ಕಲ್ಮಾಡಿಗೆ ಶಿಕ್ಷೆ ಆದ್ರ "ಮೀಸಿ ಬೆಳಸ್ತೀನಿ" ಇದು ನನ್ನ ಚಾಲೆಂಜ್


ಭಾರತಮ್ಮನ ಮಡಿಲಿನ್ಯಾಗ ನಡದ ದೊಡ್ಡ ಕ್ರೀಡಾಕೂಟದ ಹಗರಣಾ ಅಂದ್ರ ಅದು ಕಾಮನ್ ವೆಲ್ತ್ ಕ್ರೀಡಾಕೂಟದ್ದು. ಇದರಾಗ ಮುಖ್ಯ ಆರೋಪಿ ಸ್ಥಾನದಾಗ ನಿಂತಿರೋದು ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅನ್ನೋ ಮಹಾಶಯರು. ಮಜಾ ನೋಡ್ರಿ ದೊಡ್ಡ ಹಗರಣಾ ನಡದಮ್ಯಾಗೂ ಅವರು ತಮ್ಮ ಅಷ್ಟೂ ಹಲ್ಲು ಕಾಣೋಹಂಗ ನಗತಾರ. ಅದನ್ನ ನೋಡಿದಾಗೆಲ್ಲಾ ಹೊಟ್ಟ್ಯಾಗ ಕೆಂಡಾ ಇಟ್ಟಂಗ ಆಕ್ಕದ. ಆದ್ರ ಏನು ಮಾಡಾಕ ಆಕ್ಕದ; ನಾ ಒಬ್ಬ ದೇಶದ ಬಡ ಪ್ರಜೆ. ಅದೇನೋ ಅಂತಾರಲ್ಲಾ ಬಡವನ ಸಿಟ್ಟು ದವಡಿಗೆ ಮೂಲಾ ಅಂತ; ಹಂಗ ಆಗ್ಯದ ನನ್ನ ಕಥಿ.

ನೋಡತಿರ್ರಿ ಕೋಟಿಗಟ್ಟಲೇ ಹಣಾ ನುಂಗಿರೋ ಆರೋಪ ಹೊತ್ತಿರೋ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಮಹಾಶಯರಿಗೆ ಶಿಕ್ಷೆ ಅಂತೂ ಆಗೋದಿಲ್ಲಾ. ಇದು ನನ್ನ ಚಾಲೆಂಜ್ ! ಹಂಗ ಏನಾದ್ರೂ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರೀಗ ಶಿಕ್ಷೆ ಆತೂ ಅಂದ್ರ ನಾನು ಖರೆನ "ಮೀಸಿ ಬೆಳಸ್ತೀನಿ"! ನೀವು ಓದೋವಾಗ "ಮೀಸಿ ಬೋಳಸ್ತೀನಿ" ಅಂತ ತಪ್ಪು ತಿಳಕೋಬ್ಯಾಡ್ರಿ. ನಾನು ಹೇಳಿದ್ದು ಸ್ಪಷ್ಟವಾಗಿ "ಮೀಸಿ ಬೆಳಸ್ತೀನಿ" ಅಂತ.

"ಮೀಸಿ ಬೆಳಸ್ತೀನಿ ಅಂತ ಯ್ಯಾಕ ಹೇಳಿನಿ ಅಂದ್ರ; ನಾನು ದಿನಾಲೂ ಮೀಸಿ ಬೋಳಸ್ತೀನಿ. ಅದಕ್ಕ "ಮೀಸಿ ಬೋಳಸ್ತೀನಿ" ಅಂತ ಚಾಲೆಂಜ್ ಮಾಡಾಕ ಆಗಂಗಿಲ್ಲ. ಖರೇನ ಮೀಸಿ ಬೆಳಸ್ತೀನಿ. ನಮ್ಮ ದೇಶದಾಗ ಭ್ರಷ್ಟಾಚಾರ ಮಾಡಿರೋ ರಾಜಕಾರಣೀಗೆ ಶಿಕ್ಷೆ ಆಗೋದಿಲ್ಲ ಅಂತ ನಾನು ಚಾಲೆಂಜ್ ಮಾಡತೀನಿ. ನನಗ ಅಷ್ಟೊಂದು ವಿಶ್ವಾಸ ಐತಿ. ಒಂದವ್ಯಾಳೆ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರಿಗೆ ಶಿಕ್ಷೆ ಆದ್ರ ಅದು ದೇಶದಾಗ ಆಗೋ ದೊಡ್ಡ ಕ್ರಾಂತಿ! ಅಂತ ತಿಳಕೋಭೌದು.

"ಮೀಸಿ ಬೇಳಸ್ತೀನಿ" ಅಂತ ಹೇಳಿದ್ದಕ್ಕೆ ಒಂದು ಕಾರಣಾನೂ ಐತಿ. ನಮ್ಮ ದೇಶದಾಗ ಭ್ರಷ್ಟಾಚಾರ ಮಾಡಿದ ರಾಜಕಾರಣಿ ಕಮ್ ಕ್ರೀಡಾ ಆಡಳಿತಗಾರಂಗ ಶಿಕ್ಷೆ ಆತಲ್ಲಾ ಅಂತ ಹೆಮ್ಮೆ ಪಡೋದರ ಸಂಕೇತಾ ಅದು. ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರೀಗ ಶಿಕ್ಷೆ ಆಗಂಗಿಲ್ಲಾ ಅಂತ ನನ್ನ ಮನಸ್ಸು ಹೇಳತೈತಿ. ಅವ್ರು ತಪ್ಪು ಮಾಡ್ಯಾರೋ ಇಲ್ಲೋ ದೇವರಿಗೆ ಗೊತ್ತು. ತಪ್ಪು ಮಾಡ್ಯಾರಂತ ಮ್ಯಾಲೆನ ಎದ್ದು ಕಾಣಸ್ತೈತಿ. ಆದ್ರ ನಾನು-ನೀವು ಹೇಳಿದ್ರ ಸಾಕಾಕ್ಕೈತೇನು? ಇಲ್ಲಾ; ನಮ್ಮ ದೇಶದಾಗ ಕಾನೂನು ಅನ್ನೋದು ಒಂದೈತಿ. ಅದಕ್ಕ ತಲಿ ಬಾಗಾಕಬೇಕು.

ಆದ್ರ ಏನು ಮಾಡೋದು ನಮ್ಮ ದೇಶದಾಗ ಕಾನೂನು ಕೆಲ್ಸಾ ಎಷ್ಟು ಉದ್ದಕ ಏಳಿತೈತಿ ಅಂದ್ರ; ನನ್ನ ಮೀಸಿ ಅಷ್ಟೂ ಬೆಳ್ಳಗಾಗೋ ಹೊತ್ತಿಗಾರ ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರ ವಿಚಾರಣೆ ಎಲ್ಲಾ ಮುಗೀತೈತೋ ಇಲ್ಲೊ ಅಂತ ಗೊತ್ತಿಲ್ಲಾ! ಒಟ್ಟಿನಮ್ಯಾಗ ನಮ್ಮ ಕಾನೂನು ಅನ್ನೋ ಕಣ್ಣ ಮುಚ್ಚಿಕೊಂಡಿರೋ ದೇವರ ಕೈಯ್ಯಾಗಿನ ತಕ್ಕಡಿ ತೂಗಾಡಿ ನಿಲ್ಲೋದ್ರಾಗ ಏನೇನು ಆಗಿರತದೋ ಯ್ಯಾರಿಗೆ ಗೊತ್ತು?

ನಾನಂತೂ ನನ್ನ ನಿರ್ಧಾರಾನ ಬದಲು ಮಾಡಂಗಿಲ್ಲಾ; ಅದು ಎಷ್ಟಾರ ವರ್ಷಾ ಆಗಲಿ, ಸನ್ಮಾನ್ಯ ಶ್ರೀ ಸುರೇಶ್ ಕಲ್ಮಾಡಿ ಅವರ ತಪ್ಪು ಮಾಡ್ಯಾರ ಅಂತ ನ್ಯಾಯ ದೇವರು ಹೇಳಿ, ಶಿಕ್ಷೆ ಕೊಟ್ಟದಿನದಿಂದ ಒಂದು ತಿಂಗಳೊಳಗ ಮ್ಯಾಲಿರೋ ಚಿತ್ರದಾಗಿನ ಹಂಗ ಮೀಸಿ ಬೆಳಸ್ತೀನಿ. ಆಮೇಲೆ ಹೇಳತೀನಿ "ಇದು ನಮ್ಮ ದೇಶಾ; ಇಲ್ಲಿ ರಾಜಕಾರಣಿಗಳೂ ತಪ್ಪ ಮಾಡಿದ್ರ ಶಿಕ್ಷೆ ಆಕ್ಕೈತಿ" ಅಂತ. ಅಷ್ಟ ಅಲ್ಲ ದೇಶದ ಮ್ಯಾಗ ಹಾಗ ದೇಶದ ಕಾನೂನಿನ ಮ್ಯಾಗ ಭಾರಿ ಹೆಮ್ಮೆ ಪಟ್ಟಕೊಂಡು ಮೀಸಿನೂ ತಿರವತೀನಿ!

ನಾನು ಮೀಸಿ ಬೆಳಸಿ; ಮೀಸಿ ತಿರವೋಹಾಂಗ ಆಗಲಿ ಅಂತ ನೀವೆಲ್ಲಾರೂ ಕಂಡ ಕಂಡ ದೇವರಿಗೆಲ್ಲಾ ಕೈಮುಗುದು ಬೇಡಿಕೋಳ್ರಿ. ಅಷ್ಟ ನನ್ನ ಪ್ರಾರ್ಥನಾ...!