ಒಂದು ಕಥಿ ಹೇಳ್ತೀನಿ..."ಗುಬ್ಬಿಗೆ ಅಂಜದು ಗರುಡ"


ಇದು ಕಥೆ ಅಷ್ಟ ಆಗ್ಯದ; ಹೌದು! ಖರೇನ ಇದು ಕಥಿಯಾಗ್ಯದ. ಹಾಗಂತ ತಿಳಕೊಂಡ ನೀವೆಲ್ಲಾ ಓದಬೇಕು. ನಿಜ ಬದುಕಿಗೂ ಈ ಕಥೆಗೂ ಎಷ್ಟೂ ಸಂಬಂಧಾ ಇಲ್ಲಾ. ಅದಕ್ಕ ನೀವೆಲ್ಲಾ ಕಥಿ ಇದು ಅಂತಾನ ಓದಿಕೋಬೇಕು ಅಂತ ನಿಮ್ಮಲ್ಲಿ ಪ್ರಾರ್ಥನಾ ಮಾಡಕೋತಿನಿ.

ನಿಮ್ಮ ಗೆಳಿಯಾ... ಡಿ.ಗರುಡ

ಭಾರಿ ದೊಡ್ಡದೊಂದು ಕಾಡು. ಅದರ ಅಂಚಿನ್ಯಾಗೊಂದು ನಾಡು. ನಾಡಿನ್ಯಾಗ ಹ್ಯಂಗೊ ಕಾಡಿನಾಗೂ ಜೀವನಾ ನಡೀತಿತ್ತು. ಕಾಡ್ ಪ್ರಾಣಿಗಳು ಇದ್ವು. ಅವಗಳಿಗೆ ವಾಸಕ್ಕ ಜಾಗಾ ಇತ್ತು. ಜನತಂತ್ರ ಸರ್ಕಾರಾ ಇತ್ತು. ಪ್ರಜಾತಂತ್ರ ರಕ್ಷಣೆಗೆ ಅಂತ ಪ್ರಾಣಿಗೋಳೆಲ್ಲಾ ಸೇರಿ ಸುದ್ದಿ ಪೇಪರೂ ಮಾಡಿದ್ವು.

ನೂರಾರು ಸಿಂಹಗಳೊಳಗ ಒಬ್ಬ ಸಿಂಹರಾಜಾನ ಆ ಪೇಪರಿನ "ಎಡಿಟರು". ಹುಲಿರಾಯ, ಕರಡಿಯಪ್ಪ, ಚಿರತಿರಾಯಾ... ಹಿಂಗ ಎಲ್ಲಾ ಪ್ರಾಣಿಗಳೋಳು ಒಂದೊಂದು ಪೋಸ್ಟನ್ಯಾಗ ಇದ್ವು. ಅದು ಒಂಥರಾ ಪ್ರಜಾಪ್ರಭುತ್ವದ ಬಿಂಬಾ ಆಗಿರೋಹಂತಾ ಸುದ್ದಿ ಪೇಪರು. ಆದ್ದರಿಂದ ಅಲ್ಲಿ ಎಲ್ಲಾ ಜಾತಿ ಪ್ರಾಣಿಗಳಿಗೂ ಸಮಾನ ಅವಕಾಶ. ಅದಕ್ಕ ಅದನ್ನ ಭಾರಿ ವಿಶ್ವಾಸಾ ಇರೋ ಪೇಪರು ಅಂತಾ ಕಾಡಿನ ಪ್ರಾಣಿ-ಪಕ್ಷಿಗಳೆಲ್ಲಾ ಮೆಚ್ಚಿಕೊಂಡು ಓದತಿದ್ವು.

ನಾಡಿನ್ಯಾಗ ಹೆಂಗೊ ಕಾಡಿನ್ಯಾಗೂ ರಾಜಕೀಯಾ ನಡೀತಿತ್ತು. ರಾಜಕಾರಣಿಗಳ ಸೋಗಿನ ತ್ವಾಳಗಳು ಇದ್ವು. ತುಂಟತನಾ ಮಾಡೋ ಕೋತಿಗಳ ಪಕ್ಷಾನೂ ಇತ್ತು. ಸಂಭಾವಿತರು ಇರೋ ಪ್ರಾಣಿಗಳ ಪಾರ್ಟಿನೂ ಇದ್ವು. ಉದ್ಯಮಾ ನಡಸೋ ನರಿಗಳು ಇದ್ವು. ಈ ಪ್ರಾಣಿಗೋಳಿಗೆಲ್ಲಾ ವಿದೇಶಾ ಅಂದ್ರ ಮನುಷಾರು ಬದುಕೊ ನಾಡು, ಅವರ ಹೊಲಾ, ತ್ವಾಟಾ...!

ಕಾಡಿನ್ಯಾಗೂ ನಾಡಿನಹಂಗ ಪರಿಸರ ರಕ್ಷಣೆ ಹಾಡು ಹಾಡೋದಕ್ಕ ಗುಬ್ಬಚ್ಚಿಗಳೂ ಇದ್ವು. ನಾವು ಚಿವ್...ಚಿವ್... ಅಂದರನ ಬೆಳಕು ಹರೀತೈತಿ. ಸೂರ್ಯಾ ಹುಟ್ಟತಾನ... ಪರಿಸರಾ ಉಳಿತೈತಿ ಅಂತಿದ್ವು ಆ ಗುಬ್ಬಿಗಳು. ಆದರ ಆ ಗುಬ್ಬಿಗಳು ಕಾಡ್ ಉಳಸತೀವಿ ಅಂತ ಕಾಡಿನ್ಯಾಗ ಹಾಡು ಹಾಡತಿದ್ರು; ಹೊಟ್ಟಿ ತುಂಬಿಸಿಕೊಳ್ಳಾಕ ಹೋಗತಿದ್ದದ್ದ ಪಕ್ಕದ ವಿದೇಶಾ ಅನ್ನೋ ನಾಡಿನ್ಯಾಗ.

ಪರಿಸರವಾದಿ ಗುಬ್ಬಚ್ಚಿಗಳು ಹೊಟ್ಟಿ ಹರಿಯೋಹಂಗ ಕಾಳನ್ನ ವಿದೇಶಾ ಅನ್ನೋ ನಾಡಿನ್ಯಾಗ ತಿಂದು ಬಂದು ಕಕ್ಕಾ ಮಾಡತಿದ್ದದ್ದ ಕಾಡಿನ್ಯಾಗ. ಬ್ಯಾರೆ ಎಲ್ಲಾ ಪ್ರಾಣಿ ಪಕ್ಷಿಗಳೆಲ್ಲಾ ಕಾಡಿನ್ಯಾಗ ಇರೋದನ್ನ ತಿಂದು ಬದಕತಿದ್ರ ಈ ಗುಬ್ಬಚ್ಚಿಗಳಿಗೆ ನಾಡು ಅನ್ನೋ ವಿದೇಶದವರ ಹೊಲದಾಗಿನ ಜ್ವಾಳಾ, ಭತ್ತಾ, ರಾಗಿನ ತಿನ್ನಾಕ ಬೇಕು. ನಾವೇನು ಕಾಡಿನ್ಯಾಗ ತಿನ್ನೋದಿಲ್ಲ; ನಾಡಿನ್ಯಾಗಿಂದ ಕಾಳು ತಿಂದು ಬರ್ತೀವಿ; ಅದಕ್ಕ ನಾವು ಕಾಡು ಉಳಿಸೋ ಪರಿಸರವಾದಿಗಳು ಅಂತಾ ಗುಬ್ಬಚ್ಚಿಗೋಳೆಲ್ಲಾ ಚಿವ್...ಚಿವ್... ಅಂತಿದ್ವು.

ಒಮ್ಮೆ ಕಾಡಿನ್ಯಾಗ ಇರೋ ಕಣ್ಣು ಕಾಣದ, ಕಾಲು ಮುರದ, ಆರೋಗ್ಯಾ ಇಲ್ಲದ ಮತ್ತ ವಯಸ್ಸಾದ ಆನಿಗಳೆಲ್ಲಾ ಸೇರಿ ತಮಗೆಲ್ಲಾ ಒಂದು ಇರಾಕ ಒಂದು ಪುನರ್ವಸತಿ ಕೇಂದ್ರಾ ಮಾಡಿಕೊಡ್ರಿ ಅಂತ ಕಾಡಿನ ಸರ್ಕಾರಾನ ಕೇಳಿದ್ವು. ಅದಕ್ಕಂತ ದೊಡ್ಡದೊಂದು ಅರ್ಜೀನೂ ಬರದು ನೂರಾರು ಸಿಂಹಗಳೊಳಗ ದೊಡ್ಡವಾಗಿದ್ದ ಇನ್ನೊಬ್ಬ ಸಿಂಹರಾಜಾಗ ಹೇಳಿದ್ವು.

ಅದ ಹೊತ್ತಿಗೆ ಇತ್ತಾಗ ಇನ್ನೊಬ್ಬ ಸಿಂಹರಾಜ ಅಂದರ ಸುದ್ದಿ ಪೇಪರ್ ಎಡಿಟರ್ ಆಗಿದ್ದ ಸಿಂಹರಾಜ; ಆ ಸಿಂಹರಾಜನ ಪೇಪರಿನ್ಯಾಗ ಸೇರಿಕೊಂಡಿದ್ದಾ "ಗರುಡಾ" ಹಕ್ಕಿ. ಬ್ಯಾರೆ ಎಲ್ಲಾ ಪ್ರಾಣಿ ಪಕ್ಷಿಗಳಿಗಿಂತಾ ಸೂಕ್ಷ್ಮ ಆಗಿರೋವಂಥಾ ಕಣ್ಣ ಹೊಂದಿರೋ ಗರುಡಾ ಹಕ್ಕಿ ಎಲ್ಲಾ ವಿಷಯ್ಯಾನೂ ಸಾಕಷ್ಟು ಸ್ಪಷ್ಟವಾಗಿ ನೋಡತದ ಅಂತಾನ ಸಿಂಹರಾಜನ ಸುದ್ದಿ ಪೇಪರಿನ್ಯಾಗ ಕೆಲಸಾ ಸಿಕ್ಕಿತ್ತು.

ಒಮ್ಮೆ ಆಕಾಶಕ್ಕ ಹಾರಿದ್ರ ಸಾಕು ಗರುಡಾ ಹಕ್ಕಿ ಮ್ಯಾಲಿನಿಂದಲನ ನೋಡಿ ಕಾಡಿನ್ಯಾಗ ಸಂಭಾವಿತ ಪ್ರಾಣಿಗೋಳನ್ನ ಕಾಡೋ ಸರ್ಪಗಳನ್ನೆಲ್ಲಾ ಗುರುತಿಸಿ, ತನ್ನ ಕೊಕ್ಕಿನ್ಯಾಗ ಕುಕ್ಕಿ ಸಾಯಿಸತಿತ್ತು. ಹಿಂಗ ಗರುಡಾ ಪಕ್ಷಿ ತನ್ನ ಕೆಲಸಾ ಮಾಡಿಕೊಂಡು ಹೊಂಟಿತ್ತು. ಯಾರಿಗೂ ಹೆದ್ರೋದಲ್ಲಾ ಈ ಗರುಡಾ ಪಕ್ಷಿ. ಸಿಂಹರಾಜಗ ಇದ್ದದ್ದನ್ನ ಇದ್ಹಾಂಗ ಹೇಳಿ ಬಿಡುವಂಥಾ ಗಟ್ಟಿತನಾ ಇರೋವಂಥಾ ರಿಪೋರ್ಟರ್ ಆಗಿತ್ತು ಗರುಡಾ ಹಕ್ಕಿ.

ಆದರ ಒಮ್ಮೆ ಪರಿಸರಾ ರಕ್ಷಣೆ ಮಾಡ್ತೀವಿ ಅಂತ ಹೇಳಿಕೊಂಡು ವಿದೇಶಾ ಅನ್ನೋ ನಾಡಿನ್ಯಾಗಿನ ಹೊಲದಾಗಿನ ಬೆಳೆನೆಲ್ಲಾ ಕದ್ದು ತಿಂದು ಬರೋ ಗುಬ್ಬಚ್ಚಿಗಳೆಲ್ಲಾ ಸೇರಿಕೊಂಡು ಕಾಡು ಉಳಿಸತೀವಿ. ಹುಲಿರಾಯನ ಜೀವನಾ ತಿಳಿತೀವಿ, ಅವನ ಜೀವನಾ ಅಳೀತೀವಿ ಅಂತೆಲ್ಲಾ ಹೇಳಿ ಚಿವ್...ಚಿವ್... ಗುಟ್ಟಿದ್ವು. ಆದರ ಕಾಡು ಉಳಿಸತೀವಿ ಅಂತ ಹೇಳಿಕೊಂಡ ಆ ಗುಬ್ಬಚ್ಚಿಗಳೆಲ್ಲಾ ಮಾಡಿದ್ದು ಆಕಡೀಗ ಕಾಡಿಗೂ ಒಳಿತಾಗ್ಲಿಲ್ಲಾ ನಾಡಿಗೂ ಒಳಿತಾಗ್ಲಿಲ್ಲಾ.

ಅದಕ್ಕಂತ ಆ ಗುಬ್ಬಚ್ಚಿಗಳ ಮ್ಯಾಲೆ ಕರಡಿರಾಯನ ಕೋರ್ಟಿನ್ಯಾಗೊಂದು ದೊಡ್ಡ ಕೇಸೂ ದಾಖಲಾತು. ಹೆಣ್ಣ ಚಿರತಿ ಒಂದು ಕಾಡಿನ ಆಫೀಸರ್ ಆಗಿತ್ತು. ಅದ ಆ ಎಲ್ಲಾ ಗುಬ್ಬಚ್ಚಿಗಳ ಮ್ಯಾಗ ದೊಡ್ಡದೊಂದು ಕೇಸು ಹಾಕಿ. ಇವರೆಲ್ಲಾ "ಕ್ರಿಮಿನಲ್ಸ್" ಅಂತಾ ಹೇಳಿತ್ತು. ಆ ಕೇಸು ಕರಡಿರಾಯನ ಕೋರ್ಟಿನ್ಯಾಗ ಭಾಳ ವರ್ಷಾ ಆದರೂ ಪೆಂಡಿಂಗ್ ಆಗೇ ಉಳಿತು.

ಇಷ್ಟೆಲ್ಲಾ ಕುತಂತ್ರಾ ಮಾಡಿರೋ ಗುಬ್ಬಚ್ಚಿಗಳು ಆದರೂ ತಾವು "ಪರಿಸರಾ ರಕ್ಷಣೆ ಮಾಡ್ತೀವಿ" ಅಂತಾ ಚಿವ್...ಚಿವ್... ಅನ್ನೋದನ್ನ ನಿಲ್ಸಿರಲಿಲ್ಲಾ. ಅವು ಪರಿಸರಾ ರಕ್ಷಣೆ ಹಾಡು ಹಾಡಿಕೊಂತನ ವಿದೇಶಾ ಅನ್ನೋ ನಾಡಿನ್ಯಾನ ಹೊಲದಾಗಿನ ಕಾಳು ಕದ್ದು ತಿನ್ನೋದು ಎಲ್ಲಾರಿಗೂ ಗೊತ್ತಿತ್ತು. ಸಿಂಹಾ, ಹುಲಿ, ಚಿರತಿ... ಇಂಥಾ ದೊಡ್ಡ ದೊಡ್ಡ ಪ್ರಾಣಿಗೋಳೆಲ್ಲಾನೂ ಚಿವ್... ಚಿವ್... ಅಂತಾ ಹೊಗಳೋ ಕೆಲಸಾನೂ ಈ ಗುಬ್ಬಚ್ಚಿಗಳು ಭಾಳ ಜತನದಿಂದನ ಮಾಡತಿದ್ವು. ಅದಕ್ಕಂತನ ಆ ದೊಡ್ಡ ಪ್ರಾಣಿಗೋಳಿಗೂ ಇವು ಭಾಳ ಒಳ್ಳೇವು ಅಂತಾನ ಅನಸತಿತ್ತು.

ಆದರ ಅವು ಪರಿಸರಾ ಉಳಿಸತೀವಿ ಅಂತ ಹೇಳಿಕೊಂಡು ಮಾಡಿರೋ ಯಡವಟ್ಟೆಲ್ಲಾ ಸಿಂಹಾ, ಹುಲಿ, ಚಿರತಿಗೆ ಗೊತ್ತ ಆಗತಿರಲಿಲ್ಲ. ನೋಡಾಕ ಸಂಭಾವಿತ ಅನ್ನೋಹಾಗ ಕಾಣಿಸೋ ಗುಬ್ಬಚ್ಚಿ ಮಾಡಿದ್ದೆಲ್ಲಾ ಒಳ್ಳೆದ ಅಂತ ಅನಸತಿತ್ತು. ಒಮ್ಮೆ ಕಾಡಿನ ಅಂಚಿನ್ಯಾಗಿದ್ದ ಬುಡಕಟ್ಟು ಜನರನ್ನೆಲ್ಲಾ ಹಿಂಸೆ ಕೊಟ್ಟು ಈ ಗುಬ್ಬಚ್ಚಿಗಳೆಲ್ಲಾ ಒಂದು ಸಿನಿಮಾ ಕೂಡ ಮಾಡಿ ವಿದೇಶಾ ಅನ್ನೋ ನಾಡಿನ ಜನರಿಗೆ ತೋರಿಸಿ ಭಾರಿ ಲಾಭಾನೂ ಮಾಡಿಕೊಂಡಿದ್ವು. ಅದಕ್ಕ ಆ ಗುಬ್ಬಚ್ಚಿಗಳನ್ನಾ ಆ ಕಾಡಿನ ಅಂಚಿನ್ಯಾಗಿರೊ ಬುಟಕಟ್ಟು ಜನರು ಈಗೂ ಬಾಯಿಗೆ ಬಂಧಾಂಗ ಬೈತಾರ.

ಈಗ ಮುಖ್ಯ ವಿಷಯಕ್ಕ ಬರೋಣ. ಅದ ಮೊದಲ ಹೇಳಿಧಾಂಗ ಕಣ್ಣಿಲ್ಲದ, ಕಾಲಿಲ್ಲದ ಮತ್ತ ವಯಸ್ಸಾದ ಆನೆಗಳೆಲ್ಲಾ ಸೇರಿಕೊಂಡು ನೆಮ್ಮದಿಯಿಂದ ಈರೋದಕ್ಕ ಒಂದು ಪುನರ್ವಸತಿ ಕೇಂದ್ರಾ ಮಾಡಿಕೊಡ್ರಿ ಅಂತ ಕಾಡಿನ ಸರ್ಕಾರಾನ ಕೇಳಿಕೊಂಡ್ವು. ಅದಕ್ಕ ಆ ಸರ್ಕಾರದ ದೊಡ್ಡಪ್ಪ ಅನಿಸಿರೋ ಹಿರಿ ಸಿಂಹರಾಜಾನೂ ಒಪ್ಪಿಗಿ ಕೊಟ್ಟಾಗಿತ್ತು.

ಆದ್ರೂ ಈ ವಿಷಯಾನಾ ಕಾಡಿನ ಪ್ರಾಣಿಗೋಳೆಲ್ಲಾ ಸೇರಿ ಚರ್ಚಾ ಮಾಡ್ರಿ, ಆಮ್ಯಾಲ ಹೆಂಗ ಮತ್ತ ಎಲ್ಲಿ ಆನೆಗಳ ಪುನರ್ವಸತಿ ಕೇಂದ್ರಾ ಮಾಡೋದು ಅಂತ ಯೋಚನೆ ಮಾಡಿ, ಮುಂದಿನ ಕೆಲಸಾ ಮಾಡೋಣ ಅಂತ ಸರ್ಕಾರದ ದೊಡ್ಡಪ್ಪ ಅನಿಸಿರೋ ಹಿರಿ ಸಿಂಹರಾಜಾ ಹೇಳಿ ಕಳಿಸಿದ.

ಆದ್ರ ಪರಿಸರಾ ರಕ್ಷಣೆ ಮಾಡೋ ಹಕ್ಕೆಲ್ಲಾ ನಮ್ದು ಅಂತ ಚಿವ್...ಚಿವ್... ಗುಟ್ಟೋ ಗುಬ್ಬಚ್ಚಿಗಳೆಲ್ಲಾ ಗದ್ದಲಾ ಮಾಡೋದಕ್ಕ ಶುರು ಮಾಡಿದ್ವು. ಅದ ಟಾಯಮಿನ್ಯಾಗ ಸಭಾನ ಆಕಾಶದಾಗಿನಿಂದ ನೋಡತಿದ್ದ ಸುದ್ದಿ ಪೇಪರಿನ ವರದಿಗಾರ ಆಗಿದ್ದ ಗರುಡಾ ಹಕ್ಕಿಗೆ ಈ ಗುಬ್ಬಚ್ಚಿ ಮತ್ತ ಏನೋ ಕುತಂತ್ರ ಮಾಡಾಕ ಹತ್ಯದ ಅಂತ "ಹಸಿ ಗ್ವಾಡಿಮ್ಯಾಗ ಹಳ್ಳ್ ಹೊಡಧಾಂಗ" ಸ್ಪಷ್ಟವಾಗಿ ಗುರುತಿಸ್ತು.

ಅದ್ರ ಗರುಡಾ ಹಕ್ಕಿ ನನ್ನ ಮನದೊಳಗಿನ ಕುತಂತ್ರಾನ ಗುರತ್ ಹಿಡದೈತಿ ಅನ್ನೋದು ಅದು ಹ್ಯಾಂಗೋ ಆ ಪರಿಸರವಾದಿ ಗುಬ್ಬಚ್ಚಿಗಳಿಗೆ ಗೊತ್ತಾತು. ಅದಕ್ಕ ದೊಡ್ಡ ಗದ್ದಲಾನ ಶುರುಮಾಡಿದ್ವು. ಅಷ್ಟ ಅಲ್ಲ ತಮ್ಮ ಶಿಫಾರಸು ಎಂಥಾದೈತಿ ಅಂತ ತೋರ್ಸಾಕ ಸಿಂಹರಾಜನ ಸುದ್ದಿ ಪೇಪರಿನ್ಯಾಗ ಇರೋ ಹುಲಿರಾಯನ ಕಿವಿನೂ ಕಚ್ಚೀದ್ವು.

ಪರಿಸರಾ ಉಳಿಸತೀವಿ ಅಂತ ಹೇಳಿಕೊಂಡು ವಿದೇಶಾ ಅನ್ನೋ ನಾಡಿನ್ಯಾಗಿನ ಹೊಲದಾಗಿನ ಕಾಳು ಕದ್ದು ತಿನ್ನೊ ಗುಬ್ಬಚ್ಚಿಗಳು ಹಿಂಗ ಮಾಡಿದ್ವು ಅಂತ ಗರುಡಾ ಹಕ್ಕಿಯೇನು ಹೇದರ್ತದಾ. ಇದ್ದದ್ದು ಇದ್ದಾಂಗ ಎಲ್ಲಾನೂ ಸಿಂಹರಾಜನ ಸುದ್ದಿ ಪೇಪರಿನ ಆಫಿಸಿನ್ಯಾಗ ತಿಳಿಸ್ತು. ಆನೆಗಳ ಕಷ್ಟಾನೂ ವಿವರಿಸ್ತು ಗರುಡಾ ಪಕ್ಷಿ.

ಪ್ರಜಾಪ್ರಭುತ್ವದ ರಕ್ಷಣಾಕ್ಕ ನಿಂತಿರೋ ಸಿಂಹರಾಜನ ಸುದ್ದಿ ಪೇಪರ್ ಆಫಿಸಿನ್ಯಾಗ ಕೊನಿಗೆ ಗೆದ್ದಿದ್ದು ಗರುಡಾ ಪಕ್ಷಿ. ಗುಬ್ಬಚ್ಚಿ ಮಾಡೋದೆಲ್ಲಾ ಹಂಗ; ವಿದೇಶಾ ಅನ್ನೊ ನಾಡಿನ್ಯಾಗಿನ ಹೊಲದಾಗಿನ ಕಾಳು ತಿನ್ನೋದು, ಕಾಡಿನ್ಯಾಗ ಬಂದು "ಕಾಡು ಉಳಿಸ್ತೀವಿ" ಅಂತ ಚಿವ್... ಚಿವ್... ಹಾಡು ಹಾಡೋದು ಅನ್ನೋ ಸತ್ಯದ ಮಾತು ಎಲ್ಲಾರ ಮನಸಿನ್ಯಾಗೂ ಅಚ್ಚಾತು!