ಸಣ್ಣಗ ಆಗ್ತಾಳಂತ ನನ್ನ ಅಮ್ಮಣ್ಣಿ...!


ಅದೇನೋ ಹೊಸ ಭೂತ ಹೊಕ್ಕೈತಿ ನಮ್ಮಾಕಿ ಮೈಯಾಗ! ಮುಂಜ್ಯಾನೆ, ಮಧ್ಯಾಣ, ಸಂಜಿಗೆ ಒಂದೇ ರಾಗ... "ನನಗೊಂದು ಟಾರ್ಗೆಟ್ ಇದೆ; ಸ್ಲಿಮ್ ಆಗ್ಬೇಕು..." ಅಂತ ಬಡಬಡಸ್ತಾ ಇರ್ತಾಳ.

"ನೋಡ್ತಿರಿ ನಾನು ಸಣ್ಣಗೆ ಆಗಿ ತೋರಿಸ್ತೀನಿ" ಅಂತ ಬೆಂಗ್ಳೂರ್ ಧಾಟಿನ್ಯಾಗ ಅದ ರಾಗ-ಅದ ಹಾಡು ಹಾಡ್ತಿರ್ತಾಳ. ಕನ್ನಡಿ ಮುಂದ ನಿಂತ್ಕೊಂಡು ನನ್ನ ಅಮ್ಮಣ್ಣಿ ಹೇಳ್ತಾಳ "ನೋಡಿ ನಾನು ಸಣ್ಣಗಾಗ್ತಿದ್ದೀನಿ. ಮುಖಾ ಸ್ವಲ್ಪ ಸಣ್ಣಗೆ ಆಗಿಲ್ವಾ" ಅಂತ ಅದೇ ಹಳೆ ತಂಬೂರಿಯ ಹರದಹೋದ ತಂತಿ ಎಳಿತಾಳ.

ಮಜಾ ಅಂದ್ರ ಒಂದ ವಾರದಿಂದ ಭಾರಿ ಡಯಟಿಂಗ್ ಮಾಡಾಕ ಶುರುವು ಹಚ್ಕೊಂಡಾಳ. ಅವಳ ಡಯಟಿಂಗ್ ಮಾಡೊದಕ್ಕ; ನನಗೂ ಶಿಕ್ಷೆ. "ನೀವು ವೀಟ್ ಬ್ರೆಡ್ ತಿನ್ನಬೇಕು..." ಎಂದು ತಾಕೀತು ಬ್ಯಾರೆ ಮಾಡ್ತಾಳ. ನಮ್ಮೂರಾಗಿನ ನಾಯಿಗೆ ಹಾಕಿದ್ರೂ ತಿನ್ನೋದಿಲ್ಲಾ; ಅಂಥಾ ಬ್ರೆಡ್ ಅದು. ಬೆಳಿಗ್ಗೆ ವೀಟ್ ಬ್ರೆಡ್, ಮಧ್ಯಾಹ್ನ ವೀಟ್ ಬ್ರೆಡ್, ರಾತ್ರಿ ವೀಟ್ ಬ್ರೆಡ್...! ನಂಗಂತೂ ಭೂಮಿ ಮ್ಯಾಲೆ ನರಕ ನೋಡಿದ್ಹಾಂಗ ಆಗೈತಿ.

ಏನರ ತಿಂದ್ರೂ ಕ್ಯಾಲರಿ ಲೆಕ್ಕಾಚಾರ. "ಬ್ಯಾಡ್ ಯಾಕ ನಿನ್ನ ಹೂವಿನಂಥ ಮೈಗೆ ಕಷ್ಟಾ ಕೊಡ್ತಿ ನನ್ನ ಚಿನ್ನಾ..." ಅಂತ ನಾನೇನಾರ ಅಂದ್ರ ಅದಕ್ಕ ಉತ್ತರ ಸಿಗೋದು ಹಿಂಗ "ನಿಮಗ ಹೊಟ್ಟೆ ಉರಿ". ಆಕಿ ಕಂಠಪೂರ್ತಿ ಕೆಂಡಾ ತುಂಬಿಕೊಂಡ್ ನನ್ನ ಮ್ಯಾಗ ಸಿಡುದು ಬೀಳ್ತಾಳ. ಅದಕ್ಕ ಆಕಿ ಡಯಟಿಂಗ್ ಅನ್ನ ಸಹಿಸ್ಕೊಂಡೀನಿ!

ಆಕಿ ತನ್ನ ಮೈ ಕರಗಸಾಕ ಮಾಡಾಕಹತ್ತಿರೊ ಕಸರತ್ತನ್ನ ನೋಡಿ ಅಯ್ಯೋ ಅನಸ್ತದ! ಆದ್ರ ಈ ಸ್ಲಿಮ್ ಆಗೋ ಕಸರತ್ತನ್ನ ಆಕಿ ಎಷ್ಟರಮಟ್ಟಿಗೆ ನೆಟ್ಟಗ ಮಾಡ್ತಾಳ ಅಂತ ನಾನೂ ಮೂಕ ಬಸಪ್ಪನಹಾಂಗ ನೋಡ್ತಿರ್ತಿನಿ.

ಮಜಾ ಅಂದ್ರ ಇವತ್ತ ಮನ್ಯಾಗ ಒಂದು ದೊಡ್ಡ ಚಾರ್ಟ್ ಕಾಣಿಸ್ತು. ಅದರಾಗ ಒಂದು ಪಾಂಯಿಂಟ್ ಮಜಾ ಇತ್ತು. "ಅರ್ಲಿ ಮಾರ್ನಿಂಗ್ ಏಳೋದು" ಅಂತ ಬರದು ಅದರ ಮುಂದ ಟಾಯಮ್ ಹಾಕಿದ್ದು "9.00 ಎ.ಎಂ" ಅಂತ!

ಅದನ್ನ ನೋಡಿ ನಾ ನಕ್ಕದ್ದು ನನ್ನ ಅಮ್ಮಣ್ಣಿಗೆ ಕೇಳಿಸೇಬಿಡ್ತು. ಅದಕ್ಕ ಕೂಡ ನನ್ನ ಮ್ಯಾಲೆ ಮತ್ತ ಕೆಂಡದ ಮೋಡಾ ಕಟ್ಟಿ ಬೆಂಕಿ ಮಳಿ ಸುರಸ್ಬೇಕಾ! ನಾ ಆಫಿಸ್ನಿಂದ ಬರೋದ ತಡಾ ಆಗ್ತದ, ರಾತ್ರಿ ಮಲಗೋದು ಭಾಳ ತಡಾ... ಮುಂಜಾನ್ಯಾಗ ಗಡಾನ ಏಳೋದು ಹ್ಯಾಂಗ ಅನ್ನೋ ದೊಡ್ಡದೊಂದು ಕಂಪ್ಲೇಂಟ್ ಪಟ್ಟೀನ ಆಕಿ ನನ್ನ ಮುಂದಿಡಬೇಕಾ...!

"ಹೌದು; ನನಗೆ ಅರ್ಲಿ ಮಾರ್ನಿಂಗ್ ಅಂದರೆ 9.00 ಎ.ಎಂ" ಅಂತಾ ಮುಖಾನ ಮೂರಕಟ್ಟಿ ರಸ್ತೆಹಾಂಗ ತಿರಗಿಸಿದ್ಳು. ಇಡಿ ದಿನಾ ಅದ ವಿಷಯಕ್ಕ ಮಾತೂ ಆಡ್ಳಿಲ್ಲಾ. ನಾನು ಬೇಂದ್ರೆ ಮಾಸ್ತರ ಹಾಡಿದಂಗ "ನೀ ಹಿಂಗ ನೋಡಬ್ಯಾಡ ನನ್ನ..." ಅನ್ನೋಹಂಗ ನೋಡಿದ್ರ; ಆಕಿದ್ದು ಕಣ್ಣಿನ್ಯಾಗ "ಹೊಡಿ ಮಗಾ ಹೊಡಿ ಮಗಾ...ಬಿಡಬೇಡ ಅವನ್ನ..." ಅನ್ನೋ ಹಾಡು!

ಅದಕ್ಕ ಯ್ಯಾಕ್ ಬೇಕು ಸಹವಾಸ ಅಂತ; ಆಕಿನ್ನ ಡಯಟಿಂಗ್ ಪಾಡಿಗೆ ಬಿಟ್ಟು, ನಾನು ಏನೂ ನೋಡೇ ಇಲ್ಲ ಅನ್ನೋಹಾಂಗ ಉಣಕಲ್ ಸಿದ್ದಪ್ಪಜ್ಜನ ಹಾಂಗ ತೆಪ್ಪಗ ಕುಳತಿರ್ತಿನಿ.

ಆದ್ರೂ "ಅರ್ಲಿ ಮಾರ್ನಿಂಗ್ 9.00 ಎ.ಎಂ." ಅನ್ನೋದನ್ನ ನೆನಿಸಿಕೊಂಡು ಮನಸಿನ್ಯಾಗ ನಗ್ತಿರ್ತೀನಿ!

ನನ್ನ ಅಮ್ಮಣ್ಣಿಯ ಡಯಟಿಂಗ್ ಭೂತ ಗಡಾನ ಇಳದ್ ಹೋಗ್ಲಿ ಅಂತಾ ಮನಸಿನ್ಯಾಗನ ಕಾಣದ ಮತ್ತ ನಂಬದ ದೇವರನ್ನ ಬೇಡಿಕೋತೀನಿ. ಯಾಕಂದ್ರ "ಹೆಂಡ್ತಿ ಡಯಟಿಂಗಿನ್ಯಾಗ ಗಂಡಾ ಬಡವಾದ" ಅನ್ನೋ ಹೊಸಾ ಗಾದಿಮಾತು ಹುಟ್ಟಬಾರ್ದು ಅನ್ನೋದ ನನ್ನ ಆಸೆ ಆಗ್ಯದ.