ಆ ಫುಟ್ಬಾಲ್ ಕನಸುಗಾರ...!


ಸಾಗರದಾಕಡೀಗ ವಿಶ್ವಕಪ್ ಫುಟ್ಬಾಲ್ ಆಟಾ ನಡ್ಯಾಕ ಹತ್ತೈತಿ. ಘನಾ ಸಂಭ್ರಮಾ ಅಲ್ಲಿ. ಎಲ್ಲಾರು ಮುಖಕ್ಕ ಬಣ್ಣಾ ಬಳಕೊಂಡು ಹಾಡಿ ಕುಣಿಯೋದನ್ನ ನೋಡಬೇಕು. ಅದೇನು ಭಾರಿ ಹಬ್ಬಾ. ಆಡೋರು ಭಾರಿ ತಾಕತ್ತಿನೋರು. ಅವರಾಟ ಟೀವಿನ್ಯಾಗ ನೋಡಿದಾಗೆಲ್ಲಾ ನನ್ನ ಕಣ್ಣಮುಂದ ಆ ಮುಂಬೈ ಹುಡಗನ ನೆನಪ ಬರತೈತಿ.

ಆ ಹುಡಗಾನೂ ಹಿಂಗ ದೊಡ್ಡದೊಡ್ಡ ಟೂರ್ನಿನ್ಯಾಗ ಫುಟ್ಬಾಲ್ ಆಡಬೇಕು ಅಂತಾ ಕನಸು ಕಂಡಿದ್ದಾ. ಆದರ ಅವಗ ಹದಿನೈದು ವರ್ಷಾ ವಯಸ್ಸಾಗೋಹೊತ್ತಿಗೆ ಫುಟ್ಬಾಲ್ ಅನ್ನೋ ಕನಸು ಕರಿಗಿ ಹೋತು. ಅಷ್ಟ ಅಲ್ಲಾ ಅವನೂ ಈ ಲೋಕಾನಾ ಬಿಟ್ಟ ಹ್ವಾದಾ.

ಹುಡಗನ ಹೆಸರು ಡಿಯಾಗೊ (ನಿಜ ಹೆಸರು ಬೇರೆ) ಅಂತಾನ ಇಟ್ಟಕೊಳ್ಳರಿ. ಆ ಹುಡುಗಾ ಹುಟ್ಟಿ ಬೆಳದಿದ್ದೆಲ್ಲಾ ಮುಂಬೈನ್ಯಾಗ. ಅದೂ ಒಂದು ಸ್ಲಮ್ಮಿನ್ಯಾಗ. ಆದರ ಅವರಪ್ಪಾ ದಕ್ಷಿಣ ಕನ್ನಡದಾವಾ. ಕೆಲಸಾ ಹುಡಕಿಕೊಂಡ್ ಮುಂಬೈಗೆ ಹ್ವಾದಾವಾ. ಅಲ್ಲೇ ಸ್ಲಮ್ಮಿನ್ಯಾಗ ಇದ್ದಾವಾ.

ಅಲ್ಲೇ ಭಾಳಾ ವರ್ಷದಿಂದಾ ಜೀವನಾ ಮಾಡಿದ್ರು. ನಮ್ಮ ಡಿಯಾಗೊ ಕೂಡಾ ಅಲ್ಲೇ ಇದ್ದಾವಾ. ದಾರಾವಿ ಅಂಚಿನ್ಯಾಗಿರೊ ಒಂದು ಸ್ಲಮ್ ಅದು. ಡಿಯಾಗೊ ಶ್ಯಾಲಿನ್ಯಾಗೂ ಫಸ್ಟ್ ಕ್ಲಾಸ್ ಇದ್ದಾ. ಆದರ ಅವಗ ಫುಟ್ಬಾಲ್ ಅಂದ್ರ ಭಾರಿ ಹುಚ್ಚು. ಸ್ಲಮ್ ಗುಡಸಲದಾಗಿನ ಗ್ವಾಡಿ ಮ್ಯಾಗೆಲ್ಲಾ ಅವಾ ಫುಟ್ಬಾಲ್ ಆಡೋರ್ ದೊಡ್ಡದೊಡ್ಡ ಚಿತ್ರಾ ಅಂಟಿಸಿಕೊಂಡಿದ್ದಾ. ಮನ್ಯಾಗ ನಾಲ್ಕಾರು ಫುಟ್ವಾಲ್ ಚೆಂಡು ಕೂಡಾ ಇದ್ವು.

ಶಾಲಿ ಬಿಟ್ತಂದ್ರ ಸಾಕು ಚೆಂಡು ಹಿಡಕೊಂಡು ಸ್ಲಮ್ ಗಲ್ಲಿನ್ಯಾಗ ಒದಕೊಂಡು ಪಕ್ಕದ ಬಯಲಿಗೆ ಹೋಗತಿದ್ದಾ. ಅವನ ಉತ್ಸಾಹ ನೋಡಬೇಕು; ಏನೆನೆಲ್ಲಾ ಟೆಕ್ನಿಕ್ ಬಳಸತಿದ್ದಾ. ಟೀವಿನ್ಯಾಗ ಬರೋ ಆಟದಾಗ ಯಾವದಾದ್ರು ಒಂದು ಹೊಸಾ ಟೆಕ್ನಿಕ್ ಕಂಡ್ರ ಸಾಕು, ಅದನ್ನ ಮಾರನೇ ದಿನಾ ತನ್ನ ಚೆಂಡಿನಮ್ಯಾಗ ಪ್ರಯೋಗಾ ಮಾಡತಿದ್ದಾ.

ನಾನು ಅವನ್ನ ನೋಡಿದ್ದು ಒಂದು ಆಕಸ್ಮಿಕಾ. ಮುಂಬೈನ್ಯಾಗ ಫೋಟೋಗ್ರಾಫಿ ಕಲ್ಯಾಕಂತ ಹೋಗಿದ್ದೆ. ಆವಾಗ ಅಲ್ಲೇ ಇದ್ದ ಕನ್ನಡದವ್ರು ಒಬ್ರು ಜೊತಿಗೆ ಆ ಹುಡಗನ ಅಪ್ಪನ ಜೊತಿಗೆ ಮಾತಾಡಾಕ ಹೋಗಿದ್ದೆ. ಆವಾಗ ಆ ಫುಟ್ಬಾಲ್ ಕನಸುಗಾರ ಡಿಯಾಗೊಗ ಸುಮಾರು ಹನ್ನೆಡೂವರಿ ವರ್ಷಾ ವಯಸ್ಸು.

ಅವತ್ತು ಅವಾ ಸಂಜೀಗೆ ನಮ್ಮನ್ನೂ ತಾನು ಫುಟ್ಬಾಲ್ ಆಟೋ ಬಯಲಿಗೆ ಕರಕೊಂಡು ಹೋಗಿದ್ದಾ. ಅಲ್ಲಿ ಅವಾ ಆಟಾ ಆಡೋದನ್ನ ನೋಡಿದಾಗ ಈ ಸಣ್ಣ ಗುಡುಗಾ ಎಷ್ಟ ಚೆಂದ ಆಡತಾನಾ ಅಂತ ಬೆರಗಾದ್ವಿ. ಅವಾ ತಲಿ ಕೆಳಗಮಾಡಿ ಮ್ಯಾಲೆ ಜಿಗದು ಚೆಂಡನ್ನ ಒದ್ದಿದ್ದ ರೀತಿ ಅಂತೂ ಇನ್ನೂ ನನ್ನ ಕಣ್ಣ ಮುಂದ ಐತಿ.

ನಾನು ಮತ್ತ ಎರಡೂವರಿ ವರ್ಷಾ ಆದಮ್ಯಾಗ ಮುಂಬೈಗೆ ಕ್ರಿಕೆಟ್ ಆಟಾನ ವರದಿ ಮಾಡಾಕ ಹೋಗಿದ್ದೆ. ಆವಾಗ ಒಂದು ದಿನಾ ಟಾಯಮ್ ಮಾಡಕೊಂಡು ರಾತ್ರಿ ದಾರಾವಿ ಅಂಚಿನ್ಯಾಗ ಇರೊ ಆ ಹುಡಗ ಇರೋ ಸ್ಲಮ್ಮಿಗೆ ಹ್ವಾದೆ. ಆವಾಗ ಅವನ ಮನ್ಯಾಗ ಒಂಥರಾ ತಣ್ಣಗ ವಾತಾವರಣಾ ಇತ್ತು. ಆ ಫುಟ್ಬಾಲ್ ಹುಡುಗಾ ಡಿಯಾಗೊ ತಂದಿ ಮುಖದಮ್ಯಾಗ ನಗಿ ಕಟ್ಟಕೊಂಡು ನನ್ನಾ ತನ್ನ ಪುಟ್ಟ ಮನಿ ಒಳಗ ಕರದಾ.

ಆದ್ರ ಹಿಂದ ಇದ್ಹಾಂಗ ಅವತ್ತ ಆ ಮನಿ ಇರಲಿಲ್ಲಾ. ಫುಟ್ಬಾಲ್ ಚೆಂಡೆಲ್ಲಾ ನೆತ್ತಿಮ್ಯಾಗ ನೇತು ಬಿದ್ದಿದ್ವು. ನಾ ಹಿಂದ ಆ ಮನೀಗೆ ಹ್ವಾದಾಗ ಅವೆಲ್ಲಾ ನೆಲದಾಗ ಕಾಲಿಗೆ ಅಡ್ಡಾದಿಡ್ಡಿ ಬರೋಹಾಂಗ ಉರಳಾಡತಿದ್ವು. ಆದ್ರ ಈಗ ಅವು ನೆತ್ತಿಮ್ಯಾಗ ತಣ್ಣಗ ತೂಗತಿದ್ವು. ನಾನು ಮನೀಗೆ ಹೋದಕೂಡಲೇನ ಕೇಳಿದ್ದು "ಎಲ್ಲಿ ನಮ್ಮ ಡಿಯಾಗೊ...?" ಅಂತ.

ಅಗ ಅಡಗಿ ಮನ್ಯಾಗ ಅಡ್ಡ ಗ್ವಾಡಿಗೆ ಒರಗಿಕೊಂಡಿದ್ದ ಆ ಹುಡಕನ ಅವ್ವಾ ಗಳೋ ಅಂತ ಅಳಾಕ ಹತ್ತಿದ್ಲು. ಜೋತಿಗೆ ಸಣ್ಣಗ ಧ್ವನಿ ತಗದು "ಫುಟ್ವಾಲ್ ಆಟಾನ ಅವನ್ನಾ ಬಲಿ ತಗೊಂತು" ಅಂತಾ. ಅದಕ್ಕ ಯಾವರೀತಿ ಪ್ರತಿಕ್ರಿಯಾ ಮಾಡಬೇಕು ಅನ್ನೋದ ನನಗ ತಿಳಿಲಿಲ್ಲಾ. ಸ್ವಲ್ಪ ಹೊತ್ತು ಸುಮ್ಮಗ ಕುಂತೆ. ಆಮ್ಯಾಲ ಆ ಹುಡಗನ ಅಪ್ಪಾ ನನ್ನ ಹೊರಗ ಕರಕೊಂಡು ಬಂದು, ರಸ್ತೆನ್ಯಾಗಿನ ಚಹಾದಂಗಡಿನ್ಯಾಗ ಕರಕೊಂಡು ಹೋಗಿ ಚಹಾ ಕೊಡಿಸಿದಾ.

ಆವಾಗ ಕುಡದ ಚಹಾನೂ ನನಗ ಛಲೋ ಅನಿಸ್ಲಿಲ್ಲಾ. ಹಿಂದ ಅದ ಅಂಗಡಿನ್ಯಾಗ ಒಮ್ಮೆ "ಅದ್ರಕ್ ಚಹಾನ" ಚಪ್ಪರಿಸಿಕೊಂಡು ಕುಡಿದಿದ್ದೆ. ಆದ್ರ ಮತ್ತೊಮ್ಮೆ ಅದೂ ಇಂಥಾ ಸುದ್ದಿ ಕೇಳಿದಮ್ಯಾಗ ಅದ ಚಹಾ ಹಿಡಸಲಿಲ್ಲಾ. ಆದ್ರೂ ಮನಸಿಲ್ಲದ ಮನಸಿನ್ಯಾಗ ಚಹಾ ಹೀರತಿದ್ದೆ.

ಅದ ಹೊತ್ತಿಗೆನ ಆ ಫುಟ್ಬಾಲ್ ಕನಸುಗಾರನ ಅಪ್ಪಾ ಕಷ್ಟಾ ಪಟ್ಟು ಮಾತು ಹೊರಡಿಸಿದಾ "ನೀವು ನೋಡಿದ್ರಲ್ಲ ಅದ ಗ್ರೌಂಡಿನ್ಯಾಗ ಫುಟ್ಬಾಲ್ ಆಡಾಕ ಹೋಗಿದ್ದಾ. ಆದ್ರ ಮನೀಗೆ ಅವನ್ನ ನಾಲ್ಕು ಹುಡುಗ್ರು ಅಂಗಾತ ಎತ್ತಿಕೊಂಡು ಬಂದ್ರು. ಆಮ್ಯಾಲ ಡಾಕ್ಟರ್ ಕಡೀಗೆ ಕರಕೊಂಡು ಹೋದ್ವಿ, ಅಲ್ಲಿಂದ ದೊಡ್ಡ ಹಾಸ್ಪಿಟಲಿಗೂ ತಗೊಂಡು ಹೋದ್ವಿ" ಅಂತ ಹೇಳಿ ಸ್ವಲ್ಪ ವಿರಾಮ ಕೊಟ್ಟಾ. ಆ ವಿರಾಮದ ಮೌನಾ ಭಾಳ ನೋವಾಗೊಹಂತಾದ್ದು.

ಮತ್ತ ದೊಡ್ಡ ಉಸುರು ಎಳದು ಮಾತ್ ಮುಂದುವರಿಸ್ದಾ ಅವಾ "ಡಾಕ್ಟರ್ ಹೇಳಿದ್ರು ಅವಗ ಆಡೋವಾಗ ಎದಿಗೆ ಪೆಟ್ಟು ಬಿದ್ದೈತಿ, ಎದಿ ಒಳಗಿಂದಾ ಸೀಳಿಕೊಂಡೈತಿ; ಉಳಿಯೋದು ಕಷ್ಟಾ ಅಂತ. ಆದ್ರೂ ಆಪರೇಷನ್ ಮಾಡ್ತೀವಿ ಅಂದ್ರು. ಅವತ್ತ ಯಾರ್ಯಾರೋ ಎಲ್ಲಾ ಬಂದು ರೊಕ್ಕಾ ಕೊಟ್ಟು ಆಪರೇಷನ್ ಮಾಡ್ಸೊದಕ್ಕ ಹೆಲ್ಪ್ ಮಾಡಿದ್ರು. ಆದ್ರ ಏನೂ ಪ್ರಯೋಜನಾ ಆಗಲಿಲ್ಲಾ. ನಮ್ಮ ಡಿಯಾಗೊ ಹೊಂಟ್ ಹ್ವಾದಾ" ಅಂತ ಹೇಳಿ ಮುಗಿಸಿದಾ.

ನನಗ ಅದೇನೋ ಒಂಥರಾ ಆತು. ಸ್ವಲ್ಪ ಹೊತ್ತು ಮತ್ತ ಅವರ ಮನೀಗೆ ಹೋಗಿ ಕುಂತು ಮತ್ತ ಹೊರಟು ಬಂದೆ. ಆದ್ರೂ ಫುಟ್ಬಾಲ್ ವಿಷಯಾ ಬಂದಾಗೆಲ್ಲಾ ಆ ಹುಡಗಾ ನೆನಪಾಕ್ಕಾನ. ಈಗೂ ವಿಶ್ವಕಪ್ ಫುಟ್ಬಾಲ್ ಆಟಾನ ಟೀವಿನ್ಯಾಗ ನೋಡೊವಾಗ ಆ "ಫುಟ್ಬಾಲ್ ಕನಸುಗಾರ" ಮನಸಿನ್ಯಾಗ ಬಂದು ಕಾಡತಾನ!