕೌಶಿಕ್ ಏನೋ ಕಾರಣಕ್ಕ ನಾನು ಆಮ್ಯಾಲ ಬರತೀನಿ ನೀನು ಹೋಗಿರು ಅಂದಾ. ನಮ್ಮ ಫೋಟೊಗ್ರಾಫರು ಅನಂತ ಸುಭ್ರಮಣ್ಯ ಮುಂಜಾನ್ಯಾಗ ಕ್ಯಾಮರಾ ಹೆಗಲಿಗೆ ಹಾಕ್ಕೊಂಡು ಹೊಂಟು ಹೋಗಿದ್ದಾ. ಅದಕ್ಕ ನಾನು ಮತ್ತ ಒಬ್ಬ ಬಂಗಾಲಿ ಪೇಪರ್ ವರದಿಗಾರ ಜೊತಿಗೆ ಕ್ರಿಕೆಟ್ ಸ್ಟೇಡಿಯಮ್ ಕಡೀಗೆ ಹೊಂಟಿವಿ. ನಮ್ಮ ಆಟೋ ರಿಕ್ಷಾ ದಿನಾ ಹೋಗತಿದ್ದದ್ದು ಗಾಲ್ ರೋಡು ಹಿಡಕೊಂಡು ಲಿಬಟರ್ಿ ಪ್ಲಾಜಾ ಮುಂದಿನ ಸರ್ಕಲಿನ್ಯಾಗ ಸುತ್ತಿಕೊಂಡು, ಕೊಳ್ಳುಪಿಟಿಯಾ ಏರಿಯಾದಾಗ ದೊಡ್ಡ ರಸ್ತೆ ಹಿಡಕೊಂಡು. ಅವತ್ತು ಹಾಂಗ ಹೊಂಟಿತ್ತು ನಮ್ಮ ಆಟೋ ರಿಕ್ಷಾ. ಆದ್ರ ಅವತ್ತ ಮೂರು ಆಟೋ ಸಾಲಾಗಿ ಹೊಂಟಿರಲಿಲ್ಲಾ. ಕೌಶಿಕ್ ಮತ್ತ ಕೃಷ್ಣನ್ ಮತ್ತ ಅನಂತ ಸುಭ್ರಮಣ್ಯ ಇರಲಿಲ್ಲಾ ಅದಕ್ಕ ಒಂದ ಆಟೋ ರಿಕ್ಷಾದಾಗ ಇಬ್ಬರು ಹೊಂಟಿದ್ವಿ. ನಮ್ಮ ಹಿಂದ ಇನ್ನೊಂದು ಆಟೋನ್ಯಾಗ ಬಂದೂಕು ಹಿಡಕೊಂಡಿದ್ದ ಶ್ರೀಲಂಕಾ ಆರ್ಮಿನವರೂ ಅದ ರೋಡಿನ್ಯಾಗ ನಮ್ಮ ಹಿಂದನ ಬರಾಕ ಹತ್ತಿದ್ರು. ಆದ್ರ ಅವರದ್ದು ದೊಡ್ಡ ಆಟೋ. ನಮ್ಮ ಗುಲ್ಬುರ್ಗಾ ಕಡೀಗ ಇರತಾವಲ್ಲಾ "ಟಾಂ ಟಾಂ ಆಟೋ" ಅಂಥಾ ಆಟೋನ್ಯಾಗ ಅವರು ಬರಾಕ ಹತ್ತಿದ್ರು. ಆದ್ರ ಸ್ವಲ್ಪ ದೂರ ಹ್ವಾದ ಮ್ಯಾಗ ಆ ಆಟೋ ನಮಗಿಂತಾ ಮುಂದ ಹೋತು.

ನಮ್ಮ ಆಟೋ ಒಂದು ರಸ್ತೇನ್ಯಾಗ ಟರ್...ಟರ್... ಸದ್ದು ಮಾಡಕೊಂಡು ಹೊಂಟಾಗ; ಅದರ ಹತ್ತರದಾಗ ಇನ್ನೊಂದ ಕಡಿಗ ಒಂದು ಜೀಪು, ಅದರ ಹಿಂದ ಎರಡು ಮೂರು ಒಂದ ಥರದ ಕಾರು ಅದರ ಹಿಂದ ಮತ್ತೊಂದು ಜೀಪು, ಅದರ ಹಿಂದ ಮತ್ತ ಎರಡು ಕಾರು... ಹಿಂಗ ಸಾಲಾಗಿ ಹೊಂಟಿದ್ವು. ಆಗ ನಮ್ಮ ಮುಂದಿಂದಾ ಜೀಪು ಮತ್ತ ಎರಡು ಕಾರು ಪಾಸ್ ಆದವು. ಇನ್ನೊಂದು ಜೀಪು ಅದರ ಹಿಂದ ಹೋಗಿ, ಒಂದು ಅಧರ್ಾ ನಿಮಿಷ ಆಗಿತ್ತು. ಅಷ್ಟರಾಗ ಕಿವಿ ಪಟಲಾ ಕಿತ್ತು ಬರೋಹಾಂಗ ಸದ್ದು ಆತು. ಇನ್ನೊಂದು ಕ್ಷಣದಾಗ ಜನಾ ಓಡಾಕ ಹತ್ತಿದ್ರು. ನಾವು ಆಟೋ ಇಳದು ಓಡಿದ್ವಿ. ಹಿಂದ ನೋಡತೀವಿ ದೊಡ್ಡ ಬೆಂಕಿ, ಅದರ ಜೊತೀಗ ಕಪ್ಪಗ ಹೊಗಿ ಬರಾಕ ಹತ್ತಿತ್ತು. ಆಮ್ಯಾಗ ಅಲ್ಲಿದ್ದ ಪೊಲೀಸ್ರು, ಜನಾ, ಅಂಗಡಿಯವ್ರು ಬಾಂಬು ಅಂತ ಹೇಳಿದ್ರು. ಅಷ್ಟ ಅಲ್ಲಾ ನೀವು ಸ್ವಲ್ಪದ್ರಾಗ ಉಳಕೊಂಡ್ರಿ ಅಂತನೂ ಹೇಳಿ; ಜೀವ ಉಳದಿದ್ದಕ್ಕ ಅಭಿನಂದನಾನೂ ಮಾಡಿದ್ರು. ನಮ್ಮ ಆಟೋದಾವಾ ಅಂತೂ ಜಿಂವ ಉಳಿತಲ್ಲಾ ಅನ್ನೊ ಭಾರಿ ಸಂತೋಷದಾಗ ರೊಕ್ಕಾ ಸೈತ ತಗೋಲಿಲ್ಲಾ. ನಾವು ಜರ್ನಲಿಸ್ಟು ಹತ್ತರದಾಗ ಹೋಗಿ ನೋಡಕೊಂಡ ಬರತೀವಿ ಅಂತ ಹೇಳಿ ಆ ಆಟೋದವನ್ನ ಕಳಿಸಿದ್ವಿ.

ಬಂಗಾಲಿ ಪೇಪರಿನ ವರ
ದಿಗಾರಾ ಮತ್ತ ನಾನು ಹತ್ತಿರದಾಗ ಹೋಗಿ ನೋಡಿದಾಗಿನ ದೃಶ್ಯಾ ಇನ್ನೋ ನನ್ನ ಕಣ್ಣಮುಂದ ಕಟ್ಯದ. ಎಲ್ಲಾಕಡಿಗ ಹೆಣಾ, ರಕ್ತಾ...! ನೋಡಾಕ ಆಗದ ಹಾಂಗ ಇತ್ತು. ಆದ್ರ ಎಲ್ಲಾ ಪೊಲೀಸು ಮತ್ತ ಆರ್ಮಿನೋರು ಪಾಕಿಸ್ತಾನದ ರಾಜತಾಂತ್ರಿಕಾ ಉಳದಲ್ಲಾ ಅಂತಾ ಅವನ್ನ ಇನ್ನೊಂದು ಕಾರಿನ್ಯಾಗ ಕುಂಡ್ರಿಸಿಕೊಂಡು ಹೊಂಟಿದ್ರು. ಬ್ಯಾರೆ ಪೊಲೀಸ್ರು ಹೆಣಾದ ಪರಿಚಯಾ ಏನಾದ್ರು ಸಿಗತದೇನೋ ಅಂತ ಹುಡಿಕಿ ಅಷ್ಟೊತ್ತಿಗ್ಯಾಗಲೇ ಸಾಗ ಹಾಕಾಕ ಹತ್ತಿದ್ರು. ಅದ ಹೊತ್ತಿಗೆ ಅಲ್ಲಿಗೆ ಭಾರತದಿಂದ ಕ್ರಿಕೆಟ್ ವರದಿ ಮಾಡಾಕ ಬಂದಿದ್ದ ಟೆಲಿವಿಜನ್ ಚಾನಲ್ ತಂಡಾನೂ ಬಂತು. ಎಲ್ಲಾನೂ ಕಿರಿಚಿಕೊಂಡು ವರದಿ ಮಾಡಾಕ ಹತ್ತಿದ್ರು ಟಿವಿ ನ್ಯೂಸ್ ಜನಾ.

ಅದ ಹೊತ್ತಿಗ ನನ್ನ ಮೊಬೈಲ್ ರಿಂಗ್ ಆತು. ಇನ್ನೊಂದ ಕಡಿಯಿಂದ ಕೌಶಿಕ್ ಫೋನ್ ಮಾಡಿದ್ದ. ಬಾಂಬ್ ಸ್ಪೋಟ ಆತು; ಸಣಿ ಕ್ಯಾನ್ಸಲ್ ಆಗತದ ಅಂತ. ನೀನು ಸೇಫ್ ಆಗಿ ಸ್ಟೇಡಿಯಂ ತಲುಪಿದಿಯ್ಯಾ ಅಂತ ಕೌಶಿಕ್ ಕೇಳಿದಾ. ನಾನು ಹೇಳಿದೆ ನನ್ನ ಹಿಂದನ ಬಾಂಬ್ ಸ್ಪೋಟ ಆತು. ಕಣ್ಣಾರೆ ಪರಿಸ್ಥಿತಿ ನೋಡಾಕ ಹತ್ತೀನಿ ಅಂತ ಹೇಳಿದೆ. ಸಂಜಿ ಹೊತ್ತಿಗೆ ಎಲ್ಲಾ ಘಟನೆ ಸೇರಿಸಿ ನಮ್ಮ ಪೇಪರಿಗೆ ವರದಿ ಕಳಿಸಿ ಹೋಟೆಲ್ಲಿಗೆ ಬಂದೆ. ಆವಾಗ ಕೃಷ್ಣನ್ ಅಂದರ ನಮ್ಮ ಎಲ್ಲಾರ ಪ್ರೀತಿಯ "ಜಿಕ್ಕು" ಕೇಳಿದಾ "ನಾಳೆ ಪೇಜ್ ಒನ್ ಸ್ಟೋರಿನಾ ನಿಂದು?" ಅಂತಾ. ನಾನು ಸುಮ್ಮನ ನಕ್ಕೆ!

ಹೀಗೊಂದು ಆಬ್ಸರ್ವೇಷನ್...!


ನೀವು ನೋಡಿರತೀರಿ ಅಂತ ಅನಕೊಂಡೀನಿ. ನಾನಂತೂ ಭಾಳ ಸಲಾ ನೋಡಿನಿ. ಅಂಥಾ ಸೀನ್ ನೋಡಿದಾಗೆಲ್ಲಾ; ಹಿಂಗ್ಯಾಕ... ಹಿಂಗ್ಯಾಕ...? ಅಂತ ಭಾಳ ಸಲಿ ನನ್ನನ್ನ ನಾನು ಕೇಳಕೊಂಡೀನಿ. ಈ ಹುಡುಗೀರು ಹಿಂಗ್ಯಾಕ ಮಾಡತಾರ. ಒಂದು ಕಣ್ಣಿಗೆ ಬೆಣ್ಣಿ-ಒಂದ ಕಣ್ಣಿಗೆ ಸುಣ್ಣಾ..? ಅಂತಾನೂ ಭಾರಿ ದೊಡ್ಡ ಚಿಂತಕನಹಾಂಗ ಚಿಂತಿ ಮಾಡೀನಿ. ಚಿಂತಿ ಮಾಡೋ ವಿಷಯಾನ ಅಲ್ಲ; ಆದ್ರೂ ಚಿಂತಿ ಮಾಡೀನಿ. ಅದೇನೋ ಅಂತಾರಲ್ಲಾ ಉದ್ಯೋಗ ಇಲ್ಲದ ಬಡಿಗ್ಯಾ... ಅದೇನೋ ಮಾಡಿದ್ದಂತ!

ಏ... ಭಾಳ ದೊಡ್ಡ ಪಲ್ಲವಿ ಹಾಡಿದ್ದಾತು; ಚರಣಾ ಶುರು ಮಾಡೋ ಬೋ... ಮಗನೇ ಅಂತ ನಮ್ಮ ಹುಬ್ಬಳ್ಳಿ ಹುಡುಗೋರ್ ಹಾಂಗ ಹಿಗ್ಗಾಮುಗ್ಗಾ ಮನಿಸಿನ್ಯಾಗ ಬೈಬ್ಯಾಡ್ರಿ. ನೀವು ಮನಸಿನ್ಯಾಗ ಬೈಕೋಳೋದುಕ್ಕೂ ಮೊದಲ ವಿಷಯಕ್ಕ ಬರತೀನಿ. ಇದು ನಮ್ಮೂರಿನ ವಿಷಯಾ ಅಲ್ಲ. ಇದು ಬೆಂಗಳೂರಿನ ವಿಷಯಾ... ಬೆಂಗಳೂರಿನ ಹುಡಗೀರ ವಿಷಯಾ. ನೀವೂ ನೋಡಿರತೀರಿ; ಆದರ ನನ್ನಹಾಂಗ ಆ ವಿಷಯದಾಗ ಚಿಂತಿ ಮಾಡಿ ಬರಿಯೋದಕ್ಕ ಹೋಗಿಲ್ಲಾ ಅಂದಕೋತಿನಿ. ಒಂದಿಷ್ಟು ಮಡಿವಂತಿಕಿ ಬಿಟ್ಟು ನೋಡಿ, ಚಿಂತಿ ಮಾಡಿ, ಬರಿಬೇಕು ಅಂತ ಯೋಚನಿ ಮಾಡಿ... ಈ ವಿಷಯದ ಮ್ಯಾಗ ಬರಿಯಾಕ ಕುಂತೋರ್ರು ಯಾರೂ ಇಲ್ಲಾ ಅಂತ ಅನ್ನಕೋತೀನಿ.

ಈ ವಿಷಯಾನ ಹಂಗದ, ಸ್ವಲ್ಪ "ಸಿ" ಗ್ರೇಡ್ ಪ್ರೇಕ್ಷಕರಿಗೆ ಮಾಡಿದ ಸಿನಿಮಾದಹಾಂಗ. ಬೆಂಗಳೂರಿನ್ಯಾಗ ಇಂಥಾ "ಸಿ" ಗ್ರೇಡ್ ಸಿನಿಮಾದಾಗಿನ ದೃಶ್ಯದ ಹಾಂಗ ಕೆಲವು ರಿಯಲ್ ಸೀನ್ ಕಾಣಸತಾವ. ಅವುಗಳನ್ನ ಸೂಕ್ಷ್ಮವಾಗಿ ನೋಡ್ರಿ ನಿಮ್ಮ ಮನಿಸಿನ್ಯಾಗ ನನ್ನ ಮನಸಿನ್ಯಾಗ ಹುಟ್ಟಿಧಾಂಗ ಒಂದಿಷ್ಟು ಪ್ರಶ್ನೆ ಏಳತಾವ.

ಮ್ಯಾಲೆ ಒಂದು ಚಿತ್ರಾ ನೋಡೀದಿರಲ್ಲಾ. ಅದನ್ನ ಸರಿಯಾಗಿ ನೋಡ್ರಿ. ನಾನು ಏನು ವಿಷಯಾ ಹೇಳಾಕ ಹೊಂಟೀನಿ ಅಂತ ನಿಮಗೂ ಒಂದಿಷ್ಟು ಅರ್ಥ ಆಗಭೋದು. ಬೆಂಗಳೂರಿನ್ಯಾಗ ಇಂಥಾ ದೃಶ್ಯಾ ಸಾಕಷ್ಟು ನೋಡಾಕ ಸಿಗತಾವು. ಇಂಥಾ ದೃಶ್ಯಾ ನೋಡಿದಾಗೆಲ್ಲಾ ಯಾಕಪ್ಪಾ ಈ ಹುಡುಗೀರು ಹಿಂಗ ಅಂತ ಅನಿಸಿದ್ದು ಖರೆ.

ಹುಡುಗೀರು ಎದಿ ಕವಲು ಕಾಣೋಹಂಗ ಡ್ರೆಸ್ಸು ಹಾಕ್ಕೊಂಡು ಬಂದಿರ್ತಾರ. ಆದ್ರ ಮಜಾ ನೋಡ್ರಿ; ಹಾಂಗ ಡ್ರೆಸ್ ಹಾಕ್ಕೊಂಡೋರು ರಸ್ತೆಯಲ್ಲಿ ನಡಕೊಂಡು ಹೋಗೋವಾಗ ಕೂದಲಾನ ಎಳದೆಳದು ಎದೆ ಕವಲು ಮುಚ್ಚಿಕೊಳ್ಳೋ ಭಾರಿ ಸಾಹಸಾ ಮಾಡ್ತಿರ್ತಾರ. ಅದನ್ನ ನೋಡಿದಾಗ ನನಗಂತೂ ಅನಿಸಿದ್ದು ಹಿಂಗ "ಯಾಕಾರ ಹಾಕ್ಕೋಬೇಕು ಇಂಥಾ ಡ್ರೆಸ್ಸು? ಹಾಕ್ಕೊಂಡು ಬೀದಿಗೆ ಬಂದಾದ ಮ್ಯಾಗ ಅರೆಬಿಚ್ಚಿದ ಎದೆಯನ್ನ ಹಿಂಗ ಕೇಶದಿಂದ ಮುಚ್ಚುವ ಸಾಹಸಾ ಯಾಕ?" ಅಂತ.

ಒಂದೋ ಮನ್ಯಾಗಿಂದನ ಎದೆ ಮುಚ್ಚಿಕೊಳ್ಳೋ ಹಾಂಗ ಡ್ರೆಸ್ಸು ಹಾಕ್ಕೊಂಡು ಬರಬೇಕು. ಇಲ್ಲಾ ಅರ್ಧ ಎದಿ ಬಿಟ್ಟುಕೊಂಡ ಬಂದಮ್ಯಾಗ ಅದನ್ನ ಕೂದಲಿಂದಾ ಮುಚ್ಚಿಕೊಳ್ಳೋ ಸಾಹಸ ಮಾಡೋದು ಬಿಡಬೇಕು. ಇನ್ನೊಂದು ಮಜಾ ವಿಷಯಾ ಐತಿ; ಹಿಂಗ ಅರ್ಧ ಎದಿ ಬಿಟ್ಟುಕೊಂಡು ಬಂದ ಹುಡುಗೀರು ಬ್ಯಾರೆ ಜನರ ಮುಂದ ಹಿಂಗ ಕೂದಲು ಎಳುದು ಎದಿಮ್ಯಾಗ ಹಾಕ್ಕೋತಾರ. ಆದರ ಅವರು ತಮ್ಮ ಗೆಳಿಯಾ (ಬಾಯ್ ಫ್ರೆಂಡು) ಎದುರಿಗೆ ಬಂದಾ ಅಂದಕೂಡಲೇ ಎಲ್ಲಾ ಕೂದಲನ್ನೂ ಬೆನ್ನಿನ ಹಿಂದ ಹಾಕ್ಕೊಂಡು ಧೈರ್ಯದಿಂದ ಹಾಗೂ ಪ್ರೀತಿಯಿಂದಾ ತಮ್ಮ ಹೃದಯ ಇಲ್ಲಿದೆ ಅಂತಾ ತೆಗೆದು ತೋರಿಸೋಹಾಂಗ ನಿಲ್ಲತಾರ.

ಇಂಥ ಹುಡುಗೀರಿಗೆ ನನ್ನದೊಂದು ಪುಕ್ಕಟೆ ಸಲಹೆ ಅಂದ್ರ; ನೀವು ನಿಮ್ಮ ಗೆಳಿಯಾಗ ಮಾತ್ರ ಹಿಂಗ ಒಂದಿಷ್ಟು ಅಂಗ ದರ್ಶನ ಮಾಡಿಸೋ ಯೋಚನೆ ಇದ್ದು; ಬ್ಯಾರೆಯವರು ನೋಡಬಾರದು ಅಂತ ಅನಕೊಂಡಿದ್ರ ಹಿಂಗ ಮಾಡ್ರಿ... ಹ್ಯಾಂಗ ಅಂದ್ರ; ಮನಿಯಿಂದ ಹೊಂಡೊವಾಗ ಒಂದು ಶಾಲು ಇಲ್ಲಾ ದುಪಟ್ಟಾ ಹೊದ್ದುಕೊಂಡು ಬರ್ರಿ, ನಿಮ್ಮ ಗೆಳಿಯಾ ಭೇಟಿ ಆದಾಗ ಅದನ್ನ ತೆಗದು ಸಂತೋಷದಿಂದಾ ಅವನ ಮುಂದೆ ಹೆಂಗ ಬೇಕಾದರೂ ನಿಲ್ರಿ. ಅದನ್ನ ಬಿಟ್ಟು; ಅರೆಬರೆ ಬಟ್ಟೆ ಹಾಕ್ಕೊಂಡು ಕೂದಲಿನ ಕರ್ಟನ್ನು ಎಳಿದು ಮುಚ್ಚಿಕೊಳ್ಳೋ ಪ್ರಯತ್ನಾ ಮಾಡಬ್ಯಾಡ್ರಿ ಅಂತ ನನ್ನ ಅಕ್ಕ-ತಂಗೀರ ಸಮಾನ ಹುಡುಗೀರೆಲ್ಲಾರಿಗೂ ಹೇಳತೀನಿ!

ಭೀಮಸೇನ್ ಜೋಶಿ ಅವರ ಎರಡು ಓವರ್ ಬ್ಯಾಟಿಂಗ್


ನಮ್ಮೂರಿನ ಮಹಾ ಗಾಯಕಾ ಭೀಮಸೇನ್ ಜೋಶಿ ಅವರು ನಮ್ಮನ್ನ ಬಿಟ್ಟು ಹೋದ್ರು. ಅದಕ್ಕ ಭಾಳ ಧುಕ್ಕಾ ಆತು. ನಮ್ಮೂರಿನ ಇಬ್ಬರು ಮಹಾ ಗಾಯಕರು ಒಬ್ಬರಾದಮ್ಯಾಗ ಒಬ್ರು ಹ್ವಾದ್ರು. ಅದಕ್ಕ ಭಾರಿ ಧುಕ್ಕಾ ಆಗ್ಯದ. ಪಂಡಿತ್ ಪುಟ್ಟರಾಜ ಗವಾಯಿಗೋಳು ಹ್ವಾದ್ರು; ಆಮ್ಯಾಗ ಪಂಡಿತ್ ಭೀಮಸೇನ್ ಜೋಶಿಯವ್ರು ಹ್ವಾದ್ರು. ಇಬ್ರೂ ದೊಡ್ಡ
ಗಾಯಕ್ರು. ದೇಶಾ ಮಾತ್ರ ಅಲ್ಲ ವಿದೇಶಾನೂ ಮೆಚ್ಚಿಕೊಂಡಿದ್ದ ಗಾಯಕ್ರು ಅವ್ರು. ಅಂಥಾ ಗಾಯಕ್ರು ನಮ್ಮೂರಿನವ್ರು ಅಂತ ಹೇಳಿಕೊಳ್ಳಾಕ ಹೆಮ್ಮೆ ಆಗ್ತತ.

ಗವಾಯಿಗಳನ್ನ ಮಠದಾಗ ಪಾದ ಮುಟ್ಟಿ ನಮಸ್ಕಾರಾ ಮಾಡಿ ಆಶಿರ್ವಾದಾ ಪಡೀತಿದ್ವಿ. ಅವ್ರಿಗೆ ನಮ್ಮ ಊರಿನ್ಯಾಗ ದೇವ್ರ ಸ್ಥಾನ. ಭೀಮಸೇನ್ ಜೋಶಿ ಅವರೂ ಹಾಂಗ ಇದ್ರು. ದೇವರಹಾಂಗ ಇದ್ದ ಮನುಷಾರು ಅವರು. ಯಾರಿಗೂ ಕೆಟ್ಟದ್ದು ಮಾತಡಿದ್ದು ನಾವಂತೂ ಊರಾಗಿದ್ದವ್ರು ಕೇಳಿಲ್ಲಾ. ಹಾಡಿಕೊಂಡು, ಹಾಡು ಕೇಳಿಸಿ ಸಂತೋಷಾ ಪಡತಿದ್ರು.

ನಾನು ಸಣ್ಣವಾಗಿದ್ದಾಗ ಅವರನ್ನ ಮೂರು-ನಾಕ್ ಬಾರಿ ನೋಡಿದ್ದೆ. ಹತ್ತಿರದಾಗಿಂದ ಮಾತಾಡಿಸಿದ್ದೆ, ಮಜಾ ಅಂದ್ರ ಒಮ್ಮೆ ಅವರ ಜೊತಿಗೆ ಕ್ರಿಕೆಟ್ ಆಟಾನೂ ನಮ್ಮ ಗೆಳೆಯಾರ ಆಡಿದ್ದೆ. ಆಮ್ಯಾಗ ನೋಡಿದ್ದು ಒಮ್ಮೆ ಪುಣೆನ್ಯಾಗ ನಮ್ಮ ಗೆಳಿಯಾ ಸುನಿಲ್ ಮರಾಠೆ ಹೋಟೆಲಿನ್ಯಾಗ. ಆವಾಗ ಅವರ ಜೊತಿಗೆ ಮಾತಾಡಿ, ಗದಗಿನ ನಮ್ಮ ಓಣ್ಯಾಗ ಒಮ್ಮೆ ಕ್ರಿಕೆಟ್ ಆಡಿದ್ದನ್ನ ನಾನು ಮತ್ತ ಸುನಿಲ್ ಮರಾಠೆ ನೆನಪಿಸಿದ್ವಿ. ಆವಾಗ ಅವ್ರು "ಭಾಳ ದೊಡ್ಡವ್ರ ಆಗಿರಲ್ಲಾ" ಅಂತ ಹೇಳಿದ್ದು ಇನ್ನು ನನ್ನ ನೆನಪಿನ್ಯಾಗ ಐತಿ.

ಸುನಿಲ್ ಮರಾಠೆ ಗದಗಿನಿಂದ ಹ್ವಾದಮ್ಯಾಗ, ಪುಣೆನ್ಯಾಗ ಹೋಟೆಲ್ ಮಾಡಿಕೊಂಡು ದೊಡ್ಡ ಹೋಟೆಲ್ ಉದ್ಯಮಿ ಆದಾವ. ಭಿಮಸೇನ್ ಜೋಶಿ ಅವರು ಆಗಾಗ ಅವನ ಹೋಟೆಲಿಗೆ ಬರತಿದ್ರು. ನಾನೂ ಒಮ್ಮೆ ಹಿಂಗ ಹೋಗಿದ್ದಾಗ ಅಲ್ಲೆ ಸಿಕ್ಕಿದ್ರು. ಗರುಡರ ಮನಿ ಹುಡುಗಾ ಅಂತ ಹೇಳಿ ನೆನಪು ಮಾಡಿಕೊಟ್ಟಾಗ "ವಲ್ಲಭನ ಮಗಾ ಏನು...?" ಅಂತ ಕೇಳಿದ್ರು. ನಾನು "ಹೌದ್ರಿ; ಅವತ್ತ ನಾವು ಸಣ್ಣವ್ರು ಇದ್ದಾಗ ನಿಮ್ಮನಿ ಹಿಂದಿನ ಓಣಿನ್ಯಾಗ ಕ್ರಿಕೆಟ್ ಆಡಿತಿದ್ವಿ. ಅವತ್ತೊಮ್ಮೆ ನೀವು ನಮ್ಮ ಜೊತಿಗೆ ಆಟಾ ಆಡಿದ್ರ್ಯಲ್ಲಾ...!" ಅಂತ ಹೇಳಿ ನೆನಪು ಮಾಡಿಕೊಟ್ಟಿದ್ದೆ. ಆವಾಗ ಅವರು ಸಣ್ಣ ಮಕ್ಕಳಹಾಂಗ ನಕ್ಕಿದ್ದು ಇನ್ನೂ ಕಣ್ಣಮುಂದ ಕಟ್ಟಿಧಾಂಗ ಅದ.

ಗದಗದಾಗ ನಮ್ಮ ಮನಿ ಮತ್ತ ಗುರಾಚಾರ್ ಜೋಶಿ (ಭೀಮಸೇನ್ ಜೋಶಿ ತಂದೆ) ಅವರ ಕಟ್ಟಿದ ಮನಿ ಬೆನ್ನಬೆನ್ನಿಗೆ ಅವ. ಈಗೂ ಏನೂ ಬದಲಾಗಿಲ್ಲ. ಗದಗಿಗೆ ಬಂದಾಗ ಅವರು ತಮ್ಮ ಮಲ್ತಾಯಿನ್ನ ನೋಡಾಕ ಅಲ್ಲಿಗೆ ಬರತಿದ್ರು. ನಮಗ ಜೋಶಿ ಅವರ ಮನ್ಯಾನ ಎಲ್ಲಾರ ಜೊತಿಗೂ ಸಲಿಗಿ ಇತ್ತು. ಭೀಮಸೇನ ಜೋಶಿ ಅವರ ತಮ್ಮಂದ್ರಾದ ಸುಶಿಲೇಂದ್ರ ಜೋಶಿ, ವಾದಿರಾಜ ಜೋಶಿ, ಜಯತೀರ್ಥ ಜೋಶಿ ಎಲ್ಲಾರ ಜೊತಿಗೆ ಸಂಪರ್ಕ ಇತ್ತು. ಜಯತೀರ್ಥ ಜೋಶಿ ಮತ್ತ ಸುಶಿಲೇಂದ್ರ ಜೋಶಿ ಅವ್ರು ಅಭಿನಯರಂಗದಾಗ ನಾಟಕ ಮಾಡಿಸಿದ್ರ ನಂದೂ ಒಂದು ಪಾತ್ರ ಅದರಾಗ ಇದ್ದ ಇರತಿತ್ತು. ಒಟ್ಟಿನ್ಯಾಗ ಅದು ಒಂದ ರೀತಿನ್ಯಾಗ ಕಲೆಯ ನಂಟು.

ಭೀಮಸೇನ ಜೋಶಿ ಅವರ ಗಾಯನ ಕಾರ್ಯಕ್ರಮಾ ಆಗಾಗ ನಮ್ಮೂರಿನ್ಯಾಗು ನಡೀತಿತ್ತು. ಸುಮಾರು ಹದಿನೆಂಟು ವರ್ಷದ ಹಿಂದ ಇರಬೇಕು; ನಮ್ಮ ಶಾಲಿ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಾಗನ ಜೋಶಿ ಅವರ ಗಾಯನ ಸಭಾ ಇತ್ತು. ಒಂದ ದಿನಾ ಮೊದಲ ಅವರು ಅಲ್ಲಿಗೆ ಬಂದಿದ್ರು. ಗದಗನ್ಯಾಗ ಅವರಿಗೆ ಮತ್ತ ಬಂದ ವಾದ್ಯ ಸಾಂಗತ್ಯದವರಿಗೆ ನಮ್ಮೂರಿನ್ಯಾಗ ಮಾತ್ರ ದೊಡ್ಡದು ಅನ್ನೋಹಂಥಾ ಸಣ್ಣದೊಂದು ಹೋಟೆಲಿನ್ಯಾಗ ಉಳಕೊಳ್ಳೊ ವ್ಯವಸ್ಥಾ ಮಾಡಿದ್ರು.

ಜೋಶಿ ಅವರು (ನಮ್ಮ ಗದಗಿನ್ಯಾಗ ಎಲ್ಲಾರೂ ಭೀಮಸೇನ ಜೋಶಿ ಅವರನ್ನ "ಜೋಶಿಯವರು" ಅಂತಾನ ಕರಿಯೋದು. ಹೆಸರು ಹಿಡದು ಕರಿಯೋದಿಲ್ಲಾ; ಅಡ್ರೆಸ್ ಹಿಡದ ಕರಿಯೋದು) ಬೆಳಿಗ್ಗೆನ ಅವರ ತಂದಿ ಕಟ್ಟಿರೊ ಮನಿಗೆ ಬಂದಿದ್ರು. ಆ ಹೊತ್ತಿನ್ಯಾಗ ನಮ್ಮ ಓಣಿ ಒಳಗ ನಾವೆಲ್ಲಾರೂ ಗೆಳಿಯಾರು ಸೇರಿಕೊಂಡು ಕ್ರಿಕೆಟ್ ಆಡತಿದ್ವಿ. ಸಣ್ಣವ್ರು ಅಷ್ಟ ಅಲ್ಲ ನಮ್ಮ ಕ್ರಿಕೆಟ್-ಸಿನಿಮಾ ಗೆಳಿಯಾರು ಅನಿಸಿಕೊಂಡೋರೊಳಗ ದೊಡ್ಡೋರು ಇದ್ರು. ನಾವೆಲ್ಲಾ ಚಣ್ಣಾ ಹಾಕ್ಕೊತಿದ್ವಿ. ಅವರು ಪೈಜಾಮಾ, ಲುಂಗಿ, ಪ್ಯಾಂಟು ಹಾಕ್ಕೊತಿದ್ರು.

ಅವತ್ತ ಕ್ರಿಕೆಟ್ ಆಡತಿದ್ದೋರಾಗ ದೊಡ್ಡೋರು ಅಂದ್ರ ಮಮ್ಮಿಗಟ್ಟಿ ಸರ್ (ಇವರು ಕೊನಿವರಿಗೂ ಭ್ರಹ್ಮಚಾರಿ ಆಗಿನ ಉಳಿದಿದ್ರು. ಆವಾಗ ಅವರಿಗ ಐವತ್ತ ವರ್ಷಾ ಇದ್ದಿರಭೌದು.), ಐಯ್ಯನಗೌಡ್ರ ಮನಿ ಹಿರಿ ಮಗಾ ಶಿವು ಮತ್ತ ಹಾದಿಮನಿ ಅವರ ಮನ್ಯಾಗಿನ ಶೇಕಣ್ಣಾ. ಸಣ್ಣವರು ಅಂದ್ರ ನಾನು, ಸುನಿಲ್ ಮತ್ತ ದೀಪಕ್ ಮರಾಠೆ, ಸುಧೀರ್ ಪೂಜಾರ, ಅಯ್ಯನಗೌಡ್ರ ಮನಿ ಹುಡುಗರಾದ ಮುನ್ನಾ ಮತ್ತ ಗಂಗೂಲಿ (ಇದು ಸೌರವ್ ಗಂಗೂಲಿ ಅಲ್ಲ; ನಮ್ಮ ಗೆಳಿಯಾನ ಹೆಸರ ಗಂಗೂಲಿ) ಇದ್ವಿ.

ಅಯ್ಯನಗೌಡ್ರ ಮನಿ ಕಾಂಪೌಂಡ್ ಗ್ವಾಡಿಮ್ಯಾಗ ಇದ್ದಿಲು ತಗೊಂಡು ಸ್ಟಂಪ್ ಬರದು, ಸುಶಿಲೇಂದ್ರ ಜೋಶಿ ಸ್ಪೋರ್ಸ್ಟ್ ಅಂಗಡಿನ್ಯಾಗಿಂದ ತಂಡ ಬ್ಯಾಟು ಮತ್ತ ಕೆಂಪ್ "ಎಂಆರ್ಎಫ್" ಬಾಲು ತಗೊಂಡು ಕ್ರಿಕೆಟ್ ಆಡಾಕ ಹತ್ತಿದ್ವಿ. ಅದ ಹೊತ್ತಿನ್ಯಾಗ ಭೀಮಸೇನ ಜೋಶಿ ಅವರು ಓಣಿ ಸುತ್ತಿ ನೋಡಿಕೊಂಡು ಹೋಗಣಂತ ಆಕಡಿಗೆ ಬಂದಿದ್ರು. ಜೋಶಿ ಅವರು ಬಂದ್ರು ಅಂತ ಆಟ ನಿಲ್ಲಿಸಿ, ಎಲ್ಲಾರೂ ಅವರಿಗೆ ನಮಸ್ಕಾರ ಮಾಡಿದ್ವಿ. ಮಮ್ಮಿಗಟ್ಟಿ ಸರ್ ಇಂಗ್ಲಿಷಿನ್ಯಾಗೂ ಒಂದಿಷ್ಟು ಮಾತಾಡಿದ್ರು. ನಾವೆಲ್ಲಾ ಚೊಣ್ಣಾ ಹಾಕ್ಕೊಂಡ ಹುಡುಗ್ರು ಬಾಯಿ ಬಿಟ್ಟಕೊಂಡು ನೋಡತಿದ್ವಿ.

ಮಾತ ಮುಗದಮ್ಯಾಗ ಜೋಶಿ ಅವರೂ ನಾನೂ ಆಡತೀನಿ ಅಂತ ಹೇಳಿದ್ರು. ಅವರ ಕೈಗೆ ಬ್ಯಾಟ್ ಕೊಟ್ವಿ. ನಾವು ಯಾವತ್ತು ಹಂಗ ಯಾರಿಗೂ ಬ್ಯಾಟ್ ಬಿಟ್ಟು ಕೊಟ್ಟವ್ರಲ್ಲಾ. ಜೋಶಿ ಅವರಿಗಂತ ಬ್ಯಾಟ್ ಬಿಟ್ಟು ಕೊಟ್ಟಿದ್ದು. ದೊಗಳೆ ಪೈಜಾಮಾ, ಮ್ಯಾಲೆ ಬಿಳಿ ನೆಹರು ಶರ್ಟು ಹಾಕ್ಕೊಂಡಿದ್ದ ಜೋಶಿ ಅವರು ತೋಲು ಏರಿಸಿಕೊಂಡು ಬ್ಯಾಟಿಂಗ್ ಮಾಡಾಕ ನಿಂತ್ರು. ಮುನ್ನಾ ಬೌಲಿಂಗ್ ಮಾಡತಿದ್ದಾ. ರಬ್ಬರ್ ಬಾಲು ಪುಸಕ್ಕನ ಅವರ ಪೈಜಾಮಾಕ್ಕ ಬಡಿತಿತ್ತು. ಒಂದೆರಡ ಸಲೆ ಬ್ಯಾಟಿಗೂ ಬಡದ ಬಾಲು ಟಾರ್ ರೋಡಿನ್ಯಾಗ ಕುಣಕೊಂಡು ಓಡಿತ್ತು.

ಮುನ್ನಾ ಓವರ್ ಮುಗಿಸಿದ ಮ್ಯಾಗ ಸುನಿಲ್ ಮರಾಠೆ ಬೌಲಿಂಗ್ ಮಾಡಿದಾ. ಆವಾಗ ಸರಿಯಾಗಿ ಬಾಲಿನ ತಲಿಮ್ಯಾಗ ಜೋಶಿ ಅವರು ಬ್ಯಾಟ್ ಹೊಡದ್ರು. ಮಮ್ಮಿಗಟ್ಟಿ ಸರು ಹೋಗಿ ಬಾಲ್ ಹಿಡದ್ರು. ಹಿಂಗ ನಾಲ್ಕು ಬಾಲ್ ಆದಮ್ಯಾಗ; ಐದನೇ ಬಾಲ್ ಹಾಕಿದಾ ಮರಾಠೆ. ಆವಾಗ ಜೋಶಿ ಅವರು ಬ್ಯಾಟ್ ಮ್ಯಾಗ ಎತ್ತಿ ಹೊಡದ್ರು; ಬಾಲು ಎದುರಿಗೆ ಇರೋ ಪೂಜಾರ ಕಾಂಪೌಂಡಿನ್ಯಾಗ ಹೋತು. ಆವಾಗ ನಾವೆಲ್ಲಾರೂ "ಔಟು ಅಂತ ಕೂಗಿದ್ವಿ".

ಅದಕ್ಕ ಜೋಶಿ ಅವ್ರು ಹ್ಯಾಂಗ್ರೋ ಔಟು? ಅಂದ್ರು. ಅದಕ್ಕೆ ನಾವು ಹೇಳಿದ್ವಿ "ಬಾಲು ಕಾಂಪೌಂಡಿನ್ಯಾಗ ಹೋದ್ರ ಔಟ್...!" ಅಂತ. ಅದಕ್ಕ ನಕ್ಕಿದ್ದ ಜೋಶಿ ಅವರು ನಮ್ಮ ಕೈಗೆ ಬ್ಯಾಟು ಕೊಟ್ಟು, ಸಾಕು ಹೊರಡತೀನಿ; ಯಾರೋ ಒಬ್ರು ನಾಷ್ಟಾಕ್ಕ ಕರದಾರ, ಸ್ನಾನಾ ಮಾಡಿ ಹೋಗಬೇಕು ಅಂತ ಹೇಳಿ ಹೊರಟ್ರು. ಅವರ ಹ್ವಾದಮ್ಯಾಗ ನಮ್ಮ ಆಟ ಮತ್ತ ಸಾಗಿತ್ತು.

ಸಂಜಿಗೆ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಾಗ ಜೋಶಿ ಅವರು ಭಾಳ ಛಲೋ ಆಡಿದ್ರು. "ಭಾಗ್ಯದಾ ಲಕ್ಷ್ಮಿ ಬಾರಮ್ಮಾ...." ಹಾಡಾಕ ಬೇಕು ಅಂತ ಜನಾ ಕೇಳಿಕೊಂಡು ಹಾಡಿಸಿದ್ರು. ಆದ್ರ ನನಗ ಅವತ್ತ ಭಾರಿ ನೆನಪಿನ್ಯಾಗ ಉಳದಿದ್ದು ಅಂದ್ರ "ರಘುವರ ತುಮ್ ಹೋ ಮೇರಿ ಲಾಜ್..." ಅನ್ನೋ ಹಾಡು. ಈಗೂ ಯ್ಯಾವಾಗರ ಆ ಹಾಡು ಬಾಯಾಗ ಹಂಗ ಬಂದು ಹೊಕ್ಕದ. ಆ ಹಾಡಿನ ಸಾಲನ್ನ ಗುನಗತಿರತೀನಿ. ಮೊನ್ನೆ ಜೋಶಿ ಅವರು ಹೋದ್ರು ಅಂತ ಸುದ್ದಿ ತಿಳದಾಗೂ ಅದ ಹಾಡು ನೆನಪಿಗೆ ಬಂತು!

ಹೋಲ್ಡಿಂಗ್... ಹುಡುಗಿ...!


ಹೋಲ್ಡಿಂಗ್ ಮ್ಯಾಲೆ ಮೂಡಿದ್ದು
ಒಂದ ಕ್ಷಣಾ ನೋಡಿದ್ದು
ಮನದಾಗ ಇಳದು ಕಾಡಿದ್ದು.
ಹಿಂಗ-ಹಾಂಗ ಅಂತಾಗಿದ್ದು;
ಹ್ಯಾಂಗ ಅಂತ ಹೇಳದ್ದು!
ಚೆಂದದ ಚಿತ್ರಧಾಂಗ ಇದ್ದದ್ದು;
ಮನಸಿಗೆ ಹತ್ರ ಆಗಿದ್ದು
ಅವಳು ನೋಡಿ ನಕ್ಕಿದ್ದು
ಖರೇನೊ-ಸುಳ್ಳೊ ಅನಿಸಿದ್ದು;
ಹೋಲ್ಡಿಂಗ್ ಹುಡುಗಿ ಕೆಣಕಿದ್ದು.
ಸುಮ್ಮನ ಗಾಳ್ಯಾಗಷ್ಟ ಗುಳ್ಳಿ ಹಾರಿದ್ದು
ಮನಸಿನ್ಯಾಗ ಮಂಡಗಿ ತಿಂದಿದ್ದು,
ಬಿಲ್ ಕೊಡದ ಬಂದಿದ್ದು...!

ಆಹಾ... ಕ್ರಿಕೆಟ್... ಸುಂದರಿ...!


ಕ್ರಿಕೆಟ್... ಸುಂದರಿ...!

ಬಿಟ್ಟಕಣ್ಣು ಬಿಟ್ಟಹಾಗೆ; ಎದೆಯಲ್ಲಿ ಬಾಣ ನೆಟ್ಟಹಾಗೆ,
ನೆಟ್ಟ ನೋಟವೂ ಅವಳಲ್ಲಿಯೇ ಇನ್ನು ಗಟ್ಟಿ!
ಕಣ್ಣು ಕದಲಿಸುವ ಮನಸಂತೂ ಇಲ್ಲವೇ ಇಲ್ಲ.

ಚಿತ್ತ ಒಂದಿಷ್ಟು ಅತ್ತಿತ್ತ ಆಗದು; ಹಾಗೇನಾದರೂ ಆದರೆ,
ರೋಚಕ ಆಟದ ಬೆಡಗಿಯ, ನಡಿಗೆಯ, ನಲಿವಿನ...
ಮೈಮಾಟದ ಸವಿಯೂಟದ ಸವಿಯೂ ತಪ್ಪೀತು!
ಹೀಗೆಯೇ ಕ್ರಿಕೆಟ್ ಪ್ರೇಮಿಗಳ ಯೋಚನೆ, ಆಲೋಚನೆ...!

ನಾಲ್ಕು ವರ್ಷಗಳಿಗೊಮ್ಮೆ ಬರುವ ಅಂದದ ಹುಡುಗಿ ತುಂಬಾ ಚೆಂದ.
ವಿಶ್ವಕಪ್ ಉಡುಗೆ ತೊಟ್ಟು, ಮೂರು ತಿಂಗಳ ಪ್ರೀತಿಯ ಕೊಟ್ಟು,
ಚೆಂಡು-ದಾಂಡಿನ ಸ್ಪರ್ಷದಲ್ಲಿಯೇ ಮುತ್ತಿಟ್ಟು, ಬೆಚ್ಚಗೆ ಮಾಡಿಬಿಟ್ಟು;
ನರನಾಡಿಯ ತುಂಬಾ ಕ್ರಿಕೆಟ್ ಹರಿಯಲು ಬಿಡುವ ಬೆಡಗಿ ಇವಳು.

ಹೃದಯದೊಳಗೆ ಬೆಟ್ಟಿಂಗ್ ಬಡಿತವಿಟ್ಟು! ಅನುಮಾನಗಳನ್ನೂ ಇಟ್ಟು,
ಗೆಲುವಿನಲ್ಲಿ ಹರ್ಷದ ಅಪ್ಪುಗೆ, ಸೋಲಿನಲ್ಲಿ ವಿರಹದ ನೋವು ಕೊಟ್ಟು;
"ಭಲ್ಲೆ" ಹಿಡಿಯಬಲ್ಲವರ, "ಗೆಂದ್" ಎಸೆಯಬಲ್ಲವರ ಬೆಂಬಲಿಗರಿಗೆ
ಹರ್ಷ ನೀಡಲು ಹೆಜ್ಜೆಯಿಟ್ಟು ಬರುತ್ತಿದ್ದಾಳೆ... "ಕ್ರಿಕೆಟ್ ಸುಂದರಿ".


PRESS...ಅಂತಾ ಹಾಕ್ಕೊಳ್ಳಿ ಸಾರ್...!


ಅವತ್ತೊಂದ್ ನಡುರಾತ್ರಿ ಒಂದೂವರೆ ಗಂಟೆ ಆಗಿತ್ತು. ರಾತ್ರಿ ಪಾಳಿ ಕೆಲಸಾ ಮುಗಿಸಿಕೊಂಡು ಹೊಂಟಿದ್ದ ಹೊತ್ತದು. ಒಂದು ಸಿಗರೇಟು ಸುಟ್ಟುಹಾಕಿ; ಬೈಕ್ ಹತ್ತಿಕೊಂಡು ಮನಿಕಡಿಗೆ ಹೊಂಟಿದ್ದೆ. ನಮ್ಮನಿ ಇರೋದು ಇಸ್ರೋ ಬಡಾವಣಿನ್ಯಾಗ. ಮಹಾತ್ಮಾ ಗಾಂಧಿ ರಸ್ತೆಯಿಂದ ಸುಮಾರು ಹದಿನಾಲ್ಕು ಕಿಲೋ ಮೀಟರ್ ದೂರ ಐತಿ ನಮ್ಮ ಮನಿ. ಅಲ್ಲಿಗೆ ಹೊಂಟಿದ್ದೆ; ಆಗ ಕೆ.ಆರ್. ರಸ್ತೆದಾಗ ಮೂರು ಪೊಲೀಸಿನೋರು ನಿಂತಿದ್ರು.

ನಾ ಹತ್ರಕ್ಕ ಹೋಗತಿದ್ದಂಗನ ಅಡ್ಡ ಕೋಲ್ ಹಾಕಿದ್ರು. ನಾನು ಮೆಲ್ಲಗ ಗಾಡಿ ನಿಲ್ಲಿಸಿದೆ. ಪೊಲೀಸ್ನೋರು ಅಂದಮ್ಯಾಗ ರಾತ್ರಿ ಹ್ಯಾಂಗ ಗತ್ತಿನ್ಯಾಗ ಮಾತಡಬೇಕೋ ಹಂಗ ಗತ್ತಿನ್ಯಾಗ "ಗಾಡಿ ನಂಬರ್ ಹೇಳ್ರಿ" ಅಂದಾ ಒಬ್ಬಾವ ಪೊಲೀಸು. ನಾನು ಬಾಯಿ ಪಾಠಾ ಮಾಡಿದವನಹಾಂಗ ಹೇಳಿದೆ "ಕೆ.ಎ. 03; ಇಡಿ 1823" ಅಂತ. ಅಷ್ಟಕ್ಕ ಬಿಟ್ಟು ಬಿಡತಾರ ಅಂದುಕೊಂಡಿದ್ದೆ. ಆದ್ರ ಅವರೆಲ್ಲಿ ಬಿಡತಾರ. ಏನೋ ಒಂದಿಷ್ಟು ವಸೂಲಿ ಮಾಡಬೇಕು ಅಂತ ಮನಸ್ಸು ಮಾಡಿಕೊಂಡವರಹಾಂಗ ಅವರ ಮುಖಾ ಕಾಣಿಸ್ತು.

ಇನ್ನೊಬ್ಬ ಪೊಲೀಸಾ ಕೇಳಿದಾ "ಲೈಸನ್ಸ್ ತಗೀರಿ; ಲೈಸನ್ಸ್ ಇದೆಯಾ" ಅಂತಾ. ನಾನು ಟಕ್ಕಂತ ಪರ್ಸ್ ತಗದು, ಲೈಸನ್ಸ್ ತೋರಿಸ್ದೆ. ಅವಂಗ ನಿರಾಸೆ ಆತು. ಇಲ್ಲೂ ಬೀಳಲಿಲ್ಲಲ್ಲಾ ಬಲೀಗೆ ಅಂತಾ ಅಂದುಕೊಂಡು "ಇನ್ಸೂರೆನ್ಸ್ ತೋರಿಸಿ" ಅಂದಾ. ನಾನು ನನ್ನ ಪ್ಯಾಂಟ್ ಹಿಂದಿನ ಕಿಸೇನ್ಯಾಗ ಇಟ್ಟಿದ್ದ ಇನ್ಸೂರೆನ್ಸ್ ತಗದೆ. ಅದರಾಗ ಇನ್ನೂ ನಾಲ್ಕು ತಿಂಗಳ ವ್ಯಾಲಿಡಿಟಿ ಇತ್ತು. "ಆರ್.ಸಿ. ಬುಕ್ಕು ತೋರಸಿ... ಎಮಿಷನ್ ತೋರಿಸಿ..." ಎಂದು ಹೇಳಿದ. ಅಷ್ಟರ ನಡುವೆಯೇ ಒಬ್ಬ ಪೊಲೀಸ್ ಕೇಳಿದಾ "ಡ್ರಿಂಕ್ಸ್ ಮಾಡಿದಿರಾ" ಅಂತ. ನಾನು ಹೇಳಿದೆ "ಇಲ್ರಿ ಸರ; ರಾತ್ರಿ ಪಾಳಿ ಮುಗಿಸಿಕೊಂಡ್ ಮನೀಗೆ ಹೊಂಟೀನಿ" ಅಂತ.

ಇಷ್ಟು ಹೇಳಿದ ಮ್ಯಾಗ "ರಾತ್ರಿ ಪಾಳೀನಾ? ಕಾಲ್ ಸೆಂಟರ್ ಕೆಲಸಾನಾ..." ಎಂದು ಒಬ್ಬ ಎತ್ತರ ಕಾಯದ ಗತ್ತಿನ ಪೊಲೀಸ್ ತನ್ನ ಕೋಲನ್ನ ನನ್ನ ಬೈಕ್ ಹ್ಯಾಂಡಲಿನ ಮ್ಯಾಗ ಟಕಾ ಟಕಾ ಕುಟ್ಟಿಕೊಂಡ ಕೇಳಿದಾ. ನಾನು "ಇಲ್ರಿ ಸರ; ಪ್ರಜಾವಾಣಿ ಪೇಪರಿನ್ಯಾಗ..." ಅಂತ ಹೇಳೋ ಅಷ್ಟರಾಗನ ಮಾತು ಅರ್ಧಕ್ಕ ಕಟ್ ಮಾಡಿದ ಆ ಪೊಲೀಸಾ; ಭಾರಿ ವಿನಮ್ರ ಆಗಿ "ಮೊದಲ ಪ್ರೆಸ್ ಅಂತ ಹೇಳಬೇಕಿತ್ತು ಸಾರ್" ಎಂದ.

ಅಷ್ಟ ಅಲ್ಲ; ಬೈಕಿಗೆ "ಪ್ರೆಸ್ ಅಂತಾ ಹಾಕ್ಕೊಳ್ಳಿ ಸಾರ್" ಅಂತಾ ಸಲಹೆನೂ ಕೊಟ್ಟ. ನಾನು ನಕ್ಕು ಹೇಳಿದೆ "ಈಗ ಎಲ್ಲಾರೂ ಪ್ರೆಸ್ ಅಂತ ಹಾಕ್ಕೊತಾರ. ನಾವು ಎಲ್ಲಾ ರೀತಿನ್ಯಾಗ ಸರಿ ಇದ್ದರ ಪ್ರೆಸ್ ಅಂತ ಹಾಕ್ಕೋಳೋ ಅಗತ್ಯಾನ ಇಲ್ಲ. ರಸ್ತೆ ನಿಯಮಾ ಪಾಲಿಸಿಕೊಂಡು ಗಾಡಿ ಓಡಿಸಿದ್ರ ಪ್ರೆಸ್ ಅಂತ ಲೇಬಲ್ ಅಂಟಿಸಿಕೊಳ್ಳೋದು ಬೇಕಿಲ್ಲಾ" ಅಂದೆ. ಅದಕ್ಕ ಆ ಮೂರು ಪೊಲೀಸ್ರು "ನೀವೂ ಹೇಳೋದು ಸರಿ. ಮೊನ್ನೆ ನೋಡ್ರಿ ಗಳ್ಳರ ಗುಂಪು ಅದೆಷ್ಟೊಂದು ಬೈಕ್ ಕಳುವು ಮಾಡಿ ಪ್ರೆಸ್ ಅಂತ ಹಾಕ್ಕೊಂಡು, ಆಮ್ಯಾಗ ಸಿಕ್ಕೊಂಡು ಬಿದ್ದಾರ" ಎಂದು ಕಥಿ ಹೇಳಿದ್ರು.

ನಾನು ಅವರ ಕಥಿ ಕೇಳಿಕೊಳ್ತನ ನನ್ನ ಗಾಡಿ ಡಾಕ್ಯೂಮೆಂಟ್ ಎಲ್ಲಾನೂ ಜೋಡಿಸಿ ಜೇಬಿನ್ಯಾಗ ತೂರಿಸಿಕೊಂಡೆ. ಮತ್ತೆ ಗಾಡಿ ಹತ್ತಿ ಹೊಂಟಾಗ ಯೋಚನೆ ಮಾಡ್ದೆ. "ಪ್ರೆಸ್ ಅಂತ ಹಾಕ್ಕೊಂಡು ನಿಯಮಾ ಮುರದ್ರೂ ಹಿಡಿಯಂಗಿಲ್ಲೇನು ಈ ಪೊಲೀಸ್ರು?" ಅಂತ. ನನ್ನ ಪ್ರಕಾರ ಪ್ರೆಸ್ ಅಂತ ಸ್ಟಿಕರ್ ಅಂಟಿಸಿಕೊಂಡವರನ್ನೂ ಪೊಲೀಸರು ಹಿಡಿದು ದಾಖಲೆ ಪರಿಶೀಲನೆ ಮಾಡಬೇಕು. ಆಗ ಪ್ರೆಸ್ ಅಂತ ಹೇಳಿಕೊಂಡು ನಿಯಮಾ ಮುರಿಯೋರು ಕಡಿಮಿ ಆಕ್ಕಾರ.

ನಾನಂತೂ ನನ್ನ ಬೈಕ್ ತಗೊಂಡು ಹತ್ತು ವರ್ಷಾ ಆತು. ಯಾವತ್ತೂ ಪ್ರೆಸ್ ಅಂತ ಸ್ಟಿಕ್ಕರ್ ಹಾಕ್ಕೊಂಡಿಲ್ಲಾ. ಯಾಕಂದ್ರ ನನಗ ಅದು ಅಗತ್ಯಾನೂ ಇಲ್ಲಾ. ನಾನು ನಿಯಮಾ ಮುರುದು ಬೈಕ್ ಯಾವತ್ತೂ ಓಡಿಸೋದಿಲ್ಲಾ. ಕುಡುದಂತೂ ಬೈಕ್ ಹತ್ತಂಗಿಲ್ಲಾ. ಎಲ್ಲಾ ಡಾಕ್ಯೂಮೆಂಟ್ ಅನ್ನ ಅಪ್ಡೇಟ್ ಆಗಿ ಇಟ್ಟುಕೊಂಡಿರ್ತೀನಿ. ಅಂದಮ್ಯಾಗ ಯಾಕ "ಪ್ರೆಸ್" ಅಂತ ಹಾಕ್ಕೋಬೇಕು...?

ರೆಕ್ಕೆ ಮೂಡಿದ್ದು... ಮುದುಡಿದ್ದು...!


ಪಕ್ಕದ ಮನೆಯ
ಅಕ್ಕನ ಮಗಳು
ಪಕ್ಕಕ್ಕೆ ಬಂದು;
ಮುಖಕ್ಕೆ ಮುತ್ತನಿಕ್ಕಿ
ನಕ್ಕಾಗ...!
ಎನ್ನೆರಡು ಪಕ್ಕಗಳಿಗೆ
ಪುಕ್ಕಗಳು ಮೂಡಿ;
ರೆಕ್ಕೆಯಾಗಿತ್ತು;
ಪಟಪಟ ಬಡಿದ
ರೆಕ್ಕೆಯ ಬಲಕ್ಕೆ
ಆಕಾಶಕ್ಕೆ ಹಾರಿತ್ತು
ಎನ್ನ ಮನ.
ಆಗಲೇ...
ಏನಾಯಿತು ಗೊತ್ತೆ?
ರೆಕ್ಕೆ ಮುದುಡಿತ್ತು.
ಆಕಾಶದಿಂದ
ನೇರವಾಗಿ
ಬಿದ್ದಾಗಿತ್ತು ಮನೆಯ
ಮಂಚದ ಅಡಿಗೆ.
ಆಗಲೇ ಅರಿವಾಗಿದ್ದು;
ಇದು ಕೇವಲ ರೆಕ್ಕೆ
ಮೂಡಿಸಿದ್ದ ಕನಸಿನ
ಹಕ್ಕಿ ಎಂದು!
ಕನಸು ಒಡೆದಾಗಿತ್ತು,
ಆದರೂ; ಆ ಕನಸೇ
ದಿನವಿಡಿ ಸಿಹಿ, ಸವಿ
ನೆನಪಾಗಿ ಕಾಡಿತ್ತು.

ನನ್ನೆದೆಯ "ಫುಲ್ ಸ್ಕ್ರೀನ್" ಬ್ಯೂಟಿ


ಸದ್ದಾಗಿತ್ತು, ನೆಲ ನಡುಗಿತ್ತು,
ಹೌದು; ಗಡಗಡ, ಗುಡುಗುಡು.
ಎದೆಯೊಗೆ ಧಡ...ಧಡ...!
ಆದರೂ ಅದೇ ಅಲ್ಲವೇ?
ಹೃದಯ ಬೆಸುಗೆಯ ಹಾಡಿಗೆ
ಮೊದಲೇ ಬಡಿದ ಢೋಲು.
ನೀನು ಕಾಲೆತ್ತಿಟ್ಟಾಗಲೆಲ್ಲ;
ನೆಲ ನಡುಗಿತ್ತು ನೋಡು!
ಅಂದು ಹಾಗೆ ಆಗಿದ್ದೇ ಒಳಿತು,
ನಿನ್ನ ಪ್ರತಿಯೊಂದು ಹೆಜ್ಜೆ;
ಬಲವಂತವಾಗಿ ಎಸೆದ ಗೆಜ್ಜೆ.
ಸದ್ದು, ಸದ್ದು, ಸದ್ದಾಯಿತು;
ಅಂದೇ ಹೃದಯ ಗೆದ್ದಾಯಿತು.
ಬಳ್ಳಿಯಂತೆ ಬಳುಕುತ್ತಾ
ಬಂದಿದ್ದರೆ ನೀನು ಅಂದು;
ನನ್ನ-ನಿನ್ನ ನಡುವಣ
ಪ್ರೇಮಾಂಕುರ ಎಲ್ಲಿ ಸಾಧ್ಯವಿತ್ತು?
ನಿನ್ನ ಪ್ರತಿಯೊಂದು ಹೆಜ್ಜೆ
ನನ್ನ ಎದೆಯೊಳಗೆ
ಪ್ರೇಮದ ಗೆಜ್ಜೆ...
ಗಿಲಗಿಲ ಅಲ್ಲ... ಘಲಘಲ..!
ಒಂದಿಷ್ಟು "ಸೌಂಡ್" ಜಾಸ್ತಿ.
ಹಿಂದೇನಿದು ಸದ್ದು; ಎಂದು
ನಾನಂದು ತಿರುಗಿ ನೋಡದಿದ್ದರೆ?
ನಿನ್ನ ರೂಪದ ಪ್ರಕೃತಿ ಪ್ರಕೋಪ
ನನ್ನ ಎದೆಯಲ್ಲಿ ಹೆಚ್ಚುತಿತ್ತೆ?
ಇಲ್ಲ; ಹಾಗೆ ಆಗುತ್ತಿರಲಿಲ್ಲ.
ಅಂದು ನೀನು ಕಣ್ಣತುಂಬಿದ್ದೆ;
ಸುತ್ತಲಿನ ಜಗತ್ತೆಲ್ಲಾ ನೀನೇ ಆಗಿದ್ದೆ.
ನಿನ್ನ ಕಾಯವೇ ಕವಿದಿತ್ತು;
ಕಣ್ಣು ಆಚೆ-ಇಚೆ ಸರಿಸಿ, ಅರಳಿಸಿ...
ಕತ್ತು ತಿರುಗಿಸಿದರೂ ಬೇರೇನೂ ಇಲ್ಲ.
ಬೇರೇನೂ ಕಾಣಿಸಲಿಲ್ಲ.
ನೀನೆ ಎಲ್ಲಾ; ಅಗಲಗಲ...ಅಗಲಗಲ!
ನಿನ್ನ ರೂಪವೇ ಅಂಥದು;
ನೀನೇ ತುಂಬಿಕೊಂಡೆ
ನನ್ನೆದೆಯ "ಫುಲ್ ಸ್ಕ್ರೀನ್"
ಯಾರೇನೇ ಅಂದರೂ ಬೇಸರ ಬೇಡ;
ನಿನ್ನ ಕಾಯ ಸೌಂದರ್ಯ
ನನಗಷ್ಟೇ ಗೊತ್ತು,
ಏಕೆಂದರೆ; ನೀನೆ ಅಲ್ಲವೇ...?
ನನ್ನೆದೆಯ ತುಂಬಿರುವ
"ಫುಲ್ ಸ್ಕ್ರೀನ್" ಬ್ಯೂಟಿ!

ಮತ್ತು ಬರಿಸಿದವಳು...!


ಮತ್ತ್ ಮತ್ತ್ "ಮತ್ತು"
ಆಕಿಗೆ ಮಾತ್ರ ಗೊತ್ತು.

ಚಿತ್ರದ ಹಾಂಗನ ಇತ್ತು,
ಪಾತರಗಿತ್ತಿ ಕುಳಿತಿತ್ತು;
ಹೂವು ಅರಳಿತ್ತು,
ಮನಸು ಕೆರಳಿತ್ತು.

ಕಣ್ಣು ಹೊರಳಿತ್ತು,
ಕುಡಿ ನೋಟ ಕೇಳಿತ್ತು;
ಎದಿ ಬಡಿತಿತ್ತು,
ಡವಾಡವಾ ಸದ್ದಿತ್ತು.

ಮಿಲನ ಯಾವತ್ತು?
ಕಾಡಿಗಿ ಕದಲಿತ್ತು;
ಪ್ರಶ್ನೆ ಅದ ಆಗಿತ್ತು,
ಮತ್ತ ಭೇಟಿ ಯಾವತ್ತು?

ತುಂಬಿಕೊಂಡಿತ್ತು
ಬೆಳಗಿನ ಹೊತ್ತು;
ಮನಸಿಗೆಲ್ಲಾ ಮತ್ತು,
ಕನಸಿಗೆಲ್ಲಾ ಗೊತ್ತು!

ಮೂಗುತಿಯ ಹುಡಗಿಗಿತ್ತು ,
ನನ್ನ ಕೆಣಕೋ ತಾಕತ್ತು;
ಮೊದಲ ಪೆಗ್ಗಿಗೇ ಏರಿತ್ತು,
ತಲಿ ಸುತ್ತಿ ಬರತಿತ್ತು.


ಈ ವರ್ಷ ಛಲೋ...!


ಮಿರ್ಜಾ ಗಾಲಿಬ್ ಬರದಿರೋ ಒಂದು ಗಜಲ್ ಸಾಲು ನನಗ ಹೊಸಾ ವರ್ಷದ ಹೊಸ್ತಿಲಿಗೆ ಬಂದು ನಿಂತಾಗ ನೆನಪಾಗತದ. "ಇಕ್ ಭ್ರಾಹ್ಮಣನೇ ಕಹಾಥಾ ಇಸ್ ಸಾಲ್ ಅಚ್ಛಾ ಹೈ..." ಎಂದು ಮಿರ್ಜಾ ಗಾಲಿಬ್ ತನ್ನ ಗಜಲಿನ್ಯಾಗ ಬರೆದಿಟ್ಟು ಹೊಗ್ಯಾನ. ಅದು ಎಂಥಾ ವಿಶಿಷ್ಟ ಸಾಲು ಅಂತ ಒಮ್ಮೆ ಆ ಸಾಲು ಮೆಲುಕು ಹಾಕಿ ನೋಡ್ರಿ; ನೀವು ಹಂಗ ಅದೆಷ್ಟೊಂದು ಸಲಾ ಹಂಗ ಯೋಚನೆ ಮಾಡಿರತೀರಿ ಅಂತ ಅರ್ಥ ಆಗತದ.

ಮೊದಲ ಆ ಉರ್ದು ಭಾಷೆ ಸಾಲನ್ನ ನಿಮಗ ವಿವರಿಸಿ ಹೇಳತೀನಿ. "ಒಬ್ಬ ಭ್ರಾಹ್ಮಣ ಹೇಳಿದ್ದ ಈ ವರ್ಷಾ ನಿನಗ ಛಲೋ ಐತಿ" ಅಂತ ಆ ಸಾಲು ಹೇಳತದ. ಹಿಂಗ ಪ್ರತಿ ಹೊಸಾ ವರ್ಷಾ ಹತ್ತಿರಕ್ಕ ಬಂದಾಗ ಎಲ್ಲಾರ ಮನದಾಗೂ ಹಿಂಗ ಅನಿಸಿರತದ. "ಈ ವರ್ಷಾ ನಮಗ ಛಲೋ ಆಗಬಹುದು" ಅಂತ ಎಲ್ಲಾರೂ ಅನಕೋತಿರತಾರ.

ಕೆಲವ ಜನಾ ಅಂತೂ; ಹೊಸಾ ಕ್ಯಾಲೆಂಡರು ಮತ್ತ ವರ್ಷ ಭವಿಷ್ಯದ ಕೈಪಿಡಿ ತಂದು; ಅದರಾಗ ಈ ವರ್ಷ ನಮಗ ಹ್ಯಾಂಗ ಐತಿ ಅಂತ ಭಾಳ ಸೀರಿಯಸ್ ಆಗಿ ಓದತಾರ. ಆದರ ಅದು ಬರಿ ಮನಸೀಗೆ ಸಮಾಧಾನ ಮಾಡಕೋಳಾಕ! ವರ್ಷಾ ನಿಮಗ ಒಳ್ಳೆದು ಆಗಬೇಕು ಅಂದ್ರ ನೀವ ಪ್ರಯತ್ನಾ ಮಾಡಬೇಕು. ಯಾವದೋ ಭ್ರಾಹ್ಮಣಾ, ಭವಿಷ್ಯಗಾರ, ಜ್ಯೋತಿಷ್ಯ ಹೇಳೋನ ಮಾತಿನಹಂಗ ಯಾವ ವರ್ಷಾನೂ ಇರೋದಿಲ್ಲಾ. ಎಲ್ಲಾ ಸರಿ ಇರೋದು ನೀವು ಹ್ಯಾಂಗ ವರ್ಷದಾಗ ಕೆಲಸಾ ಮಾಡತೀರಿ ಅನ್ನೋದರ ಮ್ಯಾಗ ನಿರ್ಧಾರ ಆಗತದ.

ಕಷ್ಟದಾಗಿದ್ದರೂ, ಮಿರ್ಜಾ ಗಾಲಿಬ್ ಸಂತೋಷದಾಗಿದ್ದ. ಅದಕ್ಕ ಅವನ ಜೀವನಾ ಅನ್ನೋದು ಒಂದು ಸುಂದರವಾದ ಕವಿತಾ ಆತು. ಆದ್ರ; ನಾವು ನೀವು ಎಲ್ಲಾ ಗಾಲಿಬ್ ಹೇಳಿದ ಆ ಸಾಲಿನ ಹಾಂಗ ಯೋಚನೆ ಮಾಡ್ಕೊಂಡಿರ್ತೀವಿ. ಈ ವರ್ಷಾ ಛಲೋ ಆಗಬಹುದು ಅಂತ ಹೇಳಕೋತ ವರ್ಷ ವರ್ಷಾನ ಕಳೀತ ಹೋಗತೀವಿ. ಆ ಸಾಲಿನ ಹಾಂಗ ಯೋಚನೆ ಮಾಡೋದು ತಪ್ಪಲ್ಲ. ಆದರ ಅದು ನಿಜಾ ಆಗೋ ಹಂಗ ಎಲ್ಲಾ ವರ್ಷಾನೂ ಛಲೋ ಮಾಡಿಕೋಳ್ಳುದು ನಮ್ಮ ಜವಾಬ್ದಾರಿ ಆಗಿರತದ. ಭವಿಷ್ಯಾ ಹೇಳೋನು ಹೇಳಿದ್ದು ಖರೇ ಆಗತದ ಅಂತ ಕೈಕಟ್ಟಿ ಕೂತಕೊಂಡ್ರ; ಯಾವ ವರ್ಷಾನೂ ಒಳ್ಳೇದು ಆಗೋದಿಲ್ಲ.

ಅದಕ್ಕ ನನ್ನ ಒಂದು ಸಲಹೆ ನಿಮಗ; ಭವಿಷ್ಯಾ ಹೇಳೋರನ್ನೆಲ್ಲಾ ಕೇಳಿಕೊಂಡು ಸುಮ್ನ ಇರಬ್ಯಾಡ್ರಿ. ನಿಮ್ಮ ವರ್ಷದ ಭವಿಷ್ಯಾ ಛಲೋ ಆಗೋಹಂಗ ನೀವ ಅದನ್ನ ಬರದಕೊಳ್ರಿ. ಓದು, ಕೆಲಸ, ಸಂಸಾರಾ... ಹಿಂಗ ಎಲ್ಲಾನೂ ಛಲೋ ಆಗಿರಬೇಕು ಅಂದ್ರ ನೀವು ಅದಕ್ಕ ತಕ್ಕ ರೀತಿನ್ಯಾಗ ಇರಬೇಕು. ಅದೆಲ್ಲಾದಕ್ಕಿಂಥ ಮುಖ್ಯ ಅಂದ್ರ; ಎಂಥಾ ಕಷ್ಟ, ಸವಾಲು... ಬಂದ್ರೂ ಸಂತೋಷವಾಗಿ ಇರೋದನ್ನ ಕಲಿಬೇಕು. ಆವಾಗನ ನಿಮ್ಮ ಬದಕೂ ಮಿಜರ್ಾ ಗಾಲಿಬ್ ಕವಿ ಹಂಗ ಕಾವ್ಯಪೂರ್ಣ ಆಗತದ...!

ನಿಮಗೆಲ್ಲಾ ಹೊಸಾ ವರ್ಷದ ಶುಭ ಹಾರೈಕೆ... ಹೊಸಾ ವರ್ಷಾ ನಿಮಗ ಛಲೋ ಆಗ್ಲಿ...!

ಕಲ್ಮಾಡಿಗೆ ಶಿಕ್ಷೆ ಆದ್ರ "ಮೀಸಿ ಬೆಳಸ್ತೀನಿ" ಇದು ನನ್ನ ಚಾಲೆಂಜ್


ಭಾರತಮ್ಮನ ಮಡಿಲಿನ್ಯಾಗ ನಡದ ದೊಡ್ಡ ಕ್ರೀಡಾಕೂಟದ ಹಗರಣಾ ಅಂದ್ರ ಅದು ಕಾಮನ್ ವೆಲ್ತ್ ಕ್ರೀಡಾಕೂಟದ್ದು. ಇದರಾಗ ಮುಖ್ಯ ಆರೋಪಿ ಸ್ಥಾನದಾಗ ನಿಂತಿರೋದು ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅನ್ನೋ ಮಹಾಶಯರು. ಮಜಾ ನೋಡ್ರಿ ದೊಡ್ಡ ಹಗರಣಾ ನಡದಮ್ಯಾಗೂ ಅವರು ತಮ್ಮ ಅಷ್ಟೂ ಹಲ್ಲು ಕಾಣೋಹಂಗ ನಗತಾರ. ಅದನ್ನ ನೋಡಿದಾಗೆಲ್ಲಾ ಹೊಟ್ಟ್ಯಾಗ ಕೆಂಡಾ ಇಟ್ಟಂಗ ಆಕ್ಕದ. ಆದ್ರ ಏನು ಮಾಡಾಕ ಆಕ್ಕದ; ನಾ ಒಬ್ಬ ದೇಶದ ಬಡ ಪ್ರಜೆ. ಅದೇನೋ ಅಂತಾರಲ್ಲಾ ಬಡವನ ಸಿಟ್ಟು ದವಡಿಗೆ ಮೂಲಾ ಅಂತ; ಹಂಗ ಆಗ್ಯದ ನನ್ನ ಕಥಿ.

ನೋಡತಿರ್ರಿ ಕೋಟಿಗಟ್ಟಲೇ ಹಣಾ ನುಂಗಿರೋ ಆರೋಪ ಹೊತ್ತಿರೋ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಮಹಾಶಯರಿಗೆ ಶಿಕ್ಷೆ ಅಂತೂ ಆಗೋದಿಲ್ಲಾ. ಇದು ನನ್ನ ಚಾಲೆಂಜ್ ! ಹಂಗ ಏನಾದ್ರೂ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರೀಗ ಶಿಕ್ಷೆ ಆತೂ ಅಂದ್ರ ನಾನು ಖರೆನ "ಮೀಸಿ ಬೆಳಸ್ತೀನಿ"! ನೀವು ಓದೋವಾಗ "ಮೀಸಿ ಬೋಳಸ್ತೀನಿ" ಅಂತ ತಪ್ಪು ತಿಳಕೋಬ್ಯಾಡ್ರಿ. ನಾನು ಹೇಳಿದ್ದು ಸ್ಪಷ್ಟವಾಗಿ "ಮೀಸಿ ಬೆಳಸ್ತೀನಿ" ಅಂತ.

"ಮೀಸಿ ಬೆಳಸ್ತೀನಿ ಅಂತ ಯ್ಯಾಕ ಹೇಳಿನಿ ಅಂದ್ರ; ನಾನು ದಿನಾಲೂ ಮೀಸಿ ಬೋಳಸ್ತೀನಿ. ಅದಕ್ಕ "ಮೀಸಿ ಬೋಳಸ್ತೀನಿ" ಅಂತ ಚಾಲೆಂಜ್ ಮಾಡಾಕ ಆಗಂಗಿಲ್ಲ. ಖರೇನ ಮೀಸಿ ಬೆಳಸ್ತೀನಿ. ನಮ್ಮ ದೇಶದಾಗ ಭ್ರಷ್ಟಾಚಾರ ಮಾಡಿರೋ ರಾಜಕಾರಣೀಗೆ ಶಿಕ್ಷೆ ಆಗೋದಿಲ್ಲ ಅಂತ ನಾನು ಚಾಲೆಂಜ್ ಮಾಡತೀನಿ. ನನಗ ಅಷ್ಟೊಂದು ವಿಶ್ವಾಸ ಐತಿ. ಒಂದವ್ಯಾಳೆ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರಿಗೆ ಶಿಕ್ಷೆ ಆದ್ರ ಅದು ದೇಶದಾಗ ಆಗೋ ದೊಡ್ಡ ಕ್ರಾಂತಿ! ಅಂತ ತಿಳಕೋಭೌದು.

"ಮೀಸಿ ಬೇಳಸ್ತೀನಿ" ಅಂತ ಹೇಳಿದ್ದಕ್ಕೆ ಒಂದು ಕಾರಣಾನೂ ಐತಿ. ನಮ್ಮ ದೇಶದಾಗ ಭ್ರಷ್ಟಾಚಾರ ಮಾಡಿದ ರಾಜಕಾರಣಿ ಕಮ್ ಕ್ರೀಡಾ ಆಡಳಿತಗಾರಂಗ ಶಿಕ್ಷೆ ಆತಲ್ಲಾ ಅಂತ ಹೆಮ್ಮೆ ಪಡೋದರ ಸಂಕೇತಾ ಅದು. ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರೀಗ ಶಿಕ್ಷೆ ಆಗಂಗಿಲ್ಲಾ ಅಂತ ನನ್ನ ಮನಸ್ಸು ಹೇಳತೈತಿ. ಅವ್ರು ತಪ್ಪು ಮಾಡ್ಯಾರೋ ಇಲ್ಲೋ ದೇವರಿಗೆ ಗೊತ್ತು. ತಪ್ಪು ಮಾಡ್ಯಾರಂತ ಮ್ಯಾಲೆನ ಎದ್ದು ಕಾಣಸ್ತೈತಿ. ಆದ್ರ ನಾನು-ನೀವು ಹೇಳಿದ್ರ ಸಾಕಾಕ್ಕೈತೇನು? ಇಲ್ಲಾ; ನಮ್ಮ ದೇಶದಾಗ ಕಾನೂನು ಅನ್ನೋದು ಒಂದೈತಿ. ಅದಕ್ಕ ತಲಿ ಬಾಗಾಕಬೇಕು.

ಆದ್ರ ಏನು ಮಾಡೋದು ನಮ್ಮ ದೇಶದಾಗ ಕಾನೂನು ಕೆಲ್ಸಾ ಎಷ್ಟು ಉದ್ದಕ ಏಳಿತೈತಿ ಅಂದ್ರ; ನನ್ನ ಮೀಸಿ ಅಷ್ಟೂ ಬೆಳ್ಳಗಾಗೋ ಹೊತ್ತಿಗಾರ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರ ವಿಚಾರಣೆ ಎಲ್ಲಾ ಮುಗೀತೈತೋ ಇಲ್ಲೊ ಅಂತ ಗೊತ್ತಿಲ್ಲಾ! ಒಟ್ಟಿನಮ್ಯಾಗ ನಮ್ಮ ಕಾನೂನು ಅನ್ನೋ ಕಣ್ಣ ಮುಚ್ಚಿಕೊಂಡಿರೋ ದೇವರ ಕೈಯ್ಯಾಗಿನ ತಕ್ಕಡಿ ತೂಗಾಡಿ ನಿಲ್ಲೋದ್ರಾಗ ಏನೇನು ಆಗಿರತದೋ ಯ್ಯಾರಿಗೆ ಗೊತ್ತು?

ನಾನಂತೂ ನನ್ನ ನಿರ್ಧಾರಾನ ಬದಲು ಮಾಡಂಗಿಲ್ಲಾ; ಅದು ಎಷ್ಟಾರ ವರ್ಷಾ ಆಗಲಿ, ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರ ತಪ್ಪು ಮಾಡ್ಯಾರ ಅಂತ ನ್ಯಾಯ ದೇವರು ಹೇಳಿ, ಶಿಕ್ಷೆ ಕೊಟ್ಟದಿನದಿಂದ ಒಂದು ತಿಂಗಳೊಳಗ ಮ್ಯಾಲಿರೋ ಚಿತ್ರದಾಗಿನ ಹಂಗ ಮೀಸಿ ಬೆಳಸ್ತೀನಿ. ಆಮೇಲೆ ಹೇಳತೀನಿ "ಇದು ನಮ್ಮ ದೇಶಾ; ಇಲ್ಲಿ ರಾಜಕಾರಣಿಗಳೂ ತಪ್ಪ ಮಾಡಿದ್ರ ಶಿಕ್ಷೆ ಆಕ್ಕೈತಿ" ಅಂತ. ಅಷ್ಟ ಅಲ್ಲ ದೇಶದ ಮ್ಯಾಗ ಹಾಗ ದೇಶದ ಕಾನೂನಿನ ಮ್ಯಾಗ ಭಾರಿ ಹೆಮ್ಮೆ ಪಟ್ಟಕೊಂಡು ಮೀಸಿನೂ ತಿರವತೀನಿ!

ನಾನು ಮೀಸಿ ಬೆಳಸಿ; ಮೀಸಿ ತಿರವೋಹಾಂಗ ಆಗಲಿ ಅಂತ ನೀವೆಲ್ಲಾರೂ ಕಂಡ ಕಂಡ ದೇವರಿಗೆಲ್ಲಾ ಕೈಮುಗುದು ಬೇಡಿಕೋಳ್ರಿ. ಅಷ್ಟ ನನ್ನ ಪ್ರಾರ್ಥನಾ...!

ಮನಿ-"ಮನಿ" ಎರಡೂ ಇಲ್ಲಾ


ನಂಗೊಂದು ಮನಿ ಇಲ್ಲಾ;
ಯಾಕಂದ್ರ ನನ್ ಕಡೆ "ಮನಿ" ಇಲ್ಲಾ!
ಮನಿ ಮಾಡ್ರಿ... "ಮನಿ" ಮಾಡ್ಕೊಳ್ರಿ;
ಹಿಂಗ ಹೇಳತಾರ ಎಲ್ಲಾ.
ನಾ ಕಿವಿಮ್ಯಾಗ ಹಾಕ್ಕೊಂಡಿಲ್ಲಾ.

ನಿನಗಿಂತಾ ಸಣ್ಣೋರೆಲ್ಲಾ
ಕಟ್ಯಾರಲ್ಲಾ ಊರಾಗೊಂದು;
ಬೆಂಗಳೂರಿನ್ಯಾಗೊಂದು ಮನಿ.
ಹಿಂಗ ಅಂತ ಕೇಳತಾರೆಲ್ಲಾ!
ಇದ ಮಾತು ಹೇಳತಾರೆಲ್ಲಾ.

ಬೇರೆಯೋರು ಕೇಳತಾರಂತ
ಕಟ್ಟಾಕಾಗಂಗಿಲ್ಲ ಮನಿನೆಲ್ಲಾ.
ಮನಿ ಕಟ್ಟಾಕ "ಮನಿ" ಬೇಕು.
ಮನಿ ಕಟ್ಟಂತ ಹೇಳಿದೋರು
ಕೊಡತಾರೇನು "ಮನಿ"...?

ನಂದೇನಿದ್ರು "ಕುವೆಂಪು" ಪಾಲಿಸಿ,
ಪುಟ್ಟಪ್ಪ ಕವಿಗೋಳು ಹೇಳ್ಯಾರಲ್ಲ;
ಅದೇನಂತ ನಿಮಗ ಗೊತ್ತಿಲ್ಲಾ?
ಎಲ್ಲಿನೂ ನಿಲ್ಲಬ್ಯಾಡ;
ಮನಿ ಯಾವತ್ತೂ ಕಟ್ಟಬ್ಯಾಡ!

ಅದ ಹಾಡು ಹಾಡಕೋತಿನಿ.
ಮನಿ-"ಮನಿ" ಚಿಂತಿ ಬಿಟ್ಟೀನಿ.
ಮನಿ ಕಟ್ಟೋದು;
"ಮನಿ" ಮಾಡೋದು...!
ನನ್ನ ಕೈಯ್ಯಾಗ ಆಗಂಗಿಲ್ಲ.

ಮನಿ ಮಾಡಾಕ "ಮನಿ" ಬೇಕು.
"ಮನಿ" ಮಾಡಬೇಕಂದ್ರ
ಅದೇನೆನೋ ಮಾಡಬೇಕು!
ಅದು ಆಗಂಗಿಲ್ಲ;
ಮನಿ-"ಮನಿ" ಎರಡೂ ಮಾಡಂಗಿಲ್ಲ.

ಭ್ರಾಹ್ಮಣ ದಬ್ಬೆ ಹಿಡಿಯಬಾರದೇಕೆ...?


ಮುಖ್ಯ ವಿಷಯ ಹೇಳೋದಕ್ಕೂ ಮೊದಲನ ನಾನು "ದಬ್ಬೆ" ಅಂದರೇನು ಅಂತಾ ಹೇಳಿಬಿಡ್ತೀನಿ. ದಬ್ಬೆ ಇದು ಚರಂಡಿ ಕ್ಲೀನ್ ಮಾಡೋದಕ್ಕ ಬಳಸೋ ಬಿದಿರು ಸೀಳು. ನನ್ನ ಜ್ಞಾನದ ಪ್ರಕಾರ ದಬ್ಬೆ ಅಂದರೆ ದರ್ಭೆ. ದರ್ಭೆ ಅಂದರೆ ಹುಲ್ಲು ಅಥವಾ ಗರಿಕೆ ಅಂತಾನೂ ಸರಳ ಮಾಡಿ ಹೇಳಬೋದು. ದಬ್ಬೆ ಹಾಗೂ ದರ್ಭೆ ಎರಡೂ ಮನಷ್ಯಗ ಬೇಕು. ಸಂಪ್ರದಾಯದ ಆಚರಣೆಗಳಿಗಂತೂ ದರ್ಭೆ ಬೇಕಾಗತದ; ಮನುಷ್ಯಾ ಮಾಡಿದ ಕೊಳೆಯನ್ನಾ ತಳ್ಳಿ ಹಾಕೋದಕ್ಕ ದಬ್ಬೆ ಬೇಕಾಗ್ತದ. ಹೌದು; ದಬ್ಬೆ ಹಾಗೂ ದರ್ಭೆ ಎರಡೂ ಬೇಕು.

ದರ್ಭೆ ಅನ್ನೋದು ಹುಲ್ಲು ಇಲ್ಲವೇ ಗರಿಕೆಯ ಎಸಳು. ಅದೇ ದಬ್ಬೆ ಎಂದರೆ ಬಿದಿರಿನ ಸೀಳು. ಬಿದುರು ಕೂಡ ದರ್ಭೆನ ಆಗ್ಯದ. ಅದು ಕೂಡ ಒಂದು ರೀತಿಯ ಹುಲ್ಲು ಅನ್ನೋದನ್ನಾ ಎಲ್ಲೋ ಓದಿದ ನೆನಪು. ಅದ ಸಣ್ಣ ಹುಲ್ಲಿನ ಗರಿಕಿಯನ್ನಾ ದರ್ಭೆ ಅಂತಾ ದೇವ ಹಾಗೂ ಪಿತೃಕಾರ್ಯಕ್ಕ ಉಪಯೋಗಾ ಮಾಡತಾರ. ದರ್ಭೆಯನ್ನಾ ಭ್ರಾಹ್ಮಣ ಸಂಪ್ರದಾಯದ ಬಹಳಷ್ಟು ಆಚರಣೆಗಳೊಳಗ ಬಳಸಲಾಗತದ. ಆಗ ಹುಲ್ಲಿನ ಎಳೆಯನ್ನ ಹಿಡಿದು ಪಿತೃಕಾರ್ಯಾನ ನಾನೂ ಮಾಡೀನಿ.

ದೇವ ಹಾಗೂ ಪಿತೃಕಾರ್ಯಾ ಮಾಡೋದಕ್ಕ "ದರ್ಭೆ" ಹಿಡಿದ ನಾನು; ನನ್ನ ಮನೆಯ ಕೊಳೆಯನ್ನ ತೊಳೆಯೋದಕ್ಕ "ದಬ್ಬೆ" ಯಾಕ ಹಿಡೀಬಾರದು? ಇದು ನನ್ನನ್ನ ಈ ವಾರಾ ಕಾಡಿದ ದೊಡ್ಡ ಸವಾಲು. ವಿಚಿತ್ರಾ ಅಂದರ; ಬೇರೆಯವರು ನನ್ನನ್ನಾ "ನೀವು ಬ್ರಾಹ್ಮಣರು... ದಬ್ಬೆ ಹಿಡಿತೀರಾ...?" ಅಂತಾ ಕೇಳಿದ್ದು. ಯಾಕ ಭ್ರಾಹ್ಮಣ ದರ್ಭೆ ಹೀಡಿಬೋದು; ಆದರ ದಬ್ಬೆ ಯಾಕ ಹಿಡಿಬಾರದು? ಇಂಥ ಸವಾಲು ಕಾಡೋದಕ್ಕ ಕಾರಣ; ಮೊನ್ನೆ ನಮ್ಮ ಮನ್ಯಾಗಿನ ಡ್ರೆನೇಜ್ ಕಟ್ಕೊಂಡದ್ದು.

ನಾನು ವಾಸಾ ಆಗಿರೋ ಮನಿನ್ಯಾಗಿನ ಡ್ರೆನೇಜ್ ಕಟ್ಕೊಂಡು ಬಿಡ್ತು. ಮನಿ ಮಾಲೀಕರಿಗ ಫೋನ್ ಮಾಡಿ ಹೇಳಿದ್ದಾತು. ಆದರ ಏನೋ ಪ್ರಯೋಜನಾ ಆಗಲಿಲ್ಲ. ಮನಿ ಮಾಲೀಕಾ ಯಾವ ದಬ್ಬೆ ಹೊಡೆಯೋರನ್ನ ಕಳಸಲಿಲ್ಲ. ಅಷ್ಟು ಹೊತ್ತಿಗಾಗಲೇ ಡ್ರೆನೇಜ್ ತುಂಬಿ, ಮನಿ ಬಾಗಿಲಿನ್ಯಾಗ ಕೂಡ ಹೊಲಸು ಹರದು ಬರಾಕ ಹತ್ತಿತ್ತು. ವಾಸನಿ ತಡಿಯ್ಯಾಕ ಆಗತಿರಲಿಲ್ಲ. ಆ ಹೊತ್ತಿಗ ಒಬ್ಬ ಗೆಳೆಯ್ಯಾ ದಬ್ಬೆ ಹೊಡೆಯೋರು ಅಂತಾ ನಾಲ್ಕು ಜನಾನ ಕರಕೊಂಡು ಬಂದಾ.

ಆ ನಾಲ್ಕ ಜನರೊಳಗ ಇಬ್ಬರು ಇಳಿವಯಸ್ಸಿನ ಹೆಂಗಸರು ಹಾಗೂ ಇಬ್ಬರು ಗಂಡಸರು ಇದ್ದರು. ನಾನು ನೇರವಾಗಿ "ಕ್ಲೀನ್ ಮಾಡಾಕ ಎಷ್ಟು ತಗೋತೀರಿ?" ಅಂತ ಕೇಳಿದೆ. ಅದಕ್ಕ ಅ ನಾಲ್ವರ ನಾಯಕಿ ಅನ್ನೋಹಾಂಗ ಕಾಣತಿದ್ದ ಒಬ್ಬಳು "ಎರಡು ಸಾವಿರ ರೂಪಾಯಿ (2000 ರೂ.) ಕೊಟ್ಟಬಿಡ್ರಿ" ಅಂದಳು. ನನಗ ಆಶ್ಚರ್ಯ ಆತು. ಎರಡು ಸಾವಿರ ರೂಪಾಯಿ ಕೊಡಬೇಕಾ ಅಂತ ಯೋಚನೆ ಮಾಡಿದೆ. ನಾನು ಗಮನಿಸಿಧಾಂಗ ಅದು ಐದು ನಿಮಿಷದ ಕೆಲಸಾ. ಎಲ್ಲೋ ಪೈಪಿನ್ಯಾಗ ಅಡ್ಡ ಏನೋ ಸಿಕ್ಕಾಕ್ಕೊಂಡೈತಿ. ಅದನ್ನ ಕ್ಲೀಯರ್ ಮಾಡಿದ್ರ ಡ್ರೆನೇಜ್ ಒಳಗ ನೀರು ಸರಿಯಾಗಿ ಹರಿತದ ಅಂತನೂ ಗೊತ್ತಿತ್ತು. ಅಷ್ಟಕ್ಕ ಎರಡು ಸಾವಿರ ರೂಪಾಯಿ ಯಾಕ ಕೊಡಬೇಕು ಅಂತ ಮತ್ತೊಮ್ಮೆ ಯೋಚನೆ ಮಾಡಿದೆ.

"ಆಗೋದಿಲ್ಲಾ" ಅಂದೆ. ಅದಕ್ಕ ಆ ಇಬ್ಬರು ಹೆಂಗಸರು ಹಾಗೂ ಗಂಡಸರೂ "ನಿಮಗೇನು ಗೊತ್ತು; ಎಷ್ಟು ಕಷ್ಟಾ ಐತಿ ಈ ಕೆಲಸಾ ಅಂತಾ?" ಎಂದು ನನಗೇ ತಿರುಗುತ್ತರ ನೀಡಿದರು. ಆಗ ನನ್ನ ಮನದೊಳಗ ಏನೋ ಒಂಥರಾ ಆತು. "ಹೌದಾ; ಈ ಕೆಲಸಾ ಅಷ್ಟು ಕಷ್ಟದ್ದಾ?" ಅಂತ ಯೋಚನೆ ಮಾಡಿದೆ. ಜೊತಿಗ ನನ್ನ ಮನಸ್ಸು ಹೇಳಿತು "ಈ ಕೆಲಸಾ ಎಷ್ಟು ಕಷ್ಟಾ ನೋಡೇ ಬಿಡೋಣ" ಅಂತ!

"ಬ್ಯಾಡ ಹೋಗ್ರಿ ನಾನ ದಬ್ಬೆ ಹೊಡಿತೀನಿ" ಅಂತ ಆ ನಾಲ್ವರಿಗೂ ಹೇಳಿದೆ. ಅದಕ್ಕ ಒಬ್ಬಳು "ನೀವು ಮಾಡ್ತೀರಾ...?" ಅಂತ ರಾಗ ಎಳದು ಜೊತಿಗೆ ಇದ್ದವರ ಮುಖಾ ನೋಡಿ ನಕ್ಕಳು. ಆಗ ನನ್ನ ಅಹಂ ಜಾಗೃತ ಆಯಿತು. ಆದರ ಆ ಎಲ್ಲ ಮಾತುಕತಿಗೆ ಸಾಕ್ಷಿ ಅನ್ನೋಹಾಂಗ ನಿಂತಿದ್ದ ನಮ್ಮ ಮನೀಮ್ಯಾಗಿನವರು "ನೀವು ಭ್ರಾಹ್ಮಣರು ಅಲ್ವಾ; ನೀವು ದಬ್ಬೆ ಹಿಡಿತೀರಾ?" ಅಂತ ಕೇಳಿದರು. ಅಗ ನನ್ನ ಮನಸ್ಸು ಇನ್ನಷ್ಟು ಗಟ್ಟಿ ಆತು "ಯಾಕೆ ದಬ್ಬೆ ಹಿಡಿಬಾರದು? ಹಿಡಿದ ತೀರತೀನಿ" ಅಂತಾ ನಿರ್ಧಾರ ಮಾಡಿದೆ.

ನಮ್ಮ ಮನಿ ಹತ್ತಿರದಾಗ ಕೆಲವ ದಿವಸದ ಹಿಂದ ಗಣೇಶನ್ನ ಕೂಡಿಸಿದ್ದಾಗ ಹಂದರಾ ಹಾಕೋದಕ್ಕ ತಂದಿದ್ದ ಬಿದುರು ಹಾಂಗ ಬಿದ್ದಿದ್ವು. ನಾನು ಸರಕ್ಕನ ಅಲ್ಲಿಗೆ ಮಚ್ಚು ತಗೊಂಡು ಹೋದೆ. ಆಗ ನಮ್ಮ ಮನೀಮ್ಯಾಗಿನವರು ಮತ್ತ ದಬ್ಬೆ ಹೊಡಿಯೋ ಕೆಲಸ ಮಾಡತೀನಿ ಅಂತಾ ಬಂದು ಸಿಕ್ಕಾಪಟ್ಟೆ ರೊಕ್ಕಾ ಕೇಳಿದ್ದ ನಾಲ್ವರೂ ಸುಮ್ಮನ ನಿಂತು ನೋಡತಿದ್ದರು. ನಾನು ಹಟಕ್ಕ ಬಿದ್ದವನಹಾಂಗ ಮಚ್ಚು ಹಿಡಕೊಂಡು ಆ ಬಿದುರು ಸೀಳಿದೆ. ನಮ್ಮ ಊರಿನ್ಯಾಗ ತೆಂಗಿನ ಗರಿ ಸೀಳಿದ ಅನುಭವಾ ಇಲ್ಲಿ ಪ್ರಯೋಜನಕ್ಕ ಬಂತು.

ಬಿದುರು ಸೀಳಿದೆ. ತೆಳುವಾಗಿ ಮೂರು ಸೀಳನ್ನು ಒಂದರ ತುದಿಗ ಒಂದು ಸೇರಿಸಿ ಕಟ್ಟಿದೆ. ಆನಂತರ ಮನ್ಯಾಗಿದ್ದ ನನ್ನ ಹಳೆ ಟಿ-ಶರ್ಟ್ ಹರಿದು ಬಿದುರು ಸೀಳಿನ ತುದಿಗೆ ಕಟ್ಟಿದೆ. ಎಲ್ಲಿಂದ ಹೊಲಸು ನೀರು ಹರಿತಿತ್ತೋ ಅಲ್ಲಿದ್ದ ಕಲ್ಲು ಎತ್ತಿದೆ. ಅಲ್ಲಿದ್ದ ಪೈಪಿನ್ಯಾಗ ದಬ್ಬೆ ತಳ್ಳಿದೆ. ಎರಡು ಮೂರು ಸರತಿ ಹಿಂದೆ ಎಳೆದು ತಳ್ಳಿದೆ. ಸರ್ರನ ನೀರೆಲ್ಲಾ ಹರಿತು. ಎಲ್ಲಾ ಎರಡು ನಿಮಿಷದಾಗ ಕ್ಲೀನ್ ಆತು. ಆಗ ನಮ್ಮ ಮನಿಮ್ಯಾಗಿದ್ದವರು ಕಣ್ಣ ಬಿಟ್ಟಕೊಂಡು ನೋಡತಿದ್ದರು. ಇತ್ತಾಗ ದಬ್ಬೆ ಹೊಡೆಯೋದಕ್ಕಂತ ಎರಡು ಸಾವಿರ ರೂಪಾಯಿ ಕೇಳಿದ್ದ ಆ ನಾಲ್ಕೂ ಜನಾನೂ ನಮ್ಮ ಮನಿ ಮುಂದಿನ ಕಲ್ಲಿನಮ್ಯಾಗ ಕುಂತು ಮುಖಾಮುಖಾ ನೋಡಿಕೋತಿದ್ರು.

ದಬ್ಬೆ ಹೊಡೆಯೋದಕ್ಕ ಅಂತ ಆ ನಾಲ್ಕೂ ಜನಾನ ಕರಕೊಂಡ ಬಂದಿದ್ದ ನನ್ನ ಗೆಳೆಯಾ ಕೂಡ ಮೂಕ ಪ್ರೇಕ್ಷಕ ಆಗಿ ನಿಂತಿದ್ದ. ಒಮ್ಮೆ ನನ್ನ ಕಡೀಗ ಮತ್ತ ಇನ್ನೊಮ್ಮೆ ಆ ದಬ್ಬೆ ಹೊಡೆಯೋ ಕೆಲಸದವರ ಕಡೀಗ ನೋಡಿದ.

ಇಷ್ಟೆಲ್ಲಾ ಆದಮ್ಯಾಗ; ನಾನು ಜೇಬಿಗೆ ಕೈಹಾಕಿ ನೂರು ರೂಪಾಯಿ ತಗದು ಆ ದಬ್ಬೆ ಹೊಡೆಯೋದಕ್ಕಂತ ಬಂದಿದ್ದ ನಾಲ್ಕರ ತಂಡದ ನಾಯಕಿಯಂತಿದ್ದ ಹೆಂಗಸಿನ ಕೈಗೆ ಕೊಟ್ಟು "ಮುಂದ ಯಾರಿಗೂ ಹಿಂಗ ಬಾಯಿಗೆ ಬಂದಹಾಂಗ ರೊಕ್ಕಾ ಕೇಳಬ್ಯಾಡ್ರಿ; ಹಂಗ ಮಾಡಿದ್ರ ಎಲ್ಲಾರೂ ನನ್ನಹಂಗ ತಮ್ಮ ಕೆಲಸಾ ತಾವ ಮಾಡಿಕೋತಾರ" ಅಂತಾ ಬುದ್ದಿ ಹೇಳಿ ಕಳಿಸಿದೆ. ಆಗ ಆ ನಾಲ್ವರ ಮುಖಾ ಸಣ್ಣಗಾಗಿತ್ತು.

ಆದರ ನಾನು; ಆಗ ಅವರಿಗೆ ಬುದ್ಧಿಮಾತು ಹೇಳಿದ್ದರೂ; ಮನದಲ್ಲಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೆ. ಏಕೆಂದರೆ ಅವರು ಬಂದು ಹೀಗೆ ಭಾರಿ ರೊಕ್ಕಾ ಕೇಳದಿದ್ರ ನನ್ನಲ್ಲಿನ ಅಹಂ ಜಾಗೃತ ಆಗತಿರಲಿಲ್ಲ. "ನಾನೂ ದಬ್ಬೆ ಹಿಡಿಯೋದಕ್ಕ ಸಾಧ್ಯ" ಅಂತಾ ಯೋಚಿಸೋದಕ್ಕೂ ಆಗತಿರಲಿಲ್ಲ. ಯಾವುದೇ ಕೆಲಸ ಯಾರಿಗೇ ಸೀಮಿತವಾದದ್ದು ಅಲ್ಲ; ಅದಕ್ಕೆ ಜಾತಿ ಹಾಗೂ ಧರ್ಮದ ಚೌಕಟ್ಟು ಕಟ್ಟುವ ಅಗತ್ಯಾನೂ ಇಲ್ಲ. ಮನಸ್ಸು ಮಾಡಿದ್ರ ಯಾರಾದ್ರೂ ಯಾವುದಾದ್ರೂ ಕೆಲಸ ಮಾಡಬಹುದು!

ಬದುಕಿನ ಬೆಂಕಿ


ಕಣ್ಣಂಚಿನಾ ಕಾಡಿಗೆಯೂ
ಹೊಂಚು ಹಾಕುತಿದೆ.
ಮಿಂಚು ಮೂಡುತಿದೆ;
ಸಂಚು ಮಾಡುತಿದೆ.

ಬೆಂಕಿಯಂಚಿನ ಕುಡಿ,
ಕಣ್ಣಂಚಿನ ಕಿಡಿ;
ಸಿಡಿಯುತಿದೆ,
ಅದ; ಮನ ತಡಿಯುತಿದೆ.
ಮುಂಚಿನಾ ದಿನಗಳ,
ಮಧುರ ನೆನಪುಗಳನೆಲ್ಲಾ
ಗಂಟು ಮಾಡಿ ಕಟ್ಟಿ,
ಕಡ್ಡಿ ಗೀರಿಯಿಟ್ಟು;
ಬೆಂಕಿಗಾಹುತಿ ಕೊಟ್ಟು,
ಮನ ಮರುಗುತಿದೆ.
ಎದೆ; ಸೊರಗುತಿದೆ.

ಕಣ್ಣೀರಿಟ್ಟು, ಮಣ್ಣನೂ
ತೋಯಿಸಿಬಿಟ್ಟು;
ತಣ್ಣಗಾಯಿತು ಎಲ್ಲಾ...!
ಕರಗಿ, ಕೊರಗಿ, ಸೊರಗಿ
ಬರಿದಾಯಿತೆಲ್ಲಾ.
ನನಗೂ-ನಿನಗೂ ಏನೂ ಇಲ್ಲ.
ನಾವಿಬ್ಬರೂ ಒಂದೆಂದು,
ನಮ್ಮ ಮನೆ-ಮನ ಒಂದೆಂದು;
ಅಂದು ಹೇಳಿದ್ದು, ಬರಿ ಸುಳ್ಳು!
ನನ್ನ-ನಿನ್ನ
ತನು, ಮನ, ಮನೆ ಖಾಲಿ.
ಇದೇ ಅಲ್ಲವೇ?
ಬದುಕಿನ ಲೀಲೆ

ನಮ್ಮ ಪ್ರಗತಿ ಭಾಳಷ್ಟು "ಪ್ರೊಗ್ರೆಸ್" ಆಗ್ಯದ...!


ಹೌದ್... ಖರೇನ ಆಗ್ಯದ! ಏನು...? ಪ್ರೊಗ್ರೆಸ್...! ಖರೇನ ಹೇಳತೀನಿ ನಮ್ಮ ಪ್ರಗತಿ ಭಾಳಷ್ಟು "ಪ್ರೊಗ್ರೆಸ್" ಆಗ್ಯದ. ಏನ್ ಪ್ರೊಗ್ರೆಸ್ ಆಗ್ಯದ; ಮೊಣಕಾಲ್ ಮುರಕೊಂಡು ಮುಗ್ಗರಿಸಿ ಬಿದ್ದದ.

ಮ್ಯಾಲೆ ನೋಟಕ್ಕೂ ಪ್ರೊಗ್ರೆಸ್ ಕಾಣೋದಿಲ್ಲಾ; ಒಳಗ ಹೊಕ್ಕು ವಿಮರ್ಶೆ ಮಾಡಿದ್ರೂ ಪ್ರೊಗ್ರೆಸ್ ಅನ್ನೋದು ಒಂದೆಳ್ಳು ಕಾಳಿನಷ್ಟೂ ಕಾಣಿಸೋದಿಲ್ಲಾ. ಪ್ರೊಗ್ರೆಸ್ ಅನ್ನೋದು ಎಲ್ಲಾ ಇಲ್ಲಿ ಇರೋ ಚಿತ್ರದ ಥರಾನಾ ಐತಿ. ಪ್ರಗತಿ ಕಡಿಗೆ ಸ್ವಲ್ಪ ತಾಕತ್ತು ಹಾಕಿ ಎಳದರ ಚೆಡ್ಡಿನ ಕಿತ್ತ ಬರತೈತಿ.

ಪ್ರೊಗ್ರೆಸ್ ಮಾಡತೀನಿ ಅಂತ ತಾಕತ್ತ ಹಾಕಿ ಎಳದವನ ಕಥಿ ಏನಾಕ್ಯತೊ ಗೊತ್ತಿಲ್ಲ. ಒಂದಂತೂ ಖರೆ ಸ್ವಲ್ಪ ಜೋರು ಮಾಡಿದರ ಹಿಡದೆಳದ ಹಗ್ಗದ ಜೊತಿಗೆ ಚೆಡ್ಡಿ ಕಿತ್ತು ಬಂದು; ಎಳದವಾ ಅಂಗಾತ ಬಿದ್ದು ಮೈಯೆಲ್ಲಾ ಗಾಯಾ ಮಾಡಿಕೊಳ್ಳದಂತೂ ಖರೆ.

ಅದಕ್ಕ ಹೇಳೋದು, ಪ್ರಗತಿ ವಿಚಾರದಾಗ ನಮ್ಮ ದೇಶದಾಗ ಎಲ್ಲಾ ಹಿಂಗ ಆಗತದ ಅಂತ! ಪ್ರೊಗ್ರೆಸ್ ಬಗ್ಗೆ ಮಾತಾಡೋರು ಭಾಳ ಅದಾರ; ಆದರ ನಿಜವಾದ ಪ್ರಗತಿಗೆ ಪ್ರಯತ್ನ ಮಾಡೋರ ಕಥಿ ಈ ಚಿತ್ರದಾಗಿರುವ ಪಾಪದವನ ಸ್ಥಿತಿ ಆಗತದ!

ಒಂದು ಕಥಿ ಹೇಳ್ತೀನಿ..."ಗುಬ್ಬಿಗೆ ಅಂಜದು ಗರುಡ"


ಇದು ಕಥೆ ಅಷ್ಟ ಆಗ್ಯದ; ಹೌದು! ಖರೇನ ಇದು ಕಥಿಯಾಗ್ಯದ. ಹಾಗಂತ ತಿಳಕೊಂಡ ನೀವೆಲ್ಲಾ ಓದಬೇಕು. ನಿಜ ಬದುಕಿಗೂ ಈ ಕಥೆಗೂ ಎಷ್ಟೂ ಸಂಬಂಧಾ ಇಲ್ಲಾ. ಅದಕ್ಕ ನೀವೆಲ್ಲಾ ಕಥಿ ಇದು ಅಂತಾನ ಓದಿಕೋಬೇಕು ಅಂತ ನಿಮ್ಮಲ್ಲಿ ಪ್ರಾರ್ಥನಾ ಮಾಡಕೋತಿನಿ.

ನಿಮ್ಮ ಗೆಳಿಯಾ... ಡಿ.ಗರುಡ

ಭಾರಿ ದೊಡ್ಡದೊಂದು ಕಾಡು. ಅದರ ಅಂಚಿನ್ಯಾಗೊಂದು ನಾಡು. ನಾಡಿನ್ಯಾಗ ಹ್ಯಂಗೊ ಕಾಡಿನಾಗೂ ಜೀವನಾ ನಡೀತಿತ್ತು. ಕಾಡ್ ಪ್ರಾಣಿಗಳು ಇದ್ವು. ಅವಗಳಿಗೆ ವಾಸಕ್ಕ ಜಾಗಾ ಇತ್ತು. ಜನತಂತ್ರ ಸರ್ಕಾರಾ ಇತ್ತು. ಪ್ರಜಾತಂತ್ರ ರಕ್ಷಣೆಗೆ ಅಂತ ಪ್ರಾಣಿಗೋಳೆಲ್ಲಾ ಸೇರಿ ಸುದ್ದಿ ಪೇಪರೂ ಮಾಡಿದ್ವು.

ನೂರಾರು ಸಿಂಹಗಳೊಳಗ ಒಬ್ಬ ಸಿಂಹರಾಜಾನ ಆ ಪೇಪರಿನ "ಎಡಿಟರು". ಹುಲಿರಾಯ, ಕರಡಿಯಪ್ಪ, ಚಿರತಿರಾಯಾ... ಹಿಂಗ ಎಲ್ಲಾ ಪ್ರಾಣಿಗಳೋಳು ಒಂದೊಂದು ಪೋಸ್ಟನ್ಯಾಗ ಇದ್ವು. ಅದು ಒಂಥರಾ ಪ್ರಜಾಪ್ರಭುತ್ವದ ಬಿಂಬಾ ಆಗಿರೋಹಂತಾ ಸುದ್ದಿ ಪೇಪರು. ಆದ್ದರಿಂದ ಅಲ್ಲಿ ಎಲ್ಲಾ ಜಾತಿ ಪ್ರಾಣಿಗಳಿಗೂ ಸಮಾನ ಅವಕಾಶ. ಅದಕ್ಕ ಅದನ್ನ ಭಾರಿ ವಿಶ್ವಾಸಾ ಇರೋ ಪೇಪರು ಅಂತಾ ಕಾಡಿನ ಪ್ರಾಣಿ-ಪಕ್ಷಿಗಳೆಲ್ಲಾ ಮೆಚ್ಚಿಕೊಂಡು ಓದತಿದ್ವು.

ನಾಡಿನ್ಯಾಗ ಹೆಂಗೊ ಕಾಡಿನ್ಯಾಗೂ ರಾಜಕೀಯಾ ನಡೀತಿತ್ತು. ರಾಜಕಾರಣಿಗಳ ಸೋಗಿನ ತ್ವಾಳಗಳು ಇದ್ವು. ತುಂಟತನಾ ಮಾಡೋ ಕೋತಿಗಳ ಪಕ್ಷಾನೂ ಇತ್ತು. ಸಂಭಾವಿತರು ಇರೋ ಪ್ರಾಣಿಗಳ ಪಾರ್ಟಿನೂ ಇದ್ವು. ಉದ್ಯಮಾ ನಡಸೋ ನರಿಗಳು ಇದ್ವು. ಈ ಪ್ರಾಣಿಗೋಳಿಗೆಲ್ಲಾ ವಿದೇಶಾ ಅಂದ್ರ ಮನುಷಾರು ಬದುಕೊ ನಾಡು, ಅವರ ಹೊಲಾ, ತ್ವಾಟಾ...!

ಕಾಡಿನ್ಯಾಗೂ ನಾಡಿನಹಂಗ ಪರಿಸರ ರಕ್ಷಣೆ ಹಾಡು ಹಾಡೋದಕ್ಕ ಗುಬ್ಬಚ್ಚಿಗಳೂ ಇದ್ವು. ನಾವು ಚಿವ್...ಚಿವ್... ಅಂದರನ ಬೆಳಕು ಹರೀತೈತಿ. ಸೂರ್ಯಾ ಹುಟ್ಟತಾನ... ಪರಿಸರಾ ಉಳಿತೈತಿ ಅಂತಿದ್ವು ಆ ಗುಬ್ಬಿಗಳು. ಆದರ ಆ ಗುಬ್ಬಿಗಳು ಕಾಡ್ ಉಳಸತೀವಿ ಅಂತ ಕಾಡಿನ್ಯಾಗ ಹಾಡು ಹಾಡತಿದ್ರು; ಹೊಟ್ಟಿ ತುಂಬಿಸಿಕೊಳ್ಳಾಕ ಹೋಗತಿದ್ದದ್ದ ಪಕ್ಕದ ವಿದೇಶಾ ಅನ್ನೋ ನಾಡಿನ್ಯಾಗ.

ಪರಿಸರವಾದಿ ಗುಬ್ಬಚ್ಚಿಗಳು ಹೊಟ್ಟಿ ಹರಿಯೋಹಂಗ ಕಾಳನ್ನ ವಿದೇಶಾ ಅನ್ನೋ ನಾಡಿನ್ಯಾಗ ತಿಂದು ಬಂದು ಕಕ್ಕಾ ಮಾಡತಿದ್ದದ್ದ ಕಾಡಿನ್ಯಾಗ. ಬ್ಯಾರೆ ಎಲ್ಲಾ ಪ್ರಾಣಿ ಪಕ್ಷಿಗಳೆಲ್ಲಾ ಕಾಡಿನ್ಯಾಗ ಇರೋದನ್ನ ತಿಂದು ಬದಕತಿದ್ರ ಈ ಗುಬ್ಬಚ್ಚಿಗಳಿಗೆ ನಾಡು ಅನ್ನೋ ವಿದೇಶದವರ ಹೊಲದಾಗಿನ ಜ್ವಾಳಾ, ಭತ್ತಾ, ರಾಗಿನ ತಿನ್ನಾಕ ಬೇಕು. ನಾವೇನು ಕಾಡಿನ್ಯಾಗ ತಿನ್ನೋದಿಲ್ಲ; ನಾಡಿನ್ಯಾಗಿಂದ ಕಾಳು ತಿಂದು ಬರ್ತೀವಿ; ಅದಕ್ಕ ನಾವು ಕಾಡು ಉಳಿಸೋ ಪರಿಸರವಾದಿಗಳು ಅಂತಾ ಗುಬ್ಬಚ್ಚಿಗೋಳೆಲ್ಲಾ ಚಿವ್...ಚಿವ್... ಅಂತಿದ್ವು.

ಒಮ್ಮೆ ಕಾಡಿನ್ಯಾಗ ಇರೋ ಕಣ್ಣು ಕಾಣದ, ಕಾಲು ಮುರದ, ಆರೋಗ್ಯಾ ಇಲ್ಲದ ಮತ್ತ ವಯಸ್ಸಾದ ಆನಿಗಳೆಲ್ಲಾ ಸೇರಿ ತಮಗೆಲ್ಲಾ ಒಂದು ಇರಾಕ ಒಂದು ಪುನರ್ವಸತಿ ಕೇಂದ್ರಾ ಮಾಡಿಕೊಡ್ರಿ ಅಂತ ಕಾಡಿನ ಸರ್ಕಾರಾನ ಕೇಳಿದ್ವು. ಅದಕ್ಕಂತ ದೊಡ್ಡದೊಂದು ಅರ್ಜೀನೂ ಬರದು ನೂರಾರು ಸಿಂಹಗಳೊಳಗ ದೊಡ್ಡವಾಗಿದ್ದ ಇನ್ನೊಬ್ಬ ಸಿಂಹರಾಜಾಗ ಹೇಳಿದ್ವು.

ಅದ ಹೊತ್ತಿಗೆ ಇತ್ತಾಗ ಇನ್ನೊಬ್ಬ ಸಿಂಹರಾಜ ಅಂದರ ಸುದ್ದಿ ಪೇಪರ್ ಎಡಿಟರ್ ಆಗಿದ್ದ ಸಿಂಹರಾಜ; ಆ ಸಿಂಹರಾಜನ ಪೇಪರಿನ್ಯಾಗ ಸೇರಿಕೊಂಡಿದ್ದಾ "ಗರುಡಾ" ಹಕ್ಕಿ. ಬ್ಯಾರೆ ಎಲ್ಲಾ ಪ್ರಾಣಿ ಪಕ್ಷಿಗಳಿಗಿಂತಾ ಸೂಕ್ಷ್ಮ ಆಗಿರೋವಂಥಾ ಕಣ್ಣ ಹೊಂದಿರೋ ಗರುಡಾ ಹಕ್ಕಿ ಎಲ್ಲಾ ವಿಷಯ್ಯಾನೂ ಸಾಕಷ್ಟು ಸ್ಪಷ್ಟವಾಗಿ ನೋಡತದ ಅಂತಾನ ಸಿಂಹರಾಜನ ಸುದ್ದಿ ಪೇಪರಿನ್ಯಾಗ ಕೆಲಸಾ ಸಿಕ್ಕಿತ್ತು.

ಒಮ್ಮೆ ಆಕಾಶಕ್ಕ ಹಾರಿದ್ರ ಸಾಕು ಗರುಡಾ ಹಕ್ಕಿ ಮ್ಯಾಲಿನಿಂದಲನ ನೋಡಿ ಕಾಡಿನ್ಯಾಗ ಸಂಭಾವಿತ ಪ್ರಾಣಿಗೋಳನ್ನ ಕಾಡೋ ಸರ್ಪಗಳನ್ನೆಲ್ಲಾ ಗುರುತಿಸಿ, ತನ್ನ ಕೊಕ್ಕಿನ್ಯಾಗ ಕುಕ್ಕಿ ಸಾಯಿಸತಿತ್ತು. ಹಿಂಗ ಗರುಡಾ ಪಕ್ಷಿ ತನ್ನ ಕೆಲಸಾ ಮಾಡಿಕೊಂಡು ಹೊಂಟಿತ್ತು. ಯಾರಿಗೂ ಹೆದ್ರೋದಲ್ಲಾ ಈ ಗರುಡಾ ಪಕ್ಷಿ. ಸಿಂಹರಾಜಗ ಇದ್ದದ್ದನ್ನ ಇದ್ಹಾಂಗ ಹೇಳಿ ಬಿಡುವಂಥಾ ಗಟ್ಟಿತನಾ ಇರೋವಂಥಾ ರಿಪೋರ್ಟರ್ ಆಗಿತ್ತು ಗರುಡಾ ಹಕ್ಕಿ.

ಆದರ ಒಮ್ಮೆ ಪರಿಸರಾ ರಕ್ಷಣೆ ಮಾಡ್ತೀವಿ ಅಂತ ಹೇಳಿಕೊಂಡು ವಿದೇಶಾ ಅನ್ನೋ ನಾಡಿನ್ಯಾಗಿನ ಹೊಲದಾಗಿನ ಬೆಳೆನೆಲ್ಲಾ ಕದ್ದು ತಿಂದು ಬರೋ ಗುಬ್ಬಚ್ಚಿಗಳೆಲ್ಲಾ ಸೇರಿಕೊಂಡು ಕಾಡು ಉಳಿಸತೀವಿ. ಹುಲಿರಾಯನ ಜೀವನಾ ತಿಳಿತೀವಿ, ಅವನ ಜೀವನಾ ಅಳೀತೀವಿ ಅಂತೆಲ್ಲಾ ಹೇಳಿ ಚಿವ್...ಚಿವ್... ಗುಟ್ಟಿದ್ವು. ಆದರ ಕಾಡು ಉಳಿಸತೀವಿ ಅಂತ ಹೇಳಿಕೊಂಡ ಆ ಗುಬ್ಬಚ್ಚಿಗಳೆಲ್ಲಾ ಮಾಡಿದ್ದು ಆಕಡೀಗ ಕಾಡಿಗೂ ಒಳಿತಾಗ್ಲಿಲ್ಲಾ ನಾಡಿಗೂ ಒಳಿತಾಗ್ಲಿಲ್ಲಾ.

ಅದಕ್ಕಂತ ಆ ಗುಬ್ಬಚ್ಚಿಗಳ ಮ್ಯಾಲೆ ಕರಡಿರಾಯನ ಕೋರ್ಟಿನ್ಯಾಗೊಂದು ದೊಡ್ಡ ಕೇಸೂ ದಾಖಲಾತು. ಹೆಣ್ಣ ಚಿರತಿ ಒಂದು ಕಾಡಿನ ಆಫೀಸರ್ ಆಗಿತ್ತು. ಅದ ಆ ಎಲ್ಲಾ ಗುಬ್ಬಚ್ಚಿಗಳ ಮ್ಯಾಗ ದೊಡ್ಡದೊಂದು ಕೇಸು ಹಾಕಿ. ಇವರೆಲ್ಲಾ "ಕ್ರಿಮಿನಲ್ಸ್" ಅಂತಾ ಹೇಳಿತ್ತು. ಆ ಕೇಸು ಕರಡಿರಾಯನ ಕೋರ್ಟಿನ್ಯಾಗ ಭಾಳ ವರ್ಷಾ ಆದರೂ ಪೆಂಡಿಂಗ್ ಆಗೇ ಉಳಿತು.

ಇಷ್ಟೆಲ್ಲಾ ಕುತಂತ್ರಾ ಮಾಡಿರೋ ಗುಬ್ಬಚ್ಚಿಗಳು ಆದರೂ ತಾವು "ಪರಿಸರಾ ರಕ್ಷಣೆ ಮಾಡ್ತೀವಿ" ಅಂತಾ ಚಿವ್...ಚಿವ್... ಅನ್ನೋದನ್ನ ನಿಲ್ಸಿರಲಿಲ್ಲಾ. ಅವು ಪರಿಸರಾ ರಕ್ಷಣೆ ಹಾಡು ಹಾಡಿಕೊಂತನ ವಿದೇಶಾ ಅನ್ನೋ ನಾಡಿನ್ಯಾನ ಹೊಲದಾಗಿನ ಕಾಳು ಕದ್ದು ತಿನ್ನೋದು ಎಲ್ಲಾರಿಗೂ ಗೊತ್ತಿತ್ತು. ಸಿಂಹಾ, ಹುಲಿ, ಚಿರತಿ... ಇಂಥಾ ದೊಡ್ಡ ದೊಡ್ಡ ಪ್ರಾಣಿಗೋಳೆಲ್ಲಾನೂ ಚಿವ್... ಚಿವ್... ಅಂತಾ ಹೊಗಳೋ ಕೆಲಸಾನೂ ಈ ಗುಬ್ಬಚ್ಚಿಗಳು ಭಾಳ ಜತನದಿಂದನ ಮಾಡತಿದ್ವು. ಅದಕ್ಕಂತನ ಆ ದೊಡ್ಡ ಪ್ರಾಣಿಗೋಳಿಗೂ ಇವು ಭಾಳ ಒಳ್ಳೇವು ಅಂತಾನ ಅನಸತಿತ್ತು.

ಆದರ ಅವು ಪರಿಸರಾ ಉಳಿಸತೀವಿ ಅಂತ ಹೇಳಿಕೊಂಡು ಮಾಡಿರೋ ಯಡವಟ್ಟೆಲ್ಲಾ ಸಿಂಹಾ, ಹುಲಿ, ಚಿರತಿಗೆ ಗೊತ್ತ ಆಗತಿರಲಿಲ್ಲ. ನೋಡಾಕ ಸಂಭಾವಿತ ಅನ್ನೋಹಾಗ ಕಾಣಿಸೋ ಗುಬ್ಬಚ್ಚಿ ಮಾಡಿದ್ದೆಲ್ಲಾ ಒಳ್ಳೆದ ಅಂತ ಅನಸತಿತ್ತು. ಒಮ್ಮೆ ಕಾಡಿನ ಅಂಚಿನ್ಯಾಗಿದ್ದ ಬುಡಕಟ್ಟು ಜನರನ್ನೆಲ್ಲಾ ಹಿಂಸೆ ಕೊಟ್ಟು ಈ ಗುಬ್ಬಚ್ಚಿಗಳೆಲ್ಲಾ ಒಂದು ಸಿನಿಮಾ ಕೂಡ ಮಾಡಿ ವಿದೇಶಾ ಅನ್ನೋ ನಾಡಿನ ಜನರಿಗೆ ತೋರಿಸಿ ಭಾರಿ ಲಾಭಾನೂ ಮಾಡಿಕೊಂಡಿದ್ವು. ಅದಕ್ಕ ಆ ಗುಬ್ಬಚ್ಚಿಗಳನ್ನಾ ಆ ಕಾಡಿನ ಅಂಚಿನ್ಯಾಗಿರೊ ಬುಟಕಟ್ಟು ಜನರು ಈಗೂ ಬಾಯಿಗೆ ಬಂಧಾಂಗ ಬೈತಾರ.

ಈಗ ಮುಖ್ಯ ವಿಷಯಕ್ಕ ಬರೋಣ. ಅದ ಮೊದಲ ಹೇಳಿಧಾಂಗ ಕಣ್ಣಿಲ್ಲದ, ಕಾಲಿಲ್ಲದ ಮತ್ತ ವಯಸ್ಸಾದ ಆನೆಗಳೆಲ್ಲಾ ಸೇರಿಕೊಂಡು ನೆಮ್ಮದಿಯಿಂದ ಈರೋದಕ್ಕ ಒಂದು ಪುನರ್ವಸತಿ ಕೇಂದ್ರಾ ಮಾಡಿಕೊಡ್ರಿ ಅಂತ ಕಾಡಿನ ಸರ್ಕಾರಾನ ಕೇಳಿಕೊಂಡ್ವು. ಅದಕ್ಕ ಆ ಸರ್ಕಾರದ ದೊಡ್ಡಪ್ಪ ಅನಿಸಿರೋ ಹಿರಿ ಸಿಂಹರಾಜಾನೂ ಒಪ್ಪಿಗಿ ಕೊಟ್ಟಾಗಿತ್ತು.

ಆದ್ರೂ ಈ ವಿಷಯಾನಾ ಕಾಡಿನ ಪ್ರಾಣಿಗೋಳೆಲ್ಲಾ ಸೇರಿ ಚರ್ಚಾ ಮಾಡ್ರಿ, ಆಮ್ಯಾಲ ಹೆಂಗ ಮತ್ತ ಎಲ್ಲಿ ಆನೆಗಳ ಪುನರ್ವಸತಿ ಕೇಂದ್ರಾ ಮಾಡೋದು ಅಂತ ಯೋಚನೆ ಮಾಡಿ, ಮುಂದಿನ ಕೆಲಸಾ ಮಾಡೋಣ ಅಂತ ಸರ್ಕಾರದ ದೊಡ್ಡಪ್ಪ ಅನಿಸಿರೋ ಹಿರಿ ಸಿಂಹರಾಜಾ ಹೇಳಿ ಕಳಿಸಿದ.

ಆದ್ರ ಪರಿಸರಾ ರಕ್ಷಣೆ ಮಾಡೋ ಹಕ್ಕೆಲ್ಲಾ ನಮ್ದು ಅಂತ ಚಿವ್...ಚಿವ್... ಗುಟ್ಟೋ ಗುಬ್ಬಚ್ಚಿಗಳೆಲ್ಲಾ ಗದ್ದಲಾ ಮಾಡೋದಕ್ಕ ಶುರು ಮಾಡಿದ್ವು. ಅದ ಟಾಯಮಿನ್ಯಾಗ ಸಭಾನ ಆಕಾಶದಾಗಿನಿಂದ ನೋಡತಿದ್ದ ಸುದ್ದಿ ಪೇಪರಿನ ವರದಿಗಾರ ಆಗಿದ್ದ ಗರುಡಾ ಹಕ್ಕಿಗೆ ಈ ಗುಬ್ಬಚ್ಚಿ ಮತ್ತ ಏನೋ ಕುತಂತ್ರ ಮಾಡಾಕ ಹತ್ಯದ ಅಂತ "ಹಸಿ ಗ್ವಾಡಿಮ್ಯಾಗ ಹಳ್ಳ್ ಹೊಡಧಾಂಗ" ಸ್ಪಷ್ಟವಾಗಿ ಗುರುತಿಸ್ತು.

ಅದ್ರ ಗರುಡಾ ಹಕ್ಕಿ ನನ್ನ ಮನದೊಳಗಿನ ಕುತಂತ್ರಾನ ಗುರತ್ ಹಿಡದೈತಿ ಅನ್ನೋದು ಅದು ಹ್ಯಾಂಗೋ ಆ ಪರಿಸರವಾದಿ ಗುಬ್ಬಚ್ಚಿಗಳಿಗೆ ಗೊತ್ತಾತು. ಅದಕ್ಕ ದೊಡ್ಡ ಗದ್ದಲಾನ ಶುರುಮಾಡಿದ್ವು. ಅಷ್ಟ ಅಲ್ಲ ತಮ್ಮ ಶಿಫಾರಸು ಎಂಥಾದೈತಿ ಅಂತ ತೋರ್ಸಾಕ ಸಿಂಹರಾಜನ ಸುದ್ದಿ ಪೇಪರಿನ್ಯಾಗ ಇರೋ ಹುಲಿರಾಯನ ಕಿವಿನೂ ಕಚ್ಚೀದ್ವು.

ಪರಿಸರಾ ಉಳಿಸತೀವಿ ಅಂತ ಹೇಳಿಕೊಂಡು ವಿದೇಶಾ ಅನ್ನೋ ನಾಡಿನ್ಯಾಗಿನ ಹೊಲದಾಗಿನ ಕಾಳು ಕದ್ದು ತಿನ್ನೊ ಗುಬ್ಬಚ್ಚಿಗಳು ಹಿಂಗ ಮಾಡಿದ್ವು ಅಂತ ಗರುಡಾ ಹಕ್ಕಿಯೇನು ಹೇದರ್ತದಾ. ಇದ್ದದ್ದು ಇದ್ದಾಂಗ ಎಲ್ಲಾನೂ ಸಿಂಹರಾಜನ ಸುದ್ದಿ ಪೇಪರಿನ ಆಫಿಸಿನ್ಯಾಗ ತಿಳಿಸ್ತು. ಆನೆಗಳ ಕಷ್ಟಾನೂ ವಿವರಿಸ್ತು ಗರುಡಾ ಪಕ್ಷಿ.

ಪ್ರಜಾಪ್ರಭುತ್ವದ ರಕ್ಷಣಾಕ್ಕ ನಿಂತಿರೋ ಸಿಂಹರಾಜನ ಸುದ್ದಿ ಪೇಪರ್ ಆಫಿಸಿನ್ಯಾಗ ಕೊನಿಗೆ ಗೆದ್ದಿದ್ದು ಗರುಡಾ ಪಕ್ಷಿ. ಗುಬ್ಬಚ್ಚಿ ಮಾಡೋದೆಲ್ಲಾ ಹಂಗ; ವಿದೇಶಾ ಅನ್ನೊ ನಾಡಿನ್ಯಾಗಿನ ಹೊಲದಾಗಿನ ಕಾಳು ತಿನ್ನೋದು, ಕಾಡಿನ್ಯಾಗ ಬಂದು "ಕಾಡು ಉಳಿಸ್ತೀವಿ" ಅಂತ ಚಿವ್... ಚಿವ್... ಹಾಡು ಹಾಡೋದು ಅನ್ನೋ ಸತ್ಯದ ಮಾತು ಎಲ್ಲಾರ ಮನಸಿನ್ಯಾಗೂ ಅಚ್ಚಾತು!


ಆ ಫುಟ್ಬಾಲ್ ಕನಸುಗಾರ...!


ಸಾಗರದಾಕಡೀಗ ವಿಶ್ವಕಪ್ ಫುಟ್ಬಾಲ್ ಆಟಾ ನಡ್ಯಾಕ ಹತ್ತೈತಿ. ಘನಾ ಸಂಭ್ರಮಾ ಅಲ್ಲಿ. ಎಲ್ಲಾರು ಮುಖಕ್ಕ ಬಣ್ಣಾ ಬಳಕೊಂಡು ಹಾಡಿ ಕುಣಿಯೋದನ್ನ ನೋಡಬೇಕು. ಅದೇನು ಭಾರಿ ಹಬ್ಬಾ. ಆಡೋರು ಭಾರಿ ತಾಕತ್ತಿನೋರು. ಅವರಾಟ ಟೀವಿನ್ಯಾಗ ನೋಡಿದಾಗೆಲ್ಲಾ ನನ್ನ ಕಣ್ಣಮುಂದ ಆ ಮುಂಬೈ ಹುಡಗನ ನೆನಪ ಬರತೈತಿ.

ಆ ಹುಡಗಾನೂ ಹಿಂಗ ದೊಡ್ಡದೊಡ್ಡ ಟೂರ್ನಿನ್ಯಾಗ ಫುಟ್ಬಾಲ್ ಆಡಬೇಕು ಅಂತಾ ಕನಸು ಕಂಡಿದ್ದಾ. ಆದರ ಅವಗ ಹದಿನೈದು ವರ್ಷಾ ವಯಸ್ಸಾಗೋಹೊತ್ತಿಗೆ ಫುಟ್ಬಾಲ್ ಅನ್ನೋ ಕನಸು ಕರಿಗಿ ಹೋತು. ಅಷ್ಟ ಅಲ್ಲಾ ಅವನೂ ಈ ಲೋಕಾನಾ ಬಿಟ್ಟ ಹ್ವಾದಾ.

ಹುಡಗನ ಹೆಸರು ಡಿಯಾಗೊ (ನಿಜ ಹೆಸರು ಬೇರೆ) ಅಂತಾನ ಇಟ್ಟಕೊಳ್ಳರಿ. ಆ ಹುಡುಗಾ ಹುಟ್ಟಿ ಬೆಳದಿದ್ದೆಲ್ಲಾ ಮುಂಬೈನ್ಯಾಗ. ಅದೂ ಒಂದು ಸ್ಲಮ್ಮಿನ್ಯಾಗ. ಆದರ ಅವರಪ್ಪಾ ದಕ್ಷಿಣ ಕನ್ನಡದಾವಾ. ಕೆಲಸಾ ಹುಡಕಿಕೊಂಡ್ ಮುಂಬೈಗೆ ಹ್ವಾದಾವಾ. ಅಲ್ಲೇ ಸ್ಲಮ್ಮಿನ್ಯಾಗ ಇದ್ದಾವಾ.

ಅಲ್ಲೇ ಭಾಳಾ ವರ್ಷದಿಂದಾ ಜೀವನಾ ಮಾಡಿದ್ರು. ನಮ್ಮ ಡಿಯಾಗೊ ಕೂಡಾ ಅಲ್ಲೇ ಇದ್ದಾವಾ. ದಾರಾವಿ ಅಂಚಿನ್ಯಾಗಿರೊ ಒಂದು ಸ್ಲಮ್ ಅದು. ಡಿಯಾಗೊ ಶ್ಯಾಲಿನ್ಯಾಗೂ ಫಸ್ಟ್ ಕ್ಲಾಸ್ ಇದ್ದಾ. ಆದರ ಅವಗ ಫುಟ್ಬಾಲ್ ಅಂದ್ರ ಭಾರಿ ಹುಚ್ಚು. ಸ್ಲಮ್ ಗುಡಸಲದಾಗಿನ ಗ್ವಾಡಿ ಮ್ಯಾಗೆಲ್ಲಾ ಅವಾ ಫುಟ್ಬಾಲ್ ಆಡೋರ್ ದೊಡ್ಡದೊಡ್ಡ ಚಿತ್ರಾ ಅಂಟಿಸಿಕೊಂಡಿದ್ದಾ. ಮನ್ಯಾಗ ನಾಲ್ಕಾರು ಫುಟ್ವಾಲ್ ಚೆಂಡು ಕೂಡಾ ಇದ್ವು.

ಶಾಲಿ ಬಿಟ್ತಂದ್ರ ಸಾಕು ಚೆಂಡು ಹಿಡಕೊಂಡು ಸ್ಲಮ್ ಗಲ್ಲಿನ್ಯಾಗ ಒದಕೊಂಡು ಪಕ್ಕದ ಬಯಲಿಗೆ ಹೋಗತಿದ್ದಾ. ಅವನ ಉತ್ಸಾಹ ನೋಡಬೇಕು; ಏನೆನೆಲ್ಲಾ ಟೆಕ್ನಿಕ್ ಬಳಸತಿದ್ದಾ. ಟೀವಿನ್ಯಾಗ ಬರೋ ಆಟದಾಗ ಯಾವದಾದ್ರು ಒಂದು ಹೊಸಾ ಟೆಕ್ನಿಕ್ ಕಂಡ್ರ ಸಾಕು, ಅದನ್ನ ಮಾರನೇ ದಿನಾ ತನ್ನ ಚೆಂಡಿನಮ್ಯಾಗ ಪ್ರಯೋಗಾ ಮಾಡತಿದ್ದಾ.

ನಾನು ಅವನ್ನ ನೋಡಿದ್ದು ಒಂದು ಆಕಸ್ಮಿಕಾ. ಮುಂಬೈನ್ಯಾಗ ಫೋಟೋಗ್ರಾಫಿ ಕಲ್ಯಾಕಂತ ಹೋಗಿದ್ದೆ. ಆವಾಗ ಅಲ್ಲೇ ಇದ್ದ ಕನ್ನಡದವ್ರು ಒಬ್ರು ಜೊತಿಗೆ ಆ ಹುಡಗನ ಅಪ್ಪನ ಜೊತಿಗೆ ಮಾತಾಡಾಕ ಹೋಗಿದ್ದೆ. ಆವಾಗ ಆ ಫುಟ್ಬಾಲ್ ಕನಸುಗಾರ ಡಿಯಾಗೊಗ ಸುಮಾರು ಹನ್ನೆಡೂವರಿ ವರ್ಷಾ ವಯಸ್ಸು.

ಅವತ್ತು ಅವಾ ಸಂಜೀಗೆ ನಮ್ಮನ್ನೂ ತಾನು ಫುಟ್ಬಾಲ್ ಆಟೋ ಬಯಲಿಗೆ ಕರಕೊಂಡು ಹೋಗಿದ್ದಾ. ಅಲ್ಲಿ ಅವಾ ಆಟಾ ಆಡೋದನ್ನ ನೋಡಿದಾಗ ಈ ಸಣ್ಣ ಗುಡುಗಾ ಎಷ್ಟ ಚೆಂದ ಆಡತಾನಾ ಅಂತ ಬೆರಗಾದ್ವಿ. ಅವಾ ತಲಿ ಕೆಳಗಮಾಡಿ ಮ್ಯಾಲೆ ಜಿಗದು ಚೆಂಡನ್ನ ಒದ್ದಿದ್ದ ರೀತಿ ಅಂತೂ ಇನ್ನೂ ನನ್ನ ಕಣ್ಣ ಮುಂದ ಐತಿ.

ನಾನು ಮತ್ತ ಎರಡೂವರಿ ವರ್ಷಾ ಆದಮ್ಯಾಗ ಮುಂಬೈಗೆ ಕ್ರಿಕೆಟ್ ಆಟಾನ ವರದಿ ಮಾಡಾಕ ಹೋಗಿದ್ದೆ. ಆವಾಗ ಒಂದು ದಿನಾ ಟಾಯಮ್ ಮಾಡಕೊಂಡು ರಾತ್ರಿ ದಾರಾವಿ ಅಂಚಿನ್ಯಾಗ ಇರೊ ಆ ಹುಡಗ ಇರೋ ಸ್ಲಮ್ಮಿಗೆ ಹ್ವಾದೆ. ಆವಾಗ ಅವನ ಮನ್ಯಾಗ ಒಂಥರಾ ತಣ್ಣಗ ವಾತಾವರಣಾ ಇತ್ತು. ಆ ಫುಟ್ಬಾಲ್ ಹುಡುಗಾ ಡಿಯಾಗೊ ತಂದಿ ಮುಖದಮ್ಯಾಗ ನಗಿ ಕಟ್ಟಕೊಂಡು ನನ್ನಾ ತನ್ನ ಪುಟ್ಟ ಮನಿ ಒಳಗ ಕರದಾ.

ಆದ್ರ ಹಿಂದ ಇದ್ಹಾಂಗ ಅವತ್ತ ಆ ಮನಿ ಇರಲಿಲ್ಲಾ. ಫುಟ್ಬಾಲ್ ಚೆಂಡೆಲ್ಲಾ ನೆತ್ತಿಮ್ಯಾಗ ನೇತು ಬಿದ್ದಿದ್ವು. ನಾ ಹಿಂದ ಆ ಮನೀಗೆ ಹ್ವಾದಾಗ ಅವೆಲ್ಲಾ ನೆಲದಾಗ ಕಾಲಿಗೆ ಅಡ್ಡಾದಿಡ್ಡಿ ಬರೋಹಾಂಗ ಉರಳಾಡತಿದ್ವು. ಆದ್ರ ಈಗ ಅವು ನೆತ್ತಿಮ್ಯಾಗ ತಣ್ಣಗ ತೂಗತಿದ್ವು. ನಾನು ಮನೀಗೆ ಹೋದಕೂಡಲೇನ ಕೇಳಿದ್ದು "ಎಲ್ಲಿ ನಮ್ಮ ಡಿಯಾಗೊ...?" ಅಂತ.

ಅಗ ಅಡಗಿ ಮನ್ಯಾಗ ಅಡ್ಡ ಗ್ವಾಡಿಗೆ ಒರಗಿಕೊಂಡಿದ್ದ ಆ ಹುಡಕನ ಅವ್ವಾ ಗಳೋ ಅಂತ ಅಳಾಕ ಹತ್ತಿದ್ಲು. ಜೋತಿಗೆ ಸಣ್ಣಗ ಧ್ವನಿ ತಗದು "ಫುಟ್ವಾಲ್ ಆಟಾನ ಅವನ್ನಾ ಬಲಿ ತಗೊಂತು" ಅಂತಾ. ಅದಕ್ಕ ಯಾವರೀತಿ ಪ್ರತಿಕ್ರಿಯಾ ಮಾಡಬೇಕು ಅನ್ನೋದ ನನಗ ತಿಳಿಲಿಲ್ಲಾ. ಸ್ವಲ್ಪ ಹೊತ್ತು ಸುಮ್ಮಗ ಕುಂತೆ. ಆಮ್ಯಾಲ ಆ ಹುಡಗನ ಅಪ್ಪಾ ನನ್ನ ಹೊರಗ ಕರಕೊಂಡು ಬಂದು, ರಸ್ತೆನ್ಯಾಗಿನ ಚಹಾದಂಗಡಿನ್ಯಾಗ ಕರಕೊಂಡು ಹೋಗಿ ಚಹಾ ಕೊಡಿಸಿದಾ.

ಆವಾಗ ಕುಡದ ಚಹಾನೂ ನನಗ ಛಲೋ ಅನಿಸ್ಲಿಲ್ಲಾ. ಹಿಂದ ಅದ ಅಂಗಡಿನ್ಯಾಗ ಒಮ್ಮೆ "ಅದ್ರಕ್ ಚಹಾನ" ಚಪ್ಪರಿಸಿಕೊಂಡು ಕುಡಿದಿದ್ದೆ. ಆದ್ರ ಮತ್ತೊಮ್ಮೆ ಅದೂ ಇಂಥಾ ಸುದ್ದಿ ಕೇಳಿದಮ್ಯಾಗ ಅದ ಚಹಾ ಹಿಡಸಲಿಲ್ಲಾ. ಆದ್ರೂ ಮನಸಿಲ್ಲದ ಮನಸಿನ್ಯಾಗ ಚಹಾ ಹೀರತಿದ್ದೆ.

ಅದ ಹೊತ್ತಿಗೆನ ಆ ಫುಟ್ಬಾಲ್ ಕನಸುಗಾರನ ಅಪ್ಪಾ ಕಷ್ಟಾ ಪಟ್ಟು ಮಾತು ಹೊರಡಿಸಿದಾ "ನೀವು ನೋಡಿದ್ರಲ್ಲ ಅದ ಗ್ರೌಂಡಿನ್ಯಾಗ ಫುಟ್ಬಾಲ್ ಆಡಾಕ ಹೋಗಿದ್ದಾ. ಆದ್ರ ಮನೀಗೆ ಅವನ್ನ ನಾಲ್ಕು ಹುಡುಗ್ರು ಅಂಗಾತ ಎತ್ತಿಕೊಂಡು ಬಂದ್ರು. ಆಮ್ಯಾಲ ಡಾಕ್ಟರ್ ಕಡೀಗೆ ಕರಕೊಂಡು ಹೋದ್ವಿ, ಅಲ್ಲಿಂದ ದೊಡ್ಡ ಹಾಸ್ಪಿಟಲಿಗೂ ತಗೊಂಡು ಹೋದ್ವಿ" ಅಂತ ಹೇಳಿ ಸ್ವಲ್ಪ ವಿರಾಮ ಕೊಟ್ಟಾ. ಆ ವಿರಾಮದ ಮೌನಾ ಭಾಳ ನೋವಾಗೊಹಂತಾದ್ದು.

ಮತ್ತ ದೊಡ್ಡ ಉಸುರು ಎಳದು ಮಾತ್ ಮುಂದುವರಿಸ್ದಾ ಅವಾ "ಡಾಕ್ಟರ್ ಹೇಳಿದ್ರು ಅವಗ ಆಡೋವಾಗ ಎದಿಗೆ ಪೆಟ್ಟು ಬಿದ್ದೈತಿ, ಎದಿ ಒಳಗಿಂದಾ ಸೀಳಿಕೊಂಡೈತಿ; ಉಳಿಯೋದು ಕಷ್ಟಾ ಅಂತ. ಆದ್ರೂ ಆಪರೇಷನ್ ಮಾಡ್ತೀವಿ ಅಂದ್ರು. ಅವತ್ತ ಯಾರ್ಯಾರೋ ಎಲ್ಲಾ ಬಂದು ರೊಕ್ಕಾ ಕೊಟ್ಟು ಆಪರೇಷನ್ ಮಾಡ್ಸೊದಕ್ಕ ಹೆಲ್ಪ್ ಮಾಡಿದ್ರು. ಆದ್ರ ಏನೂ ಪ್ರಯೋಜನಾ ಆಗಲಿಲ್ಲಾ. ನಮ್ಮ ಡಿಯಾಗೊ ಹೊಂಟ್ ಹ್ವಾದಾ" ಅಂತ ಹೇಳಿ ಮುಗಿಸಿದಾ.

ನನಗ ಅದೇನೋ ಒಂಥರಾ ಆತು. ಸ್ವಲ್ಪ ಹೊತ್ತು ಮತ್ತ ಅವರ ಮನೀಗೆ ಹೋಗಿ ಕುಂತು ಮತ್ತ ಹೊರಟು ಬಂದೆ. ಆದ್ರೂ ಫುಟ್ಬಾಲ್ ವಿಷಯಾ ಬಂದಾಗೆಲ್ಲಾ ಆ ಹುಡಗಾ ನೆನಪಾಕ್ಕಾನ. ಈಗೂ ವಿಶ್ವಕಪ್ ಫುಟ್ಬಾಲ್ ಆಟಾನ ಟೀವಿನ್ಯಾಗ ನೋಡೊವಾಗ ಆ "ಫುಟ್ಬಾಲ್ ಕನಸುಗಾರ" ಮನಸಿನ್ಯಾಗ ಬಂದು ಕಾಡತಾನ!

ಕುಡಿಯೋರಿಗೊಂದು ಕವನಾ ಬರ್ದೀನಿ...!



* ಕ್ಷಮಾ ಇರಲಿ ಬೇಂದ್ರೆ ಮಾಸ್ತರ...!

ಕುಡಿಯೋಣು ಬಾರಾ
ಕುಡಿಯೋಣು ಬಾರಾ

ಕಿಣಕಿಣ ಕಾಜಿನ ಗ್ಲಾಸಿನ್ಯಾಗ
ಸಣ್ಣ ಸಣ್ಣ ಪೆಗ್ಗಿನ್ಯಾಗ
ಹಿಡಿಕಿ ಇರೋ ಮಗ್ಗಿನ್ಯಾಗ
ಹಿಂಡ್ ಜನಾ ಇರೋ ಪಬ್ಬಿನ್ಯಾಗ
ಬಾರ್ ಕೌಂಟರ್ ಕಿಡಿಕಿನ್ಯಾಗ
ಗೆಳಿಯಾನ ತ್ವಾಟದಾಗ
ಚೆಂದದ ಪಾರ್ಟಿನ್ಯಾಗ
ದೊಡ್ಡವರ ಕ್ಲಬ್ಬಿನ್ಯಾಗ
ನಾನು-ನೀನು ಸೇರಿ...

ಕುಡಿಯೋಣು ಬಾರಾ
ಕುಡಿಯೋಣು ಬಾರಾ

ಸಂಜಿ ಹೊತ್ತಿರಲಿ
ಚುಮುಚುಮು ಕತ್ತಲಿರಲಿ
ರಾತ್ರಿ ಹೊತ್ತಿರಲಿ
ಕರಿಮೋಡ ಬಿತ್ತಿರಲಿ
ಬಿಸಿಲು ಹೊತ್ತಿ ಉರಿತಿರಲಿ
ಗಡಗಡಿಸೋ ಚಳಿ ಇರಲಿ
ಜಡಿಮಳಿ ಜಡಿತಿರಲಿ
ಕಾಲಚಕ್ರ ನಡಿತಿರಲಿ
ನಾನು-ನೀನು ಸೇರಿ...

ಕುಡಿಯೋಣು ಬಾರಾ
ಕುಡಿಯೋಣು ಬಾರಾ

ಮದಿವಿ ಬಂತಂತ
ಮಗಾ ಹುಟ್ಟಿದಂತ
ಪರೀಕ್ಷಾ ಪಾಸಂತ
ಹೊಸ ವರ್ಷಾ ಬಂತಂತ
ಹುಟ್ಟಿದ ದಿನಾ ಇವತ್ತಂತ
ಗೆದ್ದ ಸಂತೋಷಕ್ಕಂತ
ಮನಿ ಕಟ್ಸಿದಿಯಂತ
ಹೊಸಾ ಕಾರ್ ತರ್ಸಿಯಂತ
ನಾನು-ನೀನು ಸೇರಿ...

ಕುಡಿಯೋಣು ಬಾರಾ
ಕುಡಿಯೋಣು ಬಾರಾ

ಕಷ್ಟಾನ ತಾಳಲಾರದ
ಇನ್ನಷ್ಟು ಬಾಳಲಾರದ
ಹೆಂಡ್ತಿ ಗೋಳು ಕೇಳಲಾರದ
ಮಕ್ಕಳ ಗದ್ದಲಾ ಸಹಿಸಲಾರದ
ಕೆಲಸದ ಭಾರಾ ಹೊರಲಾರದ
ಹೊಸಾ ಕೆಲಸಾ ಸಿಗಲಾರದ
ಮೋಸಾ-ದಗಾ ಸಹಿಸಲಾರದ
ಸಾಲದ ಹೊರಿ ಹೊರಲಾರದ
ನಾನು-ನೀನು ಸೇರಿ...

ಕುಡಿಯೋಣು ಬಾರಾ
ಕುಡಿಯೋಣು ಬಾರಾ

ಕಷ್ಟಾ-ಸುಖಾ ಎಲ್ಲಾ ಬೆರಿಸಿ
ಶುದ್ಧಾತ್ಮಧಾಂಗ ಭಟ್ಟಿ ಇಳಿಸಿ
ದೇಹಾ ಅನ್ನೊ ಬಾಟಲಿಗೆ ಸೇರಿಸಿ
ಬದುಕು ಅನ್ನೊ ಬೆಲೆ ಬರೆಸಿ
ಸಮಾಜಾ ಅನ್ನೊ ಶಿಸ್ತಿಗಂತ
ಶೋಕೇಸಿನ್ಯಾಗ ಇಟ್ಟಿರೊ
ಬಾಟಲಿಗಳನ್ನೆಲ್ಲಾ ತರಿಸಿ
ಕರ್ಮದ ಕರದವಲಕ್ಕಿ ಜೊತಿಗೆ
ಧರ್ಮದ ಸೋಡಾನೂ ಸೇರಿಸಿ
ನಾನು-ನೀನು ಸೇರಿ...

ಕುಡಿಯೋಣು ಬಾರಾ
ಕುಡಿಯೋಣು ಬಾರಾ