ಕರೆಂಟ್ ಕಂಬದಾಗ ತೂಗಿದ್ದ ಕುತ್ಬುದ್ದೀನ್ ಹೆಣಾ



ಕರೆಂಟ್ ಹೊಡೆಧಾಂಗ್ ಆಗಿ
ತ್ತು! ನನ್ನವ್ವನ ಕಣ್ಣಿನ್ಯಾಗ ದಳದಳಾ ಅಂತ ನೀರ್ ಸುರ್ದಿತ್ತು. ಮೈಯೆಲ್ಲಾ ನಡಗತಿತ್ತು; ಅವ್ವನ್ನಾ ಅಪ್ಪಿಕೊಂಡಿದ್ಲು "ಬೀಬಿ". ನಾವೆಲ್ಲಾ ಅವಳನ್ನ ಕರೀತಿದ್ದದ್ದ ಬೀಬಿ ಅಂತ. ನನಗ ಇನ್ನೂ ಗೊತ್ತಿಲ್ಲಾ ಅವಳ ಹೆಸ್ರು ಏನಾಗಿತ್ತು ಅಂತ. "ಬೀಬಿ" ಒಬ್ನ ಮಗಾ ಕುತ್ಬುದ್ದೀನ್ ಹೆಣಾ ಪೋಸ್ಟ್ ಮಾರ್ಟಮ್ ಕ್ವಾಣ್ಯಾಗ ಇತ್ತು. ಡಾಕ್ಟರು ಮತ್ತ ಪೊಲೀಸ್ರು ಯ್ಯಾವಾಗ ಅದನ್ನ ಹೊರಗ ಕೊಡತಾರ ಅಂತ ಕಾದಿದ್ದ ಬೀಬಿನ್ನ ಅಮ್ಮ ನಮ್ಮನೀಗೆ ಕರ್ಕೊಂಡ್ ಬಂದಿದ್ಳು.

"ಬೀಬಿ" ಕುತ್ಬುದ್ದೀನ್ ಹೆತ್ತವ್ವ. ಆದ್ರ ಕುತ್ಬುದ್ದೀನ್ ಸಣ್ಣವ್ನಿದ್ದಾಗಿಂದ ಬೆಳ್ದದ್ದು ನನ್ನವ್ವನ ನೆರಳಿನ್ಯಾಗ. ನಂಗೂ ಗೊತ್ತಿಲ್ಲ; ಕುತ್ಬುದ್ದೀನ್ ನಮ್ಮನೀಗೆ ಬಂದಿದ್ದು ಭಾಳ ಸಣ್ಣವಿದ್ದಾಗಂತ. ನಾವಿನ್ನೂ ಹುಟ್ಟಿರ್ಲಿಲ್ಲ. ನನ್ನವ್ವನ ಕುತ್ಬುದ್ದೀನಗ ಅಕ್ಕೋರು (ಶಿಕ್ಷಕಿ) ಹಾಗೂ ಅವ್ವಾ ಎರಡೂ. ನಂಗೂ ಒಂದಿಷ್ಟು ತಿಳ್ವಳಿಕಿ ಬರೋ ಹೊತ್ತಿಗೂ ಕುತ್ಬುದ್ದೀನ್ ನಮ್ಮನ್ಯಾಗ ಕೆಲ್ಸಾ ಮಾಡ್ಕೊಂಡಿದ್ದಾ.

ವಿಚಿತ್ರಾ ಅಂದ್ರ; ಅವ್ನು ಶಾಲಿಗೆ ಹೋಗಿರ್ರಿಲ್ಲಾ. ಓದಾಕ ಮತ್ತ ಒಂದಿಷ್ಟು ಬರಿಯ್ಯಾಕ ಕಲಿಸಿದ್ದ ಕೂಡ ನಮ್ಮ ಅವ್ವ. ನಮ್ಮ ಮನ್ಯಾಗ ಮರಾಠಿ ಸಂಪರ್ಕ ಜಾಸ್ತಿ ಅಂತ ನಮ್ಮ ಕಾಕಾನ ಮಕ್ಳೆಲ್ಲಾ ನನ್ನವ್ವನನ್ನ "ಕಾಕು" ಅಂತಾನ ಕರೀತಿದ್ರು. ಕುತ್ಬುದ್ದೀನನೂ ಕಾಕು ಅಂತಾನ ತನ್ನ ಸಾಕವ್ವನನ್ನ ಕರೀತಿದ್ದ. ಅವನ್ಗ ಅವನವ್ವ "ಬೀಬಿ" ವಿಸಿಟಿಂಗ್ ಅಮ್ಮ ಇದ್ದಹಾಂಗ. ಆಗೊಮ್ಮೆ ಈಗೊಮ್ಮೆ ಅವಾ ಕೆಲಸಾ ಮಾರಿದ್ದಕ್ಕ ಬರತಿದ್ದ ಪಗಾರಾ ತೊಗೋಳಾಕ ಬರತಿದ್ಳು.

ಕುತ್ಬುದ್ದೀನ್ ನಮ್ಮನ್ಯಾಗ ದೇವರ್ ಕಟ್ಟೀಯಿಂದಾ ಹಿಡಿದು ಎಲ್ಲ ಕಡ್ಯಾಗೂ ಕಸಾ ಹೊಡೆಯೋದು ಮತ್ತ ಒರಸೊ ಕೆಲಸಾ ಮಾಡತಿದ್ದ. ಆದರ ನಮ್ಮ ದೊಡ್ಡವ್ವ ಒಬ್ರು ಇದ್ರು ಅವ್ರು ಮಾತ್ರ ಕುತ್ಬುದ್ದೀನ್ ಮುಟ್ಟಿದ ಎಲ್ಲಾ ಬೊಬೋಣಿ ಮತ್ತ ತಾಟನ್ನ ಮತ್ತ ನೀರು ಸುರದ ಎತ್ತಿಕೋತಿದ್ದದ್ದು. ಆದ್ರ ನಮ್ಮವ್ವ "ಕಾಕು" ಯಾವಾಗ್ಲೂ ಹಾಂಗ ಮಾಡಿದ್ದು ನನಗ ನೆನಪಿಲ್ಲ.

ನಮಗ ಪೆಪ್ಪರಮಿಂಟು, ಚಾಕ್ಲೆಟು ಮತ್ತು ಬಫರ್್ ತಿನ್ನಾಕಂತ ರೊಕ್ಕಾ ಕೊಟ್ರ ಆಗ ಕುತ್ಬುದ್ದೀನಗೂ ಅಷ್ಟ ರೊಕ್ಕಾ ಕೊಟ್ಟು ಕಳಸ್ತಿದ್ಲು. ನೀನೂ ತಗೋ ಅಂತ. ಅದೊಂಥರಾ ವಿಚಿತ್ರವಾದ ಅವ್ವ-ಮಗನ ಸಂಬಂಧ! ಎಲ್ಲಾ ಜಾತಿ-ಧರ್ಮ ಮೀರಿದ ಮಮತೆ ಅದು. ಅವಾ ಯಾವಾಗ ಈ ಮಮತೆ ನೆರಳಿನಿಂದಾ ದೂರ ಆದ್ನೋ ಸಾವೂ ಅವನ್ನ ಹುಡಿಕ್ಕೊಂಡು ಬಂತು.

ಕುತ್ಬುದ್ದೀನ್ ಬೆಳಿತಿದ್ದಂಗ ಅವನ್ಕಡಿಂದ ಬೇರೆ ಕೆಲ್ಸಾ ಮಾಡಿಸ್ಬೇಕು; ಹೆಚ್ಚ ಪಗಾರಾ ಬರ್ತದ ಅಂತಾ "ಬೀಬಿ" ತನ್ನ ಮಗಾ ಕುತ್ಬುದ್ದೀನ್ನ ನಮ್ಮನೀಂದ ಕರ್ಕೊಂಡು ಹೊದ್ಲು. ಮತ್ತ ಅವಳ ಬಂದಿದ್ದ ತನ್ನ ಮಗಾ ಸತ್ತ ಅಂತಾ ಸುದ್ದಿ ಹೇಳೋದಕ್ಕ.

ಅವತ್ತ ಆ ಸುದ್ದಿ ಕೇಳಿದ್ದ ತಡಾ ನಮ್ಮವ್ವ ಇದ್ದ ಸೀರೆಯಲ್ಲೆ ಎದ್ದು ಓಡಿದ್ದಳು. ತನ್ನದೇ ಮಗಾ ಸತ್ತಾನೇನೋ ಅನ್ನೊಹಾಂಗ. ಅವತ್ತು "ಬೀಬಿ" ಅತ್ತದ್ದಕ್ಕಿಂತ ನಮ್ಮವ್ವ ಅತ್ತಿದ್ದ ಹೆಚ್ಚು. "ಬೀಬಿ"ನ ನಮ್ಮವ್ವನ್ನ ಸಮಾಧಾನ ಮಾಡತಿದ್ಳು.

ಆಗ ನನಗ ಒಂದಿಷ್ಟು ವಿಷಯಗಳು ಅರ್ಧ ಆಗೊವಷ್ಟು ವಯಸ್ಸಾಗಿತ್ತು. ಕರೆಂಟ್ ಕಂಬದ ತಂತೀಗೆ ಅಂಟಿಕೊಂಡಿದ್ದ ಕುತ್ಬುದ್ದೀನ್ ಹೆಣಾನ ಪೊಲೀಸ್ರು ತಗಿತಿದ್ರು. ಬ್ಯಾಡ ಅಂದ್ರೂ ನಾನೂ ಅವ್ವನ ಜೊತೀಗ ಅಲ್ಲಿಗೆ ಹೋಗಿದ್ದೆ. ಅಲ್ಲಿ ಗುಂಪಿನ್ಯಾಗ ಇದ್ದವ್ರು ಮಾತಾಡ್ತಿದ್ರು "ಕೊಲೆ ಮ್ಯಾಡಿ ಹಾಕ್ಯರ" ಅಂತ.

ಕುತ್ಬುದ್ದೀನ್ ಹೆಚ್ಚಿನ ಪಗಾರಕ್ಕ ಕೆಲಸಕ್ಕ ಸೇರಿದ್ದ ಫ್ಯಾಕ್ಟರಿ ಮಾಲೀಕನ ಇದನ್ನ ಮಾಡಿಸಿದ್ದು ಅಂತಾ ಎಲ್ಲಾರೂ ಅಂದುಕೋತಿದ್ರು. ಆದ್ರ ಪೊಲೀಸ್ರು ಮಾತ್ರ ಕರೆಂಟ್ ಹೊಡದು ಸತ್ತಾನ ಅಂತ ಹೇಳಿದ್ರು. ಕೊನೀಗ ಹೆಣಾನ ಪೋಸ್ಟ್ ಮಾರ್ಟಮ್ ಮಾಡಿಸ್ಕೊಂಡು ಅಲ್ಲಿಂದನ ಸ್ವಶಾನಕ್ಕ ಹೋದ್ರು. ಕುತ್ಬುದ್ದೀನ್ ಹೆಣಾನ ಹಸಿರು ಚಾದರ್ ಹೊದಿಸಿದ ಹೂವಿನ ಬುಟ್ಟಿಯಂಥಾ ತೊಟ್ಟಿಲಿನ್ಯಾಗ ತಗೊಂಡ ಹೋದ್ರು. ನಾನೂ ಹೆಣದ ಜೊತೆಗೆ ಹೊದವ್ರು ದೂರದ ರಸ್ತೆಯಲ್ಲಿ ಮರಿಯಾಗೋವಗ್ರೂ ನೋಡಿದೆ.

ಕುತ್ಬುದ್ದೀನ್ ಅಲ್ಲಿಗೆ ನನ್ನ ಕಣ್ಣಿನಿಂದ ಮರಿಯಾಗಿ ಹೋದ; ಆದ್ರ ನೆನಪಿನ ಪುಟದಾಗ ಇನ್ನೂ ಗಟ್ಟಿಯಾಗ್ಯಾನ. ಯಾರಾದ್ರು ಜಾತಿ ಬಗ್ಗೆ ಇಲ್ಲದ್ದೆಲ್ಲಾ ಮಾತಾಡಿದಾಗೆಲ್ಲಾ ನಾನು ನೆನಪಿಸ್ಕೊಳ್ಳೊದು "ಕುತ್ಬುದ್ದೀನ್" ಮತ್ತ ನನ್ನವ್ವ "ಕಾಕು" ನಡುವೆ ಇದ್ದ ವಿಶಿಷ್ಟವಾದ ತಾಯಿ ಮತ್ತು ಮಗನ ಸಂಬಂಧಾನ!