ಅಣ್ಣಾ ಹಜಾರೆ ಬೆಂಬಲಕ್ಕ ನಿಲ್ರಿ...!


ಅಣ್ಣಾ ಹಜಾರೆ ಭ್ರಷ್ಟರದ ವಿರುದ್ಧಾ ಶಾಂತಿ ಅಸ್ತ್ರದ ಹೋರಾಟ ನಡಸಿರೋ ಮಹಾ "ಶಾಂತಿ ವೀರ". ಅವರೀಗೆ ನನ್ನ ಕೋಟಿ ಕೋಟಿ ನಮನಾ. ಮಹಾತ್ಮಾ ಗಾಂಧಿನ್ನ ನಾವೆಲ್ಲಾ ಫೋಟೋನ್ಯಾಗ ನೋಡಿ, ಓದಿ ತಿಳಕೊಂಡೀವಿ. ಆದರ ನಮ್ಮ ಎದುರಿಗೇನ ಇರೋ ಗಾಂಧಿಯಂಥಾ ಮನಷಾ ಅಣ್ಣಾ ಹಜಾರೆ. ನನಗ ಅವರ ಬಗ್ಗೆ ಭಾರಿ ಗೌರವಾ, ಭಕ್ತಿ, ಪ್ರೀತಿ. ಅವರನ್ನ ಒಮ್ಮೆ ನೋಡಿದ್ರ ಸಾಕು ಅದೇನೋ ಒಂಥರಾ ಏನೋ ಶಕ್ತಿ ಪಾಸ್ ಆದಹಾಂಗ ಆಗತೈತಿ.

ನಾನು ಅಣ್ಣಾ ಹಜಾರೆ ಅವರನ್ನ ನೋಡಿದ್ದು ಹತ್ತು ವರ್ಷದ ಹಿಂದ ಇರಬೇಕು ಅಂತಾ ಅನಸತದ. ಮಜಾ ಅಂದ್ರ ನನಗ ಅವರು ತಂದಿದ್ದ ಟ್ಯಾಕ್ಸಿನ್ಯಾಗ ಅವರು ಜೀವಕಳೆ ನೀಡಿದ ಮಹಾರಾಷ್ಟ್ರದ ಹಳ್ಳಿಗಳಿಗೂ ಹೋಗೋ ಅವಕಾಶಾ ಸಿಕ್ಕಿತ್ತು. ಅದು ನನ್ನ ಭಾಗ್ಯಾನ ಅಂದಕೋತೀನಿ. ಅವರ ಜೊತಿಗೀನ ಏಳುವರಿ ತಾಸಿನ ಪ್ರಯಾಣದಾಗ ನಾನು ಸಾಕಷ್ಟು ವಿಷಯ್ಯಾನ ತಿಳಕೊಂಡಿದ್ದೆ. ಅದು ಒಂಥರಾ ದೊಡ್ಡ ಪುಸ್ತಕಾನ ಓದಿದ ಅನುಭವಾ.

ಹತ್ತು ವರ್ಷದ ಹಿಂದ ನಾನು ಕರ್ನಾಟಕ ವಿಶ್ವವಿದ್ಯಾಲಯದಾಗ ಪತ್ರಿಕೋದ್ಯಮದ ಮಾಸ್ಟರ್ ಡಿಗ್ರಿ ಓದತಿದ್ದೆ. ಆವಾಗ ನನ್ನ ಅಣ್ಣಾ ಪ್ರಕಾಶ ಅವರು "ಬಾಲಬಳಗಾ" ಕಟ್ಟಿ ಧಾರವಾಡದಾಗ ಬಹಳಷ್ಟು ಕಾರ್ಯಕ್ರಮಗಳನ್ನಾ ಮಾಡತಿದ್ದರು. ಮಾಳಮಡ್ಡಿಯ ಮಹಿಷಿ ರಸ್ತೇನ್ಯಾಗ ಇರೋ ದೇಶಪಾಂಡೆ ಕಾಂಪೌಂಡಿನ್ಯಾಗ ದೊಡ್ಡ ದೊಡ್ಡ ಮರದ ಕೆಳಗ ಸಾಕಷ್ಟು ದೊಡ್ಡ ಜಾಗಾ ಇತ್ತು. ಅಲ್ಲೇ ಪ್ರಸೂತಿ ವೈದ್ಯರಾದ ಡಾ.ಸಂಜೀವ್ ಕುಲಕರ್ಣಿ ಅವರ ಮನೀನೂ ಇತ್ತು. ಅವರೂ ಬಹಳಷ್ಟು ಚಟುವಟಿಕಿಯಿಂದಾ ಇರೋ ಮನುಷಾ.

ಡಾ.ಸಂಜೀವ್ ಕುಲಕರ್ಣಿ ಅವರು ಬಾಲಬಳಗಕ್ಕ ಬೆನ್ನೆಲುಬು ಇದ್ದಹಾಂಗ ಇದ್ರು. ಅವರು ಒಂದು ದಿನಾ ಅದ ದೇಶಪಾಂಡೆ ಕಾಂಪೌಂಡಿನ್ಯಾಗ ಒಂದು ಕಾರ್ಯಕ್ರಮಾ ಮಾಡಿ ಅಣ್ಣಾ ಹಜಾರೆ ಅವರನ್ನ ಕರಸೋಣು ಅಂದ್ರು. ಅದಕ್ಕ ನನ್ನ ಅಣ್ಣ ಪ್ರಕಾಶ, ಅತ್ತಿಗಿ ರಜನಿ, ಸಂಗೀತ ಕಲಾವಿದಾ ಗಜಾನನ ಹೆಗಡೆ ಮತ್ತ ನಾನು ಎಲ್ಲಾರೂ ಆತು ಕರಿಸೇ ಬಿಡೋಣ ಅಂದ್ವಿ. ಭಾರಿ ತಯಾರಿ ಮಾಡಿಕೊಂಡು ಮರದ ಕೆಳಗೊಂದು ಮಣ್ಣಿನ ಪೀಠಾ ಮಾಡಿ, ಅಂಗಳಾ ಎಲ್ಲಾ ಸಗಣಿ ಹಾಕಿ ಸಾರಿಸಿ, ರಂಗೋಲಿ ಬಿಟ್ಟು ಸಿಂಗಾರಾ ಮಾಡಿ ಅಣ್ಣಾ ಹಜಾರೆ ಸ್ವಾಗತ ಮಾಡಿ ಕಾರ್ಯಕ್ರಮಾ ಮಾಡಿದ್ದು ಆತು. ಅದೇನು ಜನಾ ಅಂತೀನಿ; ಕಾಂಪೌಂಡ್ ಕುಂಬಿ, ಮರಾ, ರಸ್ತೆ ಎಲ್ಲಾ ಕಡಿಗೂ ನಿಂತು ಜನಾ ಅವರ ಭಾಷಣಾ ಕೇಳಿದ್ರು.

ಅಣ್ಣಾ ಹಜಾರೆ ಅವರು ಅವತ್ತ ಮಾಡಿದ ಭಾಷಣಾ ನನ್ನ ತಲೀನ್ಯಾಗ ಇನ್ನೂ ಗಟ್ಟಿ ಆಗ್ಯದ. ಒಂದ ಮಾತಂತೂ ಭಾಳ ಸರಿ ಆಗಿ ಹೇಳಿದ್ರು. ಭ್ರಷ್ಟಾಚಾರ ದೂರ ಮಾಡಾಕ ಬೇಕಾಗಿರೋದು ಜನರು; ಜನರು ಮನಸು ಮಾಡಿದ್ರ ಎಲ್ಲಾ ಭ್ರಷ್ಟರ ಜುಟ್ಟು ಹಿಡಿದು, ಕಸಬರಗಿ ತಗೊಂಡು ಝಾಡಿಸಬಹುದು ಅಂತ ಹೇಳಿದ್ದು ಎಷ್ಟ ಖರೇ ಅದ. ಜನರು ಮನಸು ಮಾಡಬೇಕು ಅಷ್ಟ. ಭ್ರಷ್ಟ ವ್ಯವಸ್ಥೆನಾ ಬದಲು ಮಾಡೋ ತಾಕತ್ತು ಜನರಿಗೆ ಐತಿ ಅನ್ನೋದನ್ನ ಅಣ್ಣಾ ಹಜಾರೆ ತಮ್ಮ ಹೋರಾಟದಿಂದನ ತೋರಿಸಿಕೊಟ್ಟಾರ.

ಅದ ಅಣ್ಣಾ ಹಜಾರೆ ಇನ್ನೊಂದು ದೊಡ್ಡ ಹೋರಾಟಕ್ಕ ನಿಂತಾರ ಈಗ. ಜನ್ ಲೋಕಪಾಲ್ ಮಸೂದೆಯಂಥಾ ಸಮಗ್ರ ಕಾನೂನು ಜಾರಿ ಮಾಡಬೇಕು ಅಂತಾ ಒತ್ತಾಯ ಮಾಡಿ ಉಪವಾಸ ಕುಂತಾರ. ಅವರ ಈ ಹೋರಾಟ ಒಂದು ಮುನ್ನುಡಿ ಮಾತ್ರ. ಅದಕ್ಕ ಜನರೆಲ್ಲಾ ಬೆಂಬಲಾ ಕೊಟ್ಟು ಈ ಹೋರಾಟಕ್ಕ ದೊಡ್ಡ ಶಕ್ತಿ ನೀಡಬೇಕು. ಅದು ನಮ್ಮೆಲ್ಲಾರ ಕರ್ತವ್ಯಾ ಆಗ್ಯದ. ಅಣ್ಣಾ ಹಜಾರೆ ಬದುಕ ನಮಗೆಲ್ಲಾರಿಗೂ ಆದರ್ಶ ಆಗಬೇಕು.

ಅಣ್ಣಾ ಹಜಾರೆ ಬರಿ ಭಷ್ಟಾಚಾರದ ವಿರುದ್ಧಾ ಹೋರಾಡಿಕೊಂಡು ಪ್ರಚಾರ ಪಡೀತಾರ ಅಂತ ಯಾರೂ ತಿಳಕೋಬಾರದು. ಅವರು ತಮ್ಮ ಹೋರಾಟಕ್ಕಾಗಿ ಜೈಲಿಗೆ ಹೋಗೊ ಕಷ್ಟಾ ಕೂಡ ಸಹಿಸೋಹಂತಾ ಮನುಷಾ. ಅವರ ತಾಕತ್ತು ಹಾಗೂ ಜನರನ್ನ ಪ್ರೇರೇಪಿಸೊ ಶಕ್ತಿ ಏನು ಅಂತಾ ನೋಡಬೇಕಿದ್ರ ಪುಣೆ ಸಮೀಪದ ಸಾಸ್ವಾಡಕ್ಕೆ ಒಮ್ಮೆ ಹೋಗಿ ನೋಡ್ರಿ. ಅಣ್ಣಾ ಹಜಾರೆ ಮಾಡಿರೋ ಕೆಲಸಾ ಎಂಥಾದ್ದು ಅಂತ ಗೊತ್ತಾಗತದ.

ಯಾವುದ ರಾಜಕೀಯ ಪಕ್ಷ ಮತ್ತು ಸ್ಥಾನದ ಆಸೆ ಪಡದ ಜನರ ಒಳಿತಿಗಾಗಿ ಹೋರಾಟ ನಡಿಸಿರೋ ಈ ಮಾಜಿ ಯೋಧ; ಖಂಡಿತ ಮಾಜಿ ಯೋಧ ಅಲ್ಲ. ದೇಶದ ಒಳಗಿನ ಭ್ರಷ್ಟರು ಅನ್ನೋ ಮಹಾ ವೈರಿಗಳ ವಿರುದ್ಧಾ ಹೋರಾಟ ನಡಸಿರೋ ಸೈನಿಕಾ. ಅವರ ಬೆಂಬಲಕ್ಕ ನಾವೆಲ್ಲಾ ನಿಲ್ಲಬೇಕು. ಆಗ ದೇಶದಾಗ ಕೋಟಿ ಕೋಟಿ ನುಂಗೊ ಬಿಳಿ ಆನಿಗಳೆಲ್ಲಾನೂ ಸೊರಗಿ ಸಣ್ಣಗಾಗತಾವ! ಬನ್ನಿ ನಾವೆಲ್ಲಾ ಅಣ್ಣಾ ಹಜಾರೆಗ ಬೆಂಬಲಾ ಕೊಡೋಣ. ಹಜಾರೆ "ಅಣ್ಣ"ನ ಜೊತಿಗೆ ನಾವೆಲ್ಲಾ "ತಮ್ಮ"-"ತಂಗಿ"ಯರು ಧ್ವನಿ ಸೇರಿಸೋಣ.

ಜನ್ ಲೋಕಪಾಲ್ ಮಸೂದೆ ಆಂಗ್ಲ ಪ್ರತಿ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
http://www.annahazare.org/pdf/Jan%20lokpal%20bill%20by%20Expert%20%28Eng%29.pdf