ಕುಹೂ...ಕುಹೂ...ಕಾಗೆ ಮಮ್ಮಿ....!


ಪ್ರಕೃತಿನ್ಯಾಗ ತಾಯ್ತನದ ವಿಚಿತ್ರಗಳು ಸಾಕಷ್ಟು ಅದಾವು. ಅದರೊಳಗ ಭಾರಿ ವಿಶಿಷ್ಠ ಅನ್ನಸೋದು ಮಾತ್ರ ಕಾಗೆ ಹಾಗೂ ಕೋಗಿಲೆಯದ್ದು. ನಾನು ಎರಡು ವರ್ಷದಿಂದಾ ಇಂಥಾದೊಂದು ವಿಚಿತ್ರ ತಾಯಿ ಹಾಗೂ ಪುಟಾಣಿ ಕೋಗಿಲೆ ಸಂಬಂಧಾನಾ ನೋಡ್ತಾ ಬಂದೀನಿ. ಮಳಿಗಾಲ ಶುರುವಾತು ಅಂದರ ಸಾಕು ಕಾಗೆ ಹಾಗೂ ಕೋಗಿಲೆಗೆ ಸಾಕು ತಾಯಿ ಆಗುವ ದೃಶ್ಯ ಕಣ್ಣಮುಂದ ಕಾಣತೀನಿ.

ಬೆಂಗಳೂರಿನ್ಯಾಗ ಇಸ್ರೋ ಲೇಔಟ್ ಅಂತ ಐತಿ. ಅಲ್ಲೆ ನನ್ನ ಪುಟ್ಟ ಬಾಡಿಗಿ ಮನಿ ಇರೋದು. ಅದರ ಹಿತ್ತಲ ಬಾಗಲದಾಗ ನಿಂತಕೊಂಡರ ಒಂದು ಮರಾ ಕಾಣತೈತಿ. ಅದರಾಗ ಕಳದ ಮೂರು ವರ್ಷದಿಂದ ಒಂದು ಘಟನಾ ಕಣ್ಣಾರೆ ಕಂಡೀನಿ. ಈಗ ನಾಲ್ಕನೇ ವರ್ಷ. ಈಗಲೂ ಅಂಥಾದ ಒಂದು ಘಟನಾ ನನ್ನ ಕಣ್ಣಮುಂದನ ನಡ್ಯಾಕ ಹತ್ಯದ.

ಮಳಿಗಾಲ ಇನ್ನೇನು ಶುರುವು ಆಗತೈತಿ ಅನ್ನೋ ಹೊತ್ತಿಗೆ ಆ ಮರದಾಗ ಎರಡು ಕಾಗೆ ಬಂದು ಗೂಡು ಕಟ್ಟಾಕ ಶುರುವು ಮಾಡತಾವ. ಅದರಾಗ ಒಂದು ಗಂಡು-ಒಂದು ಹೆಣ್ಣು ಅಂತ ನಾನು ಅನಕೋತಿನಿ. ಭಾರಿ ಕಸರತ್ತು ಮಾಡಿ ದೂರದೂರದಿಂದಾ ಕಡ್ಡಿ ಹಿಡಕೊಂಡು ಬಂದು ಗೂಡು ಕಟ್ಟತಾವ. ಬೆಚ್ಚಗ ಮಾಡತಾವ. ಆ ಕಾಗಿ ಜೋಡಿ ನಡುವ ಅಲ್ಲೇ ಸರಸ ಸಲ್ಲಾಪಾನೂ ನಡೀತದ. ಆಮ್ಯಾಗ ಅಲ್ಲೆ ತತ್ತಿನೂ ಇಡತದ ಹೆಣ್ಣು ಕಾಗಿ.

ತತ್ತಿ ಇಟ್ಟು ಆಹಾರ ಹುಡಿಕೋದಕ್ಕ ಕಾಗಿ ಹಾರಿ ಹೋಗಿದ್ದ ತಡಾ; ಇತ್ತಾಗ ಒಂದು ಕೋಗಿಲೆ ಬಂದು ಅದ ಗೂಡಿನ್ಯಾಗ ಮೊಟ್ಟಿ ಇಡತದ. ಮಧ್ಯಾಣ ಆಗೋದ ತಡ ಕಾಗಿ ವಾಪಸ್ ಬಂದು ತನ್ನ ಮೊಟ್ಟಿ ಜೊತಿಗೆ ಕೋಗಿಲೆ ಮೊಟ್ಟಿಗೂ ಕಾವ ಕೊಡತದ. ಸ್ವಲ್ಪ ದಿನಾ ಆದಮ್ಯಾಗ ಮರಿನೂ ತತ್ತಿ ಒಡದು ಹೊರಗ ಬಂದಾಗ್ಯದ. ಮಜಾ ಶುರು ಆಗಿದ್ದ ಮರಿ ದೊಡ್ಡವಾಗಕ ಹತ್ತಿದ ಮ್ಯಾಗ.

ಗಂಡು ಮತ್ತ ಹೆಣ್ಣು ಕಾಗಿ ಸುತ್ತಾಗ ಎಲ್ಲಾ ಹಾರ್ಯಾಡಿಕೊಂಡು ಹುಳಾ ಹುಪ್ಪಡಿ, ಅನ್ನದ ಅಗಳು ಏನೇನೆಲ್ಲಾ ತಂದು ತಮ್ಮ ಮರಿಗಳ ಕೊಕ್ಕಿನ್ಯಾಗ ಹಾಕತಾವ. ಆವಾಗ ನೋಡ್ರಿ ಆ ಕಾಗಿಗೋಳು ತಮ್ಮ ಮರಿ ಜೊತಿಗೆ ಕೋಗಿಲೆ ಮರಿಗೂ ಸರಿಯಾಗಿ ಉಣ್ಣಸ್ತಾವ. ಹಿಂಗ ಉಂಡು-ತಿಂದು ದೊಡ್ಡದಾಗೋ ಕೋಗಿಲೆ ಮತ್ತ ಕಾಗಿ ಮರಿಗಳು ಸಣ್ಣಗ ಗೂಡಿನ್ಯಾಗಿಂದ ಹೊರಗ ಬಂದು ಇಣಕತಾವ.

ಸಣ್ಣಗ ಕಾಗಿ ಮತ್ತು ಕೋಗಿಲೆ ಮರಿ ಧ್ವನಿ ತಗ್ಯಾಗ ಹತ್ತತಾವ. ಕಾಗಿ ಮರಿಗಳದ್ದು ಒಂದಿಷ್ಟು ಒರಟ ಧನಿ. ಅದ ಕೋಗಿಲೆ ಮರಿದ್ದು ಚೊಯ್...ಚೊಯ್... ಅನ್ನೊ ಕಂಠ. ಕಾಗಿ ಮರಿಗಳು ಚೊರ್ ಚೊರ್ ಅಂತಾ ಕೂಗಿಕೊಂಡು ತಮ್ಮ ಅಮ್ಮನ್ನ ಬೆನ್ನ ಹತ್ತಿಕೊಂಡು ಗಿಡಿದ ಟೊಂಗಿಮ್ಯಾಗ ಬರತಾವ. ಕೋಗಿಲೆ ಮರಿನೂ ಚೊಯ್ ಚೊಯ್ ಅನಕೊಂಡು ಅಮ್ಮನ್ನ ಬೆನ್ನ ಹತ್ತತದ. ಆದರ ಆಗ ಕಾಗಿ ಅದರಿಂದ ದೂರದೂರ ಸರಿತದ.

ಆದರ ಕೋಗಿಲೆ ಮರಿಗೇನು ಗೊತ್ತಾಗಬೇಕು. ತನ್ನ ಅಮ್ಮಾ ಅದ ಅನಕೊಂಡು ಮತ್ತ ಚೋಯ್ ಚೊಯ್ ಅನಕೊಂಡು ಅದ ಕಾಗಿನ್ನ ಬೆನ್ನ ಹತ್ತತದ. ಎಷ್ಟು ಮಜಾ ನೋಡ್ರಿ ಈ ಪ್ರಕೃತಿ. ಕಾವು ಕೊಟ್ಟು, ಅನ್ನಾ ಬಾಯಿಗಿಟ್ಟು ಬೆಳಿಸಿದ ಕಾಗಿ ತಾಯಿಗೆ ಕೋಗಿಲೆ ಮರಿ ಬ್ಯಾಡ ಆಗತದ. ಹಿಂಗ ಒಂದಿಷ್ಟು ದಿವಸಾ ಕೋಗಿಲೆ ಮರಿ ತನ್ನ ಕಾಗಮ್ಮನನ್ನ "ಮಮ್ಮಿ...ಮಮ್ಮಿ..." ಅಂತ ಬೆನ್ನ ಹತ್ತತದ. ಆದರ ಕಾಗಿ ಏನಂದ್ರೂ ಅದನ್ನ ಹತ್ರಕ್ಕ ಸೇರಿಸಿಕೊಳ್ಳೋದಿಲ್ಲಾ. ಇಷ್ಟೆಲ್ಲಾ ಆಗೋ ಹೊತ್ತಿಗೆ ಕೋಗಿಲೆ ಮರಿ ರೆಕ್ಕಿಗೆ ಬಲ ಬಂದಿರತದ. ಅದು ಹಾರಿಕೊಂಡು ಹೋಗತದ.

ಇಂಥಾದೊಂದು ದೃಶ್ಯಾನ ನಾನು ಕಳದ ಮೂರು ವರ್ಷದಿಂದ ನೋಡಿದ್ದೆ. ಈ ವರ್ಷಾನೂ ಅದ ಮರದಾಗ ಅಂಥಾದೊಂದು ಘಟನಾ ನಡೀತು. ಈಗ ಕೋಗಿಲೆ ಮರಿ ಹಾರಿ ಹೋಗ್ಯದ. ಕಾಗೆಗಳು ತಮ್ಮ ಮರಿಗಳಿಗೆ ಇನ್ನೂ ಹಾರೋದನ್ನ ಕಲಸಾಕ ಹತ್ಯಾವ. ಕಾಗೆಗಳಿಗೆ ಅಮ್ಮಾ ಅನ್ನೋದು ಐತಿ. ಆದರ ಕೋಗಿಲೆ ತನ್ನ ಅಮ್ಮಾ ಯ್ಯಾರಂತ ಹುಡಿಕಿಕೊಂಡು ಹೋಗೈತಿ...!