ಭ್ರಾಹ್ಮಣ ದಬ್ಬೆ ಹಿಡಿಯಬಾರದೇಕೆ...?


ಮುಖ್ಯ ವಿಷಯ ಹೇಳೋದಕ್ಕೂ ಮೊದಲನ ನಾನು "ದಬ್ಬೆ" ಅಂದರೇನು ಅಂತಾ ಹೇಳಿಬಿಡ್ತೀನಿ. ದಬ್ಬೆ ಇದು ಚರಂಡಿ ಕ್ಲೀನ್ ಮಾಡೋದಕ್ಕ ಬಳಸೋ ಬಿದಿರು ಸೀಳು. ನನ್ನ ಜ್ಞಾನದ ಪ್ರಕಾರ ದಬ್ಬೆ ಅಂದರೆ ದರ್ಭೆ. ದರ್ಭೆ ಅಂದರೆ ಹುಲ್ಲು ಅಥವಾ ಗರಿಕೆ ಅಂತಾನೂ ಸರಳ ಮಾಡಿ ಹೇಳಬೋದು. ದಬ್ಬೆ ಹಾಗೂ ದರ್ಭೆ ಎರಡೂ ಮನಷ್ಯಗ ಬೇಕು. ಸಂಪ್ರದಾಯದ ಆಚರಣೆಗಳಿಗಂತೂ ದರ್ಭೆ ಬೇಕಾಗತದ; ಮನುಷ್ಯಾ ಮಾಡಿದ ಕೊಳೆಯನ್ನಾ ತಳ್ಳಿ ಹಾಕೋದಕ್ಕ ದಬ್ಬೆ ಬೇಕಾಗ್ತದ. ಹೌದು; ದಬ್ಬೆ ಹಾಗೂ ದರ್ಭೆ ಎರಡೂ ಬೇಕು.

ದರ್ಭೆ ಅನ್ನೋದು ಹುಲ್ಲು ಇಲ್ಲವೇ ಗರಿಕೆಯ ಎಸಳು. ಅದೇ ದಬ್ಬೆ ಎಂದರೆ ಬಿದಿರಿನ ಸೀಳು. ಬಿದುರು ಕೂಡ ದರ್ಭೆನ ಆಗ್ಯದ. ಅದು ಕೂಡ ಒಂದು ರೀತಿಯ ಹುಲ್ಲು ಅನ್ನೋದನ್ನಾ ಎಲ್ಲೋ ಓದಿದ ನೆನಪು. ಅದ ಸಣ್ಣ ಹುಲ್ಲಿನ ಗರಿಕಿಯನ್ನಾ ದರ್ಭೆ ಅಂತಾ ದೇವ ಹಾಗೂ ಪಿತೃಕಾರ್ಯಕ್ಕ ಉಪಯೋಗಾ ಮಾಡತಾರ. ದರ್ಭೆಯನ್ನಾ ಭ್ರಾಹ್ಮಣ ಸಂಪ್ರದಾಯದ ಬಹಳಷ್ಟು ಆಚರಣೆಗಳೊಳಗ ಬಳಸಲಾಗತದ. ಆಗ ಹುಲ್ಲಿನ ಎಳೆಯನ್ನ ಹಿಡಿದು ಪಿತೃಕಾರ್ಯಾನ ನಾನೂ ಮಾಡೀನಿ.

ದೇವ ಹಾಗೂ ಪಿತೃಕಾರ್ಯಾ ಮಾಡೋದಕ್ಕ "ದರ್ಭೆ" ಹಿಡಿದ ನಾನು; ನನ್ನ ಮನೆಯ ಕೊಳೆಯನ್ನ ತೊಳೆಯೋದಕ್ಕ "ದಬ್ಬೆ" ಯಾಕ ಹಿಡೀಬಾರದು? ಇದು ನನ್ನನ್ನ ಈ ವಾರಾ ಕಾಡಿದ ದೊಡ್ಡ ಸವಾಲು. ವಿಚಿತ್ರಾ ಅಂದರ; ಬೇರೆಯವರು ನನ್ನನ್ನಾ "ನೀವು ಬ್ರಾಹ್ಮಣರು... ದಬ್ಬೆ ಹಿಡಿತೀರಾ...?" ಅಂತಾ ಕೇಳಿದ್ದು. ಯಾಕ ಭ್ರಾಹ್ಮಣ ದರ್ಭೆ ಹೀಡಿಬೋದು; ಆದರ ದಬ್ಬೆ ಯಾಕ ಹಿಡಿಬಾರದು? ಇಂಥ ಸವಾಲು ಕಾಡೋದಕ್ಕ ಕಾರಣ; ಮೊನ್ನೆ ನಮ್ಮ ಮನ್ಯಾಗಿನ ಡ್ರೆನೇಜ್ ಕಟ್ಕೊಂಡದ್ದು.

ನಾನು ವಾಸಾ ಆಗಿರೋ ಮನಿನ್ಯಾಗಿನ ಡ್ರೆನೇಜ್ ಕಟ್ಕೊಂಡು ಬಿಡ್ತು. ಮನಿ ಮಾಲೀಕರಿಗ ಫೋನ್ ಮಾಡಿ ಹೇಳಿದ್ದಾತು. ಆದರ ಏನೋ ಪ್ರಯೋಜನಾ ಆಗಲಿಲ್ಲ. ಮನಿ ಮಾಲೀಕಾ ಯಾವ ದಬ್ಬೆ ಹೊಡೆಯೋರನ್ನ ಕಳಸಲಿಲ್ಲ. ಅಷ್ಟು ಹೊತ್ತಿಗಾಗಲೇ ಡ್ರೆನೇಜ್ ತುಂಬಿ, ಮನಿ ಬಾಗಿಲಿನ್ಯಾಗ ಕೂಡ ಹೊಲಸು ಹರದು ಬರಾಕ ಹತ್ತಿತ್ತು. ವಾಸನಿ ತಡಿಯ್ಯಾಕ ಆಗತಿರಲಿಲ್ಲ. ಆ ಹೊತ್ತಿಗ ಒಬ್ಬ ಗೆಳೆಯ್ಯಾ ದಬ್ಬೆ ಹೊಡೆಯೋರು ಅಂತಾ ನಾಲ್ಕು ಜನಾನ ಕರಕೊಂಡು ಬಂದಾ.

ಆ ನಾಲ್ಕ ಜನರೊಳಗ ಇಬ್ಬರು ಇಳಿವಯಸ್ಸಿನ ಹೆಂಗಸರು ಹಾಗೂ ಇಬ್ಬರು ಗಂಡಸರು ಇದ್ದರು. ನಾನು ನೇರವಾಗಿ "ಕ್ಲೀನ್ ಮಾಡಾಕ ಎಷ್ಟು ತಗೋತೀರಿ?" ಅಂತ ಕೇಳಿದೆ. ಅದಕ್ಕ ಅ ನಾಲ್ವರ ನಾಯಕಿ ಅನ್ನೋಹಾಂಗ ಕಾಣತಿದ್ದ ಒಬ್ಬಳು "ಎರಡು ಸಾವಿರ ರೂಪಾಯಿ (2000 ರೂ.) ಕೊಟ್ಟಬಿಡ್ರಿ" ಅಂದಳು. ನನಗ ಆಶ್ಚರ್ಯ ಆತು. ಎರಡು ಸಾವಿರ ರೂಪಾಯಿ ಕೊಡಬೇಕಾ ಅಂತ ಯೋಚನೆ ಮಾಡಿದೆ. ನಾನು ಗಮನಿಸಿಧಾಂಗ ಅದು ಐದು ನಿಮಿಷದ ಕೆಲಸಾ. ಎಲ್ಲೋ ಪೈಪಿನ್ಯಾಗ ಅಡ್ಡ ಏನೋ ಸಿಕ್ಕಾಕ್ಕೊಂಡೈತಿ. ಅದನ್ನ ಕ್ಲೀಯರ್ ಮಾಡಿದ್ರ ಡ್ರೆನೇಜ್ ಒಳಗ ನೀರು ಸರಿಯಾಗಿ ಹರಿತದ ಅಂತನೂ ಗೊತ್ತಿತ್ತು. ಅಷ್ಟಕ್ಕ ಎರಡು ಸಾವಿರ ರೂಪಾಯಿ ಯಾಕ ಕೊಡಬೇಕು ಅಂತ ಮತ್ತೊಮ್ಮೆ ಯೋಚನೆ ಮಾಡಿದೆ.

"ಆಗೋದಿಲ್ಲಾ" ಅಂದೆ. ಅದಕ್ಕ ಆ ಇಬ್ಬರು ಹೆಂಗಸರು ಹಾಗೂ ಗಂಡಸರೂ "ನಿಮಗೇನು ಗೊತ್ತು; ಎಷ್ಟು ಕಷ್ಟಾ ಐತಿ ಈ ಕೆಲಸಾ ಅಂತಾ?" ಎಂದು ನನಗೇ ತಿರುಗುತ್ತರ ನೀಡಿದರು. ಆಗ ನನ್ನ ಮನದೊಳಗ ಏನೋ ಒಂಥರಾ ಆತು. "ಹೌದಾ; ಈ ಕೆಲಸಾ ಅಷ್ಟು ಕಷ್ಟದ್ದಾ?" ಅಂತ ಯೋಚನೆ ಮಾಡಿದೆ. ಜೊತಿಗ ನನ್ನ ಮನಸ್ಸು ಹೇಳಿತು "ಈ ಕೆಲಸಾ ಎಷ್ಟು ಕಷ್ಟಾ ನೋಡೇ ಬಿಡೋಣ" ಅಂತ!

"ಬ್ಯಾಡ ಹೋಗ್ರಿ ನಾನ ದಬ್ಬೆ ಹೊಡಿತೀನಿ" ಅಂತ ಆ ನಾಲ್ವರಿಗೂ ಹೇಳಿದೆ. ಅದಕ್ಕ ಒಬ್ಬಳು "ನೀವು ಮಾಡ್ತೀರಾ...?" ಅಂತ ರಾಗ ಎಳದು ಜೊತಿಗೆ ಇದ್ದವರ ಮುಖಾ ನೋಡಿ ನಕ್ಕಳು. ಆಗ ನನ್ನ ಅಹಂ ಜಾಗೃತ ಆಯಿತು. ಆದರ ಆ ಎಲ್ಲ ಮಾತುಕತಿಗೆ ಸಾಕ್ಷಿ ಅನ್ನೋಹಾಂಗ ನಿಂತಿದ್ದ ನಮ್ಮ ಮನೀಮ್ಯಾಗಿನವರು "ನೀವು ಭ್ರಾಹ್ಮಣರು ಅಲ್ವಾ; ನೀವು ದಬ್ಬೆ ಹಿಡಿತೀರಾ?" ಅಂತ ಕೇಳಿದರು. ಅಗ ನನ್ನ ಮನಸ್ಸು ಇನ್ನಷ್ಟು ಗಟ್ಟಿ ಆತು "ಯಾಕೆ ದಬ್ಬೆ ಹಿಡಿಬಾರದು? ಹಿಡಿದ ತೀರತೀನಿ" ಅಂತಾ ನಿರ್ಧಾರ ಮಾಡಿದೆ.

ನಮ್ಮ ಮನಿ ಹತ್ತಿರದಾಗ ಕೆಲವ ದಿವಸದ ಹಿಂದ ಗಣೇಶನ್ನ ಕೂಡಿಸಿದ್ದಾಗ ಹಂದರಾ ಹಾಕೋದಕ್ಕ ತಂದಿದ್ದ ಬಿದುರು ಹಾಂಗ ಬಿದ್ದಿದ್ವು. ನಾನು ಸರಕ್ಕನ ಅಲ್ಲಿಗೆ ಮಚ್ಚು ತಗೊಂಡು ಹೋದೆ. ಆಗ ನಮ್ಮ ಮನೀಮ್ಯಾಗಿನವರು ಮತ್ತ ದಬ್ಬೆ ಹೊಡಿಯೋ ಕೆಲಸ ಮಾಡತೀನಿ ಅಂತಾ ಬಂದು ಸಿಕ್ಕಾಪಟ್ಟೆ ರೊಕ್ಕಾ ಕೇಳಿದ್ದ ನಾಲ್ವರೂ ಸುಮ್ಮನ ನಿಂತು ನೋಡತಿದ್ದರು. ನಾನು ಹಟಕ್ಕ ಬಿದ್ದವನಹಾಂಗ ಮಚ್ಚು ಹಿಡಕೊಂಡು ಆ ಬಿದುರು ಸೀಳಿದೆ. ನಮ್ಮ ಊರಿನ್ಯಾಗ ತೆಂಗಿನ ಗರಿ ಸೀಳಿದ ಅನುಭವಾ ಇಲ್ಲಿ ಪ್ರಯೋಜನಕ್ಕ ಬಂತು.

ಬಿದುರು ಸೀಳಿದೆ. ತೆಳುವಾಗಿ ಮೂರು ಸೀಳನ್ನು ಒಂದರ ತುದಿಗ ಒಂದು ಸೇರಿಸಿ ಕಟ್ಟಿದೆ. ಆನಂತರ ಮನ್ಯಾಗಿದ್ದ ನನ್ನ ಹಳೆ ಟಿ-ಶರ್ಟ್ ಹರಿದು ಬಿದುರು ಸೀಳಿನ ತುದಿಗೆ ಕಟ್ಟಿದೆ. ಎಲ್ಲಿಂದ ಹೊಲಸು ನೀರು ಹರಿತಿತ್ತೋ ಅಲ್ಲಿದ್ದ ಕಲ್ಲು ಎತ್ತಿದೆ. ಅಲ್ಲಿದ್ದ ಪೈಪಿನ್ಯಾಗ ದಬ್ಬೆ ತಳ್ಳಿದೆ. ಎರಡು ಮೂರು ಸರತಿ ಹಿಂದೆ ಎಳೆದು ತಳ್ಳಿದೆ. ಸರ್ರನ ನೀರೆಲ್ಲಾ ಹರಿತು. ಎಲ್ಲಾ ಎರಡು ನಿಮಿಷದಾಗ ಕ್ಲೀನ್ ಆತು. ಆಗ ನಮ್ಮ ಮನಿಮ್ಯಾಗಿದ್ದವರು ಕಣ್ಣ ಬಿಟ್ಟಕೊಂಡು ನೋಡತಿದ್ದರು. ಇತ್ತಾಗ ದಬ್ಬೆ ಹೊಡೆಯೋದಕ್ಕಂತ ಎರಡು ಸಾವಿರ ರೂಪಾಯಿ ಕೇಳಿದ್ದ ಆ ನಾಲ್ಕೂ ಜನಾನೂ ನಮ್ಮ ಮನಿ ಮುಂದಿನ ಕಲ್ಲಿನಮ್ಯಾಗ ಕುಂತು ಮುಖಾಮುಖಾ ನೋಡಿಕೋತಿದ್ರು.

ದಬ್ಬೆ ಹೊಡೆಯೋದಕ್ಕ ಅಂತ ಆ ನಾಲ್ಕೂ ಜನಾನ ಕರಕೊಂಡ ಬಂದಿದ್ದ ನನ್ನ ಗೆಳೆಯಾ ಕೂಡ ಮೂಕ ಪ್ರೇಕ್ಷಕ ಆಗಿ ನಿಂತಿದ್ದ. ಒಮ್ಮೆ ನನ್ನ ಕಡೀಗ ಮತ್ತ ಇನ್ನೊಮ್ಮೆ ಆ ದಬ್ಬೆ ಹೊಡೆಯೋ ಕೆಲಸದವರ ಕಡೀಗ ನೋಡಿದ.

ಇಷ್ಟೆಲ್ಲಾ ಆದಮ್ಯಾಗ; ನಾನು ಜೇಬಿಗೆ ಕೈಹಾಕಿ ನೂರು ರೂಪಾಯಿ ತಗದು ಆ ದಬ್ಬೆ ಹೊಡೆಯೋದಕ್ಕಂತ ಬಂದಿದ್ದ ನಾಲ್ಕರ ತಂಡದ ನಾಯಕಿಯಂತಿದ್ದ ಹೆಂಗಸಿನ ಕೈಗೆ ಕೊಟ್ಟು "ಮುಂದ ಯಾರಿಗೂ ಹಿಂಗ ಬಾಯಿಗೆ ಬಂದಹಾಂಗ ರೊಕ್ಕಾ ಕೇಳಬ್ಯಾಡ್ರಿ; ಹಂಗ ಮಾಡಿದ್ರ ಎಲ್ಲಾರೂ ನನ್ನಹಂಗ ತಮ್ಮ ಕೆಲಸಾ ತಾವ ಮಾಡಿಕೋತಾರ" ಅಂತಾ ಬುದ್ದಿ ಹೇಳಿ ಕಳಿಸಿದೆ. ಆಗ ಆ ನಾಲ್ವರ ಮುಖಾ ಸಣ್ಣಗಾಗಿತ್ತು.

ಆದರ ನಾನು; ಆಗ ಅವರಿಗೆ ಬುದ್ಧಿಮಾತು ಹೇಳಿದ್ದರೂ; ಮನದಲ್ಲಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೆ. ಏಕೆಂದರೆ ಅವರು ಬಂದು ಹೀಗೆ ಭಾರಿ ರೊಕ್ಕಾ ಕೇಳದಿದ್ರ ನನ್ನಲ್ಲಿನ ಅಹಂ ಜಾಗೃತ ಆಗತಿರಲಿಲ್ಲ. "ನಾನೂ ದಬ್ಬೆ ಹಿಡಿಯೋದಕ್ಕ ಸಾಧ್ಯ" ಅಂತಾ ಯೋಚಿಸೋದಕ್ಕೂ ಆಗತಿರಲಿಲ್ಲ. ಯಾವುದೇ ಕೆಲಸ ಯಾರಿಗೇ ಸೀಮಿತವಾದದ್ದು ಅಲ್ಲ; ಅದಕ್ಕೆ ಜಾತಿ ಹಾಗೂ ಧರ್ಮದ ಚೌಕಟ್ಟು ಕಟ್ಟುವ ಅಗತ್ಯಾನೂ ಇಲ್ಲ. ಮನಸ್ಸು ಮಾಡಿದ್ರ ಯಾರಾದ್ರೂ ಯಾವುದಾದ್ರೂ ಕೆಲಸ ಮಾಡಬಹುದು!