ಕಲ್ಕೇರಿ ಕಟ್ಟಿಮ್ಯಾಗೊಂದು "ಸೂಪರ್ ಹಿಟ್" ಜಗಳಾ...!


ಕಲ್ಕೇರಿ ಕಗ್ಗಾರ ಹಳ್ಳಿ. ಮುಂಡರಿಗಿ ತಾಲ್ಲೂಕಿಂದಾ ಒಂದಿಷ್ಟು ದೂರದಾಗ ಐತಿ. ಆ ಹಳ್ಳಿನ್ಯಾಗ ಒಂದು ಮಧ್ಯಾಣ ಭಾರಿ ಜಗಳಾ ನಡದಿತ್ತು. ಅದೂ ಅವ್ವಾ ಮತ್ತ ಮಗನ ಸಂಗಾಟ ಜಗಳ ಅದು. ಆಕಡಿಗ ಅವ್ವಾ ಮಗನ ನಡುವ ಜಗಳಾ ನಡದಿದ್ರ; ಅಪ್ಪಾ ಮಾತ್ರ ನಂಗೇನು ಸಂಬಂಧಾ ಇಲ್ಲ ಅನ್ನೋ ಹಾಂಗ ಕಲ್ಲಿನಾಂಗ ಕುಂತಿದ್ದ.

ಸಣ್ಣ ಹಳ್ಳಿ ಅಂದಮ್ಯಾಗ ಮನಿ ಮನಿ ಜಗಳಾನೂ ನೋಡಾಕ ಭಾರಿ ಜನಾ ಸೇರತಾರ. ಅವತ್ತೂ ಹಾಂಗ ಆಗಿತ್ತು. ಯಾಕ್ ಜಗಳಾಡಾಕ ಹತ್ಯಾರ ಅನ್ನೋದು ಯ್ಯಾರಿಗೂ ಗೊತ್ತಾಗಲಿಲ್ಲ. ಆದ್ರ ಮನಿ ಜಗಳಾ ಪಡಸಾಲಿ ದಾಟಿ, ಮನಿ ಕಟ್ಟಿಮ್ಯಾಗ ಬಂದಮ್ಯಾಗನ ಜನಾ ಸೇರಿದ್ರು. ಅದಕ್ಕ ಯ್ಯಾರಿಗೂ ಅದ್ಯಾಕ ಜಗಳಾ ಅಂತ ಯ್ಯಾರಿಗೂ ಗೊತ್ತಾಗಲಿಲ್ಲ.

ಮಗಾ ಹಿಗ್ಗಾಮುಗ್ಗಾ ಧ್ವನಿ ಮ್ಯಾಡಿ ಮಾತಾಡ್ತಿದ್ದ. ಅವನ ಅವ್ವಾನೂ ಅಷ್ಟ ದೊಡ್ಡ ಧನಿ ಮಾಡಿ ಕಿರಚಾಗ ಹತ್ತಿದ್ಲು. ಅಪ್ಪ ಮಾತ್ರ ಕಟ್ಟಿಮ್ಯಾಗ ಕುಂತ್ಕೊಂಡು ಸಣ್ಣಗ ನಗತಿದ್ದಾ. ತನ್ನ ಪಾಡಿಗೆ ತಾನು ಅಡಕತ್ತರಿ ಹಿಡಿದು ಅಡಕಿ ಕತ್ತರ್ಸಿ, ಎಲಿ-ಅಡಕಿ ಜಗ್ಯಾಗ ಹತ್ತಿದ್ದ.

ಹಿಂಗ ಸುಮಾರ್ ಹತ್ತ ನಿಮಿಷ ಜಗಳಾ ನಡೀತು. ಒಂದ್ ಹಂತಕ್ಕ ಮಗಗ ಸಿಟ್ಟು ನೆತ್ತಿಗೇರಿತು. ಊರವರಿಗೆಲ್ಲಾ ಕೇಳೋಹಂಗ "ಏ ನಿನ್ನ ಔವನ..." ಅಂತ ಬೈದಾ. ತನ್ನ ಅವ್ವಗ ಮಗಾ ಹಿಂಗ್ ಬೈದದ್ದು ಎಲ್ಲಾರಿಗೂ ಆಘಾತ. ಆದರೂ ಜನಾ ಮಾತ್ರ ಬೈದದ್ದನ್ನ ಏನೂ ಗಂಭೀರಾಗಿ ತೊಗಳದನ, ಜಗಳದ ಮಜಾ ತೊಗಾಳಕ ಹತ್ತಿದ್ರು.

ಮಗಾ ತನಗ "ಏ ನಿನ್ನ ಔವನ..." ಅಂತ ಬೈದಾ ಅಂತ ಅವ್ವಾ ಭಾರಿ ಧ್ವನಿ ಮಾಡಿ, ತನ್ನ ಗಂಡನ ಕೋಡೀಗೆ ದೂರು ತಗೊಂಡು ಹೋದ್ಲು. ಆವಾಗೂ ಆ ಹುಡಗನ ಅಪ್ಪಾ ಮಾತ್ರ ತೆಪ್ಪಗ ಕುಳತಿದ್ದಾ.

ಆದ್ರೂ ಅವ್ವಾ ತನ್ನ ಗಂಡನ ಮುಂದೆ ದೊಡ್ಡ ಧ್ವನಿನ್ಯಾಗ ಹೇಳಿದ್ಳು "ನೋಡ್ರಿ ನಿಮ್ಮ ಮಗಾ ನನಗ ನಿನ್ನ ಔವನ... ಅಂತ ಬೈತಾನ" ಅಂತ ದೂರಿದ್ಳು.

ಅದಕ್ಕ ಅಪ್ಪಾ ತುಂಟ್ ನಗಿಯೊಳಗ ಮಗನ ಕಡಿಗೆ ನೋಡಿ "ಲೇ ಯಾಕಲೇ ನಿಮ್ಮ ಅವ್ವಗ ನಿನ್ನ ಔವನ... ಅಂತ ಬೈದಿ?" ಅಂಥೇಳಿ ತಾನೇನು ದೊಡ್ಡ ನ್ಯಾಯ ತಿರ್ಮಾನ ಮಾಡೋ ನ್ಯಾಯಾಧೀಶಾ ಅನ್ನೋ ಹಾಂಗ ಕಾಲ ಮ್ಯಾಲೆ ಕಾಲ್ ಹಾಕ್ಕೊಂಡು ಕುಳತಾ.

ಆಗಲೂ ಮಗಾ ಏನು ಉತ್ತರಾ ಕೊಡಲಿಲ್ಲಾ. ಮತ್ತ ಅಪ್ಪಾ "ಲೇ ಯಾಕಲೇ ನಿಮ್ಮ ಅವ್ವಗ ನಿನ್ನ ಔವನ... ಅಂತ ಬೈತೀದಿ?" ಅಂತಾ ಜೋರು ಮಾಡಿ ಕೇಳಿದಾ.

ಅದಕ್ಕ ಮಗನ ಉತ್ತರಾ "ಏ ನಿಮ್ಮಾಪನ... ನೀ ಸುಮ್ಕ ಕುಂತ್ಕೋ...!" ಅಂತ ಗತ್ತಿನ್ಯಾಗ ಹೇಳಿದ.

ಅಪ್ಪನ ಮುಖಾ ಇಂಗ್ ತಿಂದ್ ಮಂಗ್ಯಾನ ಹಾಂಗ್ ಆತು. ಏನು ಮಾಡಬೇಕು ಅಂತನ ಗೊತ್ತಾಗ್ಲಿಲ್ಲಾ. ಜಗಳಾ ನೋಡಾಕತ್ತಿರೋ ಜನಾನೂ ಗೊಳ್ಳಂತ ನಕ್ರು.

ಅಪ್ಪಗ ಒಂಥಾರಾ ಆತು. ಅಲ್ಲಿವರಿಗ ಸರಪಂಚನ ಹಾಂಗ ಕುಂತಾವ. ಪೆದ್ದ ನಗಿ ನಕ್ಕು ತನ್ನ ಹೆಂಡ್ತಿಗೆ ಹೇಳಿದ "ನೋಡು ನಿನ್ನ ಔವ್ವನ್ನ ಮಾತ್ರ ಅಲ್ಲಾ ನನ್ನ ಅಪ್ಪನ್ನೂ ಸೇರಿಸಿ ಬೈತಾನ" ಅಂತ ಮೆತ್ತನ ಧನಿನ್ಯಾಗ ಹೇಳಿದ.

ಆವಾಗ ಜನರೀಗ ಇನ್ನೂ ನಡಿ. ಗಂಡಾ ಹಾಂಗ ಹೇಳಿದ ರೀತಿ ನೋಡಿ ಹೆಂಡ್ತಿನೂ ನಕ್ಕಳು. ಅಲ್ಲಿಗ ಕಲ್ಕೇರಿ ಕಟ್ಟೀನ್ಯಾಗ ನಡೀತಿದ್ದ ಜಗಳಾ ಹಾಸ್ಯ ಪ್ರಸಂಗಾ ಆಗಿ ಮೂಗೀತು. ಮಜಾ ಅಂದ್ರ ಊರಾಗಿನ ಜನಾ ಆ ಜಗಳಾನ ಭಾಳ ದಿವಸಾ ನೆನಪು ಇಟ್ಟುಕೊಂಡ್ರು.

ಎಲ್ಲ್ಯಾರ ನಾಲ್ಕು ಜನಾ ಕುಂತು ಮಾತಾಡತಿದ್ರ; ಒಮ್ಯಾರ ಆ ಜಗಳದ ವಿಷಯಾ ಬರತಿತ್ತು. ಅದನ್ನ ನೆನಪಿಸಿಕೊಂಡು ನಗತಿದ್ರು. ಅದಕ್ಕ ಹೇಳಿದ್ದು ಇದನ್ನ "ಸೂಪರ್ ಹಿಟ್" ಜಗಳಾ ಅಂತ!