ಭೀಮಸೇನ್ ಜೋಶಿ ಅವರ ಎರಡು ಓವರ್ ಬ್ಯಾಟಿಂಗ್


ನಮ್ಮೂರಿನ ಮಹಾ ಗಾಯಕಾ ಭೀಮಸೇನ್ ಜೋಶಿ ಅವರು ನಮ್ಮನ್ನ ಬಿಟ್ಟು ಹೋದ್ರು. ಅದಕ್ಕ ಭಾಳ ಧುಕ್ಕಾ ಆತು. ನಮ್ಮೂರಿನ ಇಬ್ಬರು ಮಹಾ ಗಾಯಕರು ಒಬ್ಬರಾದಮ್ಯಾಗ ಒಬ್ರು ಹ್ವಾದ್ರು. ಅದಕ್ಕ ಭಾರಿ ಧುಕ್ಕಾ ಆಗ್ಯದ. ಪಂಡಿತ್ ಪುಟ್ಟರಾಜ ಗವಾಯಿಗೋಳು ಹ್ವಾದ್ರು; ಆಮ್ಯಾಗ ಪಂಡಿತ್ ಭೀಮಸೇನ್ ಜೋಶಿಯವ್ರು ಹ್ವಾದ್ರು. ಇಬ್ರೂ ದೊಡ್ಡ
ಗಾಯಕ್ರು. ದೇಶಾ ಮಾತ್ರ ಅಲ್ಲ ವಿದೇಶಾನೂ ಮೆಚ್ಚಿಕೊಂಡಿದ್ದ ಗಾಯಕ್ರು ಅವ್ರು. ಅಂಥಾ ಗಾಯಕ್ರು ನಮ್ಮೂರಿನವ್ರು ಅಂತ ಹೇಳಿಕೊಳ್ಳಾಕ ಹೆಮ್ಮೆ ಆಗ್ತತ.

ಗವಾಯಿಗಳನ್ನ ಮಠದಾಗ ಪಾದ ಮುಟ್ಟಿ ನಮಸ್ಕಾರಾ ಮಾಡಿ ಆಶಿರ್ವಾದಾ ಪಡೀತಿದ್ವಿ. ಅವ್ರಿಗೆ ನಮ್ಮ ಊರಿನ್ಯಾಗ ದೇವ್ರ ಸ್ಥಾನ. ಭೀಮಸೇನ್ ಜೋಶಿ ಅವರೂ ಹಾಂಗ ಇದ್ರು. ದೇವರಹಾಂಗ ಇದ್ದ ಮನುಷಾರು ಅವರು. ಯಾರಿಗೂ ಕೆಟ್ಟದ್ದು ಮಾತಡಿದ್ದು ನಾವಂತೂ ಊರಾಗಿದ್ದವ್ರು ಕೇಳಿಲ್ಲಾ. ಹಾಡಿಕೊಂಡು, ಹಾಡು ಕೇಳಿಸಿ ಸಂತೋಷಾ ಪಡತಿದ್ರು.

ನಾನು ಸಣ್ಣವಾಗಿದ್ದಾಗ ಅವರನ್ನ ಮೂರು-ನಾಕ್ ಬಾರಿ ನೋಡಿದ್ದೆ. ಹತ್ತಿರದಾಗಿಂದ ಮಾತಾಡಿಸಿದ್ದೆ, ಮಜಾ ಅಂದ್ರ ಒಮ್ಮೆ ಅವರ ಜೊತಿಗೆ ಕ್ರಿಕೆಟ್ ಆಟಾನೂ ನಮ್ಮ ಗೆಳೆಯಾರ ಆಡಿದ್ದೆ. ಆಮ್ಯಾಗ ನೋಡಿದ್ದು ಒಮ್ಮೆ ಪುಣೆನ್ಯಾಗ ನಮ್ಮ ಗೆಳಿಯಾ ಸುನಿಲ್ ಮರಾಠೆ ಹೋಟೆಲಿನ್ಯಾಗ. ಆವಾಗ ಅವರ ಜೊತಿಗೆ ಮಾತಾಡಿ, ಗದಗಿನ ನಮ್ಮ ಓಣ್ಯಾಗ ಒಮ್ಮೆ ಕ್ರಿಕೆಟ್ ಆಡಿದ್ದನ್ನ ನಾನು ಮತ್ತ ಸುನಿಲ್ ಮರಾಠೆ ನೆನಪಿಸಿದ್ವಿ. ಆವಾಗ ಅವ್ರು "ಭಾಳ ದೊಡ್ಡವ್ರ ಆಗಿರಲ್ಲಾ" ಅಂತ ಹೇಳಿದ್ದು ಇನ್ನು ನನ್ನ ನೆನಪಿನ್ಯಾಗ ಐತಿ.

ಸುನಿಲ್ ಮರಾಠೆ ಗದಗಿನಿಂದ ಹ್ವಾದಮ್ಯಾಗ, ಪುಣೆನ್ಯಾಗ ಹೋಟೆಲ್ ಮಾಡಿಕೊಂಡು ದೊಡ್ಡ ಹೋಟೆಲ್ ಉದ್ಯಮಿ ಆದಾವ. ಭಿಮಸೇನ್ ಜೋಶಿ ಅವರು ಆಗಾಗ ಅವನ ಹೋಟೆಲಿಗೆ ಬರತಿದ್ರು. ನಾನೂ ಒಮ್ಮೆ ಹಿಂಗ ಹೋಗಿದ್ದಾಗ ಅಲ್ಲೆ ಸಿಕ್ಕಿದ್ರು. ಗರುಡರ ಮನಿ ಹುಡುಗಾ ಅಂತ ಹೇಳಿ ನೆನಪು ಮಾಡಿಕೊಟ್ಟಾಗ "ವಲ್ಲಭನ ಮಗಾ ಏನು...?" ಅಂತ ಕೇಳಿದ್ರು. ನಾನು "ಹೌದ್ರಿ; ಅವತ್ತ ನಾವು ಸಣ್ಣವ್ರು ಇದ್ದಾಗ ನಿಮ್ಮನಿ ಹಿಂದಿನ ಓಣಿನ್ಯಾಗ ಕ್ರಿಕೆಟ್ ಆಡಿತಿದ್ವಿ. ಅವತ್ತೊಮ್ಮೆ ನೀವು ನಮ್ಮ ಜೊತಿಗೆ ಆಟಾ ಆಡಿದ್ರ್ಯಲ್ಲಾ...!" ಅಂತ ಹೇಳಿ ನೆನಪು ಮಾಡಿಕೊಟ್ಟಿದ್ದೆ. ಆವಾಗ ಅವರು ಸಣ್ಣ ಮಕ್ಕಳಹಾಂಗ ನಕ್ಕಿದ್ದು ಇನ್ನೂ ಕಣ್ಣಮುಂದ ಕಟ್ಟಿಧಾಂಗ ಅದ.

ಗದಗದಾಗ ನಮ್ಮ ಮನಿ ಮತ್ತ ಗುರಾಚಾರ್ ಜೋಶಿ (ಭೀಮಸೇನ್ ಜೋಶಿ ತಂದೆ) ಅವರ ಕಟ್ಟಿದ ಮನಿ ಬೆನ್ನಬೆನ್ನಿಗೆ ಅವ. ಈಗೂ ಏನೂ ಬದಲಾಗಿಲ್ಲ. ಗದಗಿಗೆ ಬಂದಾಗ ಅವರು ತಮ್ಮ ಮಲ್ತಾಯಿನ್ನ ನೋಡಾಕ ಅಲ್ಲಿಗೆ ಬರತಿದ್ರು. ನಮಗ ಜೋಶಿ ಅವರ ಮನ್ಯಾನ ಎಲ್ಲಾರ ಜೊತಿಗೂ ಸಲಿಗಿ ಇತ್ತು. ಭೀಮಸೇನ ಜೋಶಿ ಅವರ ತಮ್ಮಂದ್ರಾದ ಸುಶಿಲೇಂದ್ರ ಜೋಶಿ, ವಾದಿರಾಜ ಜೋಶಿ, ಜಯತೀರ್ಥ ಜೋಶಿ ಎಲ್ಲಾರ ಜೊತಿಗೆ ಸಂಪರ್ಕ ಇತ್ತು. ಜಯತೀರ್ಥ ಜೋಶಿ ಮತ್ತ ಸುಶಿಲೇಂದ್ರ ಜೋಶಿ ಅವ್ರು ಅಭಿನಯರಂಗದಾಗ ನಾಟಕ ಮಾಡಿಸಿದ್ರ ನಂದೂ ಒಂದು ಪಾತ್ರ ಅದರಾಗ ಇದ್ದ ಇರತಿತ್ತು. ಒಟ್ಟಿನ್ಯಾಗ ಅದು ಒಂದ ರೀತಿನ್ಯಾಗ ಕಲೆಯ ನಂಟು.

ಭೀಮಸೇನ ಜೋಶಿ ಅವರ ಗಾಯನ ಕಾರ್ಯಕ್ರಮಾ ಆಗಾಗ ನಮ್ಮೂರಿನ್ಯಾಗು ನಡೀತಿತ್ತು. ಸುಮಾರು ಹದಿನೆಂಟು ವರ್ಷದ ಹಿಂದ ಇರಬೇಕು; ನಮ್ಮ ಶಾಲಿ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಾಗನ ಜೋಶಿ ಅವರ ಗಾಯನ ಸಭಾ ಇತ್ತು. ಒಂದ ದಿನಾ ಮೊದಲ ಅವರು ಅಲ್ಲಿಗೆ ಬಂದಿದ್ರು. ಗದಗನ್ಯಾಗ ಅವರಿಗೆ ಮತ್ತ ಬಂದ ವಾದ್ಯ ಸಾಂಗತ್ಯದವರಿಗೆ ನಮ್ಮೂರಿನ್ಯಾಗ ಮಾತ್ರ ದೊಡ್ಡದು ಅನ್ನೋಹಂಥಾ ಸಣ್ಣದೊಂದು ಹೋಟೆಲಿನ್ಯಾಗ ಉಳಕೊಳ್ಳೊ ವ್ಯವಸ್ಥಾ ಮಾಡಿದ್ರು.

ಜೋಶಿ ಅವರು (ನಮ್ಮ ಗದಗಿನ್ಯಾಗ ಎಲ್ಲಾರೂ ಭೀಮಸೇನ ಜೋಶಿ ಅವರನ್ನ "ಜೋಶಿಯವರು" ಅಂತಾನ ಕರಿಯೋದು. ಹೆಸರು ಹಿಡದು ಕರಿಯೋದಿಲ್ಲಾ; ಅಡ್ರೆಸ್ ಹಿಡದ ಕರಿಯೋದು) ಬೆಳಿಗ್ಗೆನ ಅವರ ತಂದಿ ಕಟ್ಟಿರೊ ಮನಿಗೆ ಬಂದಿದ್ರು. ಆ ಹೊತ್ತಿನ್ಯಾಗ ನಮ್ಮ ಓಣಿ ಒಳಗ ನಾವೆಲ್ಲಾರೂ ಗೆಳಿಯಾರು ಸೇರಿಕೊಂಡು ಕ್ರಿಕೆಟ್ ಆಡತಿದ್ವಿ. ಸಣ್ಣವ್ರು ಅಷ್ಟ ಅಲ್ಲ ನಮ್ಮ ಕ್ರಿಕೆಟ್-ಸಿನಿಮಾ ಗೆಳಿಯಾರು ಅನಿಸಿಕೊಂಡೋರೊಳಗ ದೊಡ್ಡೋರು ಇದ್ರು. ನಾವೆಲ್ಲಾ ಚಣ್ಣಾ ಹಾಕ್ಕೊತಿದ್ವಿ. ಅವರು ಪೈಜಾಮಾ, ಲುಂಗಿ, ಪ್ಯಾಂಟು ಹಾಕ್ಕೊತಿದ್ರು.

ಅವತ್ತ ಕ್ರಿಕೆಟ್ ಆಡತಿದ್ದೋರಾಗ ದೊಡ್ಡೋರು ಅಂದ್ರ ಮಮ್ಮಿಗಟ್ಟಿ ಸರ್ (ಇವರು ಕೊನಿವರಿಗೂ ಭ್ರಹ್ಮಚಾರಿ ಆಗಿನ ಉಳಿದಿದ್ರು. ಆವಾಗ ಅವರಿಗ ಐವತ್ತ ವರ್ಷಾ ಇದ್ದಿರಭೌದು.), ಐಯ್ಯನಗೌಡ್ರ ಮನಿ ಹಿರಿ ಮಗಾ ಶಿವು ಮತ್ತ ಹಾದಿಮನಿ ಅವರ ಮನ್ಯಾಗಿನ ಶೇಕಣ್ಣಾ. ಸಣ್ಣವರು ಅಂದ್ರ ನಾನು, ಸುನಿಲ್ ಮತ್ತ ದೀಪಕ್ ಮರಾಠೆ, ಸುಧೀರ್ ಪೂಜಾರ, ಅಯ್ಯನಗೌಡ್ರ ಮನಿ ಹುಡುಗರಾದ ಮುನ್ನಾ ಮತ್ತ ಗಂಗೂಲಿ (ಇದು ಸೌರವ್ ಗಂಗೂಲಿ ಅಲ್ಲ; ನಮ್ಮ ಗೆಳಿಯಾನ ಹೆಸರ ಗಂಗೂಲಿ) ಇದ್ವಿ.

ಅಯ್ಯನಗೌಡ್ರ ಮನಿ ಕಾಂಪೌಂಡ್ ಗ್ವಾಡಿಮ್ಯಾಗ ಇದ್ದಿಲು ತಗೊಂಡು ಸ್ಟಂಪ್ ಬರದು, ಸುಶಿಲೇಂದ್ರ ಜೋಶಿ ಸ್ಪೋರ್ಸ್ಟ್ ಅಂಗಡಿನ್ಯಾಗಿಂದ ತಂಡ ಬ್ಯಾಟು ಮತ್ತ ಕೆಂಪ್ "ಎಂಆರ್ಎಫ್" ಬಾಲು ತಗೊಂಡು ಕ್ರಿಕೆಟ್ ಆಡಾಕ ಹತ್ತಿದ್ವಿ. ಅದ ಹೊತ್ತಿನ್ಯಾಗ ಭೀಮಸೇನ ಜೋಶಿ ಅವರು ಓಣಿ ಸುತ್ತಿ ನೋಡಿಕೊಂಡು ಹೋಗಣಂತ ಆಕಡಿಗೆ ಬಂದಿದ್ರು. ಜೋಶಿ ಅವರು ಬಂದ್ರು ಅಂತ ಆಟ ನಿಲ್ಲಿಸಿ, ಎಲ್ಲಾರೂ ಅವರಿಗೆ ನಮಸ್ಕಾರ ಮಾಡಿದ್ವಿ. ಮಮ್ಮಿಗಟ್ಟಿ ಸರ್ ಇಂಗ್ಲಿಷಿನ್ಯಾಗೂ ಒಂದಿಷ್ಟು ಮಾತಾಡಿದ್ರು. ನಾವೆಲ್ಲಾ ಚೊಣ್ಣಾ ಹಾಕ್ಕೊಂಡ ಹುಡುಗ್ರು ಬಾಯಿ ಬಿಟ್ಟಕೊಂಡು ನೋಡತಿದ್ವಿ.

ಮಾತ ಮುಗದಮ್ಯಾಗ ಜೋಶಿ ಅವರೂ ನಾನೂ ಆಡತೀನಿ ಅಂತ ಹೇಳಿದ್ರು. ಅವರ ಕೈಗೆ ಬ್ಯಾಟ್ ಕೊಟ್ವಿ. ನಾವು ಯಾವತ್ತು ಹಂಗ ಯಾರಿಗೂ ಬ್ಯಾಟ್ ಬಿಟ್ಟು ಕೊಟ್ಟವ್ರಲ್ಲಾ. ಜೋಶಿ ಅವರಿಗಂತ ಬ್ಯಾಟ್ ಬಿಟ್ಟು ಕೊಟ್ಟಿದ್ದು. ದೊಗಳೆ ಪೈಜಾಮಾ, ಮ್ಯಾಲೆ ಬಿಳಿ ನೆಹರು ಶರ್ಟು ಹಾಕ್ಕೊಂಡಿದ್ದ ಜೋಶಿ ಅವರು ತೋಲು ಏರಿಸಿಕೊಂಡು ಬ್ಯಾಟಿಂಗ್ ಮಾಡಾಕ ನಿಂತ್ರು. ಮುನ್ನಾ ಬೌಲಿಂಗ್ ಮಾಡತಿದ್ದಾ. ರಬ್ಬರ್ ಬಾಲು ಪುಸಕ್ಕನ ಅವರ ಪೈಜಾಮಾಕ್ಕ ಬಡಿತಿತ್ತು. ಒಂದೆರಡ ಸಲೆ ಬ್ಯಾಟಿಗೂ ಬಡದ ಬಾಲು ಟಾರ್ ರೋಡಿನ್ಯಾಗ ಕುಣಕೊಂಡು ಓಡಿತ್ತು.

ಮುನ್ನಾ ಓವರ್ ಮುಗಿಸಿದ ಮ್ಯಾಗ ಸುನಿಲ್ ಮರಾಠೆ ಬೌಲಿಂಗ್ ಮಾಡಿದಾ. ಆವಾಗ ಸರಿಯಾಗಿ ಬಾಲಿನ ತಲಿಮ್ಯಾಗ ಜೋಶಿ ಅವರು ಬ್ಯಾಟ್ ಹೊಡದ್ರು. ಮಮ್ಮಿಗಟ್ಟಿ ಸರು ಹೋಗಿ ಬಾಲ್ ಹಿಡದ್ರು. ಹಿಂಗ ನಾಲ್ಕು ಬಾಲ್ ಆದಮ್ಯಾಗ; ಐದನೇ ಬಾಲ್ ಹಾಕಿದಾ ಮರಾಠೆ. ಆವಾಗ ಜೋಶಿ ಅವರು ಬ್ಯಾಟ್ ಮ್ಯಾಗ ಎತ್ತಿ ಹೊಡದ್ರು; ಬಾಲು ಎದುರಿಗೆ ಇರೋ ಪೂಜಾರ ಕಾಂಪೌಂಡಿನ್ಯಾಗ ಹೋತು. ಆವಾಗ ನಾವೆಲ್ಲಾರೂ "ಔಟು ಅಂತ ಕೂಗಿದ್ವಿ".

ಅದಕ್ಕ ಜೋಶಿ ಅವ್ರು ಹ್ಯಾಂಗ್ರೋ ಔಟು? ಅಂದ್ರು. ಅದಕ್ಕೆ ನಾವು ಹೇಳಿದ್ವಿ "ಬಾಲು ಕಾಂಪೌಂಡಿನ್ಯಾಗ ಹೋದ್ರ ಔಟ್...!" ಅಂತ. ಅದಕ್ಕ ನಕ್ಕಿದ್ದ ಜೋಶಿ ಅವರು ನಮ್ಮ ಕೈಗೆ ಬ್ಯಾಟು ಕೊಟ್ಟು, ಸಾಕು ಹೊರಡತೀನಿ; ಯಾರೋ ಒಬ್ರು ನಾಷ್ಟಾಕ್ಕ ಕರದಾರ, ಸ್ನಾನಾ ಮಾಡಿ ಹೋಗಬೇಕು ಅಂತ ಹೇಳಿ ಹೊರಟ್ರು. ಅವರ ಹ್ವಾದಮ್ಯಾಗ ನಮ್ಮ ಆಟ ಮತ್ತ ಸಾಗಿತ್ತು.

ಸಂಜಿಗೆ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಾಗ ಜೋಶಿ ಅವರು ಭಾಳ ಛಲೋ ಆಡಿದ್ರು. "ಭಾಗ್ಯದಾ ಲಕ್ಷ್ಮಿ ಬಾರಮ್ಮಾ...." ಹಾಡಾಕ ಬೇಕು ಅಂತ ಜನಾ ಕೇಳಿಕೊಂಡು ಹಾಡಿಸಿದ್ರು. ಆದ್ರ ನನಗ ಅವತ್ತ ಭಾರಿ ನೆನಪಿನ್ಯಾಗ ಉಳದಿದ್ದು ಅಂದ್ರ "ರಘುವರ ತುಮ್ ಹೋ ಮೇರಿ ಲಾಜ್..." ಅನ್ನೋ ಹಾಡು. ಈಗೂ ಯ್ಯಾವಾಗರ ಆ ಹಾಡು ಬಾಯಾಗ ಹಂಗ ಬಂದು ಹೊಕ್ಕದ. ಆ ಹಾಡಿನ ಸಾಲನ್ನ ಗುನಗತಿರತೀನಿ. ಮೊನ್ನೆ ಜೋಶಿ ಅವರು ಹೋದ್ರು ಅಂತ ಸುದ್ದಿ ತಿಳದಾಗೂ ಅದ ಹಾಡು ನೆನಪಿಗೆ ಬಂತು!